ADVERTISEMENT

ಅರಣ್ಯ ಭೂಮಿ ಹಸ್ತಾಂತರಕ್ಕೆ ತಡೆ: ಕೆಐಒಸಿಎಲ್‌ ವಿರುದ್ಧ ದೂರುಗಳ ಪ್ರಸ್ತಾಪ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 23:30 IST
Last Updated 22 ಜೂನ್ 2024, 23:30 IST
ಈಶ್ವರ ಖಂಡ್ರೆ 
ಈಶ್ವರ ಖಂಡ್ರೆ    

ಬಳ್ಳಾರಿ: ಜಿಲ್ಲೆಯ ಸಂಡೂರು ತಾಲ್ಲೂಕಿನ ಸ್ವಾಮಿಮಲೈ ಬ್ಲಾಕ್‌ನ ದೇವದಾರಿ ಶ್ರೇಣಿಯ ಅರಣ್ಯ ಜಮೀನನ್ನು ಕುದುರೆಮುಖ ಕಬ್ಬಿಣದ ಅದಿರು ಕಂಪನಿಗೆ (ಕೆಐಒಸಿಎಲ್‌) ಹಸ್ತಾಂತರ ಮಾಡದಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ. 

ಈ ಕುರಿತು ಶುಕ್ರವಾರ ಪತ್ರ ಬರೆದಿರುವ ಅವರು, ‘ಕೆಐಒಸಿಎಲ್ ಕಂಪನಿಯು ದೇವದಾರಿ ಶ್ರೇಣಿಯ 401.5761 ಹೆಕ್ಟೇರ್ ಅರಣ್ಯ ಜಮೀನಿನಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ನಡೆಸಲು ಅರಣ್ಯ ತೀರುವಳಿ ಪಡೆದಿದೆ. ಸದ್ಯ, ಅರಣ್ಯ ತೀರುವಳಿ ಗುತ್ತಿಗೆ ಪತ್ರಕ್ಕೆ ಸಹಿ ಮತ್ತು ಜಮೀನು ಹಸ್ತಾಂತರ ಬಾಕಿ ಇದೆ’ ಎಂದು ತಿಳಿಸಿದ್ದಾರೆ.

‘ಗಣಿಗಾರಿಕೆ ಮಾಡುವಾಗ ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ಕೆಐಒಸಿಎಲ್‌ ಕಂಪನಿಯಿಂದ ಸಾಕಷ್ಟು ಲೋಪದೋಷ ಆಗಿದ್ದವು. ಅರಣ್ಯ ಕಾಯ್ದೆ ಉಲ್ಲಂಘನೆ ಆಗಿತ್ತು. ಕೇಂದ್ರದ ಉನ್ನತಾಧಿಕಾರ ಸಮಿತಿಯು (ಸಿಇಸಿ) ನೀಡಿದ್ದ ನಿರ್ದೇಶನಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸುವಲ್ಲಿ ಕೆಐಒಸಿಎಲ್‌ ವಿಫಲವಾಗಿದೆ ಎಂಬ ದೂರುಗಳಿವೆ’ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 

ADVERTISEMENT

‘ಸಿಇಸಿ ನಿರ್ದೇಶನಗಳನ್ನು ಕೆಐಒಸಿಎಲ್‌ ಅನುಷ್ಠಾನಗೊಳಿಸುವವರೆಗೆ ಅರಣ್ಯ ತೀರುವಳಿ ಗುತ್ತಿಗೆ ಪತ್ರ ಮಾಡಿಕೊಡಬಾರದು. ಕಂಪನಿಗೆ ಅರಣ್ಯ ಜಮೀನನ್ನು ಹಸ್ತಾಂತರಿಸಬಾರದು’ ಎಂದು ಅವರು ನಿರ್ದೇಶನ ನೀಡಿದ್ದಾರೆ. 

ಕೆಐಒಸಿಎಲ್‌ ನಡೆಸಲು ಉದ್ದೇಶಿಸಿರುವ ದೇವದಾರಿ ಗಣಿಗಾರಿಕೆಗೆ ಸಂಬಂಧಿಸಿದ ಲೋಪದೋಷಗಳ ಕುರಿತು ‘ಪ್ರಜಾವಾಣಿ’ ವಿಸ್ತೃತ ವರದಿಗಳನ್ನು ಸರಣಿಯಾಗಿ ಪ್ರಕಟಿಸಿತ್ತು.

ದೇವದಾರಿಗೂ ನನಗೂ ಸಂಬಂಧವಿಲ್ಲ: ಎಚ್‌.ಡಿ. ಕುಮಾರಸ್ವಾಮಿ

ಬಳ್ಳಾರಿ: ‘ಕೆಐಒಸಿಎಲ್‌ನ ದೇವದಾರಿ ಗಣಿಗಾರಿಕೆಗೂ ನನಗೂ ಯಾವುದೇ ಸಂಬಂಧ ಇಲ್ಲ. ಕಡತವನ್ನು ನಾನು ಆರ್ಥಿಕ ಇಲಾಖೆಗೆ ಕಳುಹಿಸಿದ್ದೇನೆ ಅಷ್ಟೆ’ ಎಂದು ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲೇ ಕೆಐಒಸಿಎಲ್‌ಗೆ ಅರಣ್ಯ ಜಮೀನು ನೀಡಲಾಗಿತ್ತು. ಯಡಿಯೂರಪ್ಪ ಅವರ ಪಾತ್ರದ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ಯೋಜನೆ ಈವರೆಗೆ ಬಂದಿದೆ. ಕಂಪನಿಯ ಗಣಿಗಾರಿಕೆ ಕಾರ್ಯಾರಂಭಕ್ಕೆ ₹1,738 ಕೋಟಿ ಬೇಕು. ಅದಕ್ಕೆ ನಾನು ಸಹಿ ಹಾಕಿ ಆರ್ಥಿಕ ಇಲಾಖೆಗೆ ಕಳುಹಿಸಿದ್ದೇನೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಗಣಿಗಾರಿಕೆಗೆ ಸಂಬಂಧಿಸಿ ಎಲ್ಲ ಪ್ರಕ್ರಿಯೆ ಮುಗಿದಿವೆ. ಅರಣ್ಯ ಇಲಾಖೆಗೆ ಪರ್ಯಾಯ ಜಮೀನು ನೀಡಲಾಗಿದೆ. ರಾಜ್ಯ ಸರ್ಕಾರಕ್ಕೆ ₹518 ಕೋಟಿ ಹಣ ಪಾವತಿಸಲಾಗಿದೆ. ಸಂಡೂರಿನ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿಯೂ ಮುಗಿದಿದೆ. ಇದರಲ್ಲಿ
ಎಸ್‌.ಆರ್‌. ಹಿರೇಮಠ ಅವರು ನನ್ನ ಹೆಸರು ಯಾಕೆ ಉಲ್ಲೇಖಿಸಿದ್ದಾರೆ ಎಂಬುದು ನನಗೆ ಗೊತ್ತಿಲ್ಲ’ ಎಂದು ತಿಳಿಸಿದರು.

‘ಗಣಿಗಾರಿಕೆ ನಡೆಯುವ ದೇವದಾರಿ ಶ್ರೇಣಿಯಲ್ಲಿ ದಟ್ಟ ಅರಣ್ಯವಿಲ್ಲ. ಅಲ್ಲಿ ದೊಡ್ಡ ಗಾತ್ರದ ಮರಗಳೂ ಇಲ್ಲ. ಅಲ್ಲಿ ಕುರುಚಲು ಗಿಡಗಳು ಮಾತ್ರ ಇವೆ. ಸಾರ್ವಜನಿಕ ವಲಯದ ಕಂಪನಿ ಉಳಿಯಬೇಕು. ಉದ್ಯೋಗ ಸೃಷ್ಟಿಯಾಗಬೇಕು ಎಂಬುದಷ್ಟೇ ನನ್ನ ನಿಲುವು’ ಎಂದು ಕುಮಾರಸ್ವಾಮಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.