ಬಳ್ಳಾರಿ: ಸಂಡೂರು ತಾಲೂಕಿನ ಸ್ವಾಮಿಮಲೈ ವಲಯದ ‘ಹದ್ದಿನಪಡೆ’ ಬ್ಲಾಕ್‌ನ ದಟ್ಟ ಅರಣ್ಯದಲ್ಲಿ ಗಣಿಗಾರಿಕೆ ಮಾಡಲು ಕುದುರೆಮುಖ ಐರನ್ ಓರ್ ಕಂಪನಿ ಲಿಮಿಟೆಡ್ (ಕೆಐಒಸಿಎಲ್) ಸಂಸ್ಥೆ ಉದ್ದೇಶಿಸಿದೆ. ಇದಕ್ಕಾಗಿ 1,074.24 ಎಕರೆ (434.73 ಹೆಕ್ಟೇರ್) ಅರಣ್ಯ ಪ್ರದೇಶದಲ್ಲಿ ಅದಿರು ಪತ್ತೆ ಮಾಡಲು ಬಯಸಿದೆ.
ಅದಿರು ಸಮೀಕ್ಷೆಗೆ ಅನುಮತಿ ಕೋರಿ ಈ ವರ್ಷ ಜನವರಿ 8ರಂದು ಅರಣ್ಯ ಇಲಾಖೆಗೆ ಪತ್ರ ಬರೆದ ಸಂಸ್ಥೆಯು 2023ರ ಡಿಸೆಂಬರ್‌ನಲ್ಲೇ ನಿರ್ದಿಷ್ಟ ಪ್ರದೇಶದ ಭೌಗೋಳಿಕ ನಕ್ಷೆ ಮತ್ತು ಭೌತಿಕ ಗಡಿರೇಖೆಗಳನ್ನೂ ಸಿದ್ಧಪಡಿಸಿಕೊಂಡಿದೆ. ಅದಿರಿನ ಪ್ರಮಾಣ ಪತ್ತೆ ಮಾಡಲು 4 ಅಂಗುಲದ 9 ಬೋರ್ ಹೋಲ್ (ಕೊಳವೆ) ಕೊರೆಯಲು ಉದ್ದೇಶಿಸಿದೆ. ಈ ಕುರಿತ ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.
‘ವಿಳಂಬ ಮಾಡದೇ ಸಮೀಕ್ಷೆಗೆ ಅನುಮತಿ ನೀಡಬೇಕು’ ಎಂದು ಹೇಳಿರುವ ಸಂಸ್ಥೆಯು ಅದಕ್ಕಾಗಿ ಕಾಯ್ದೆ, ಕಟ್ಟಳೆಗಳನ್ನೂ ಪ್ರಸ್ತಾಪಿಸಿದೆ. ‘ಅರಣ್ಯದಲ್ಲಿ ಯಾವ ಮರವನ್ನೂ ಕೆಡವದೇ, ಅನ್ವೇಷಣೆ, ಪರಿಶೋಧನೆ ಅಥವಾ ಸಮೀಕ್ಷೆ ಕಾರ್ಯ ನಡೆಸಲು, 10 ಚದರ ಕಿಲೋಮೀಟರ್ ಪರಿಮಿತಿಯಲ್ಲಿ 4 ಅಂಗುಲದ 25 ಕೊಳವೆಗಳನ್ನು ಕೊರೆಯಲು ‘ಅರಣ್ಯ (ಸಂರಕ್ಷಣೆ) ಕಾಯಿದೆ–1980’ರ ನಿಬಂಧನೆಗಳು ಅನ್ವಯಿಸುವುದಿಲ್ಲ‘ ಎಂದು ತಿಳಿಸಿದೆ.
ಆದರೆ, ಸಮೀಕ್ಷೆ ವೇಳೆ ರಸ್ತೆ ನಿರ್ಮಾಣ, ಕೊಳವೆಗಳನ್ನು ಕೊರೆಯಲು ಅಲ್ಪ ಪ್ರಮಾಣದ ಅರಣ್ಯ ನಾಶವಾಗಲಿದೆ ಎಂದು ಸ್ವತಃ ಸಂಸ್ಥೆಯೇ ಪತ್ರದ ಕೊನೆಯಲ್ಲಿ ಉಲ್ಲೇಖಿಸಿದೆ.
ಈ ಮಧ್ಯೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯು 2023–24ನೇ ಸಾಲಿನ ವರದಿಯಲ್ಲಿ ಹದ್ದಿನಪಡೆ ಬ್ಲಾಕ್‌ನಲ್ಲಿ ಖನಿಜ ಸಂಪತ್ತಿನ ಶೇಖರಣೆ ಇದೆ ಎಂದು ಅಧಿಕೃತವಾಗಿ ಪ್ರಕಟಿಸಿದೆ.
‘ಅನುಮತಿ ಕೋರಿದ್ದು ಕೇಂದ್ರ ಸರ್ಕಾರದ ಸಂಸ್ಥೆ. ಗಣಿಗಾರಿಕೆಗೆ ಅನುಮತಿ ನೀಡುವುದು ಕೇಂದ್ರದ ಅರಣ್ಯ ಮತ್ತು ಪರಿಸರ ಇಲಾಖೆ. ಇಂಥ ವಿಷಯದಲ್ಲಿ ಕರ್ನಾಟಕ ಅರಣ್ಯ ಇಲಾಖೆ ಪಾತ್ರ ನಗಣ್ಯ. ನಮ್ಮಿಂದ ಸಂಪದ್ಭರಿತ, ಜೀವವೈವಿಧ್ಯದ ತಾಣಕ್ಕೆ ಪ್ರತಿಯಾಗಿ ಬರಡು ಭೂಮಿ ಪರಿಹಾರವಾಗಿ ಕೊಡಲಾಗುತ್ತದೆ. ಅಲ್ಲಿ ಗಿಡ, ಮರ ಬೆಳೆಸಬಹುದು. ಆದರೆ, ಅರಣ್ಯ ನಾಶದಿಂದ ವನ್ಯಜೀವಿಗಳು ಸಂತ್ರಸ್ತವಾಗುತ್ತವೆ. ಅವುಗಳ ಪಾಡೇನು? ಇದಕ್ಕೆ ಯಾರ ಬಳಿಯೂ ಉತ್ತರವಿಲ್ಲ’ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
ಸಂಡೂರು ಅರಣ್ಯದ ಹದ್ದಿನಪಡೆ ಬ್ಲಾಕ್‌ನಲ್ಲಿನ ಖನಿಜ ಸಂಪತ್ತಿನ ಸಮೀಕ್ಷೆಗೆ ಅನುಮತಿ ಕೋರಿ ಕೆಐಒಸಿಎಲ್ ಪ್ರಸ್ತಾವ ಸಲ್ಲಿಸಿದ್ದು ನಿಜ. ಅದರ ಪರಾಮರ್ಶೆ ನಡೆದಿದೆ. ಸದ್ಯ ಯಾವುದೂ ನಿರ್ಧಾರವಾಗಿಲ್ಲ.– ಸಂದೀಪ್ ಸೂರ್ಯವಂಶಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಳ್ಳಾರಿ
ಸಮೀಕ್ಷೆಗೆ ಯಾವುದೇ ಕ್ಷಣ ಅನುಮತಿ ಸಿಗಬಹುದು. ಅದಿರು ಸಿಗದೇ ಕಂಗೆಟ್ಟ ಕೆಐಒಸಿಎಲ್ ವಿಐಎಸ್‌ಎಲ್‌ನಂಥ ಸಂಸ್ಥೆಗಳು ನಮ್ಮಲ್ಲಿನ ಸಂಪತ್ತಿಗೆ ಕೈ ಹಾಕುವುದು ಯಾವ ನ್ಯಾಯ–ಟಿ.ಎಂ.ಶಿವಕುಮಾರ್ ಉಪಾಧ್ಯಕ್ಷ ಜನಸಂಗ್ರಾಮ ಪರಿಷತ್ ರಾಜ್ಯ ಘಟಕ
ಭದ್ರಾವತಿಯ ವಿಶ್ವೇಶ್ವರಾಯ ಕಬ್ಬಿಣ ಹಾಗೂ ಉಕ್ಕಿನ ಕಾರ್ಖಾನೆಗೆ (ವಿಐಎಸ್‌ಎಲ್) ಅದಿರು ಪೂರೈಸುವ ಗಣಿಗಾರಿಕೆಗಾಗಿ ಸಂಡೂರು ತಾಲ್ಲೂಕಿನ 150 ಎಕರೆ ದಟ್ಟ ಅರಣ್ಯದ 29400 ಮರಗಳನ್ನು ಕಡಿಯುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತವಾಗಿದೆ. ‘ಪಶ್ಚಿಮ ಘಟ್ಟಗಳ ಜೀವವೈವಿಧ್ಯ ರಕ್ಷಣೆಗಾಗಿ ಭದ್ರಾವತಿ ಕುದುರೆಮುಖದಲ್ಲಿ ಗಣಿಗಾರಿಕೆಗೆ ನಿಷೇಧ ಇದೆ. ಅದಕ್ಕೆ ಎಲ್ಲರ ಕಣ್ಣು ಬಳ್ಳಾರಿ ಮೇಲಿದೆ. ಮಲೆನಾಡಿನ ಕೈಗಾರಿಕೆಗಳಿಗೆ ಅದಿರು ಪೂರೈಸಲು ಬಯಲುಸೀಮೆಯ ಕಿರು ಅರಣ್ಯಗಳಲ್ಲಿ ಗಣಿಗಾರಿಕೆ ಮಾಡುವ ಅಗತ್ಯವಿದೆಯೇ‘ ಎಂಬ ಪ್ರಶ್ನೆಗಳನ್ನು ಕೆಲವರು ಕೇಳಿದ್ದಾರೆ. ಮರಗಳ ಹನನ ಕುರಿತು ಫೆಬ್ರುವರಿ 9ರ ‘ಪ್ರಜಾವಾಣಿ’ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.