ADVERTISEMENT

ಕಿಸಾನ್‌ ಸಮ್ಮಾನ್‌ ನಿಧಿ: ತಲುಪದ ₹92 ಕೋಟಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2022, 19:38 IST
Last Updated 14 ಸೆಪ್ಟೆಂಬರ್ 2022, 19:38 IST
   

ಬೆಂಗಳೂರು:ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ 2019–20 ರಿಂದ ₹91.99 ಕೋಟಿ ನೇರ ನಗದು ವರ್ಗಾವಣೆ (ಡಿಬಿಟಿ) ಪ್ರಕ್ರಿಯೆ ಬಾಕಿ ಇದ್ದು, ಫಲಾನುಭವಿಗಳು ಹಣ ಪಡೆಯುವುದರಿಂದ ವಂಚಿತರಾಗಿದ್ದಾರೆ ಎಂದು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ವರದಿ(ಸಿಎಜಿ) ಹೇಳಿದೆ.

ಫಲಾನುಭವಿಗಳಲ್ಲದ ವ್ಯಕ್ತಿಗಳ ಬ್ಯಾಂಕ್‌ ಖಾತೆಗೂ ಹಣ ಜಮೆಯಾಗಿರುವುದು ಡಿಬಿಟಿ ದತ್ತಾಂಶ ವಿಶ್ಲೇಷಣೆಯಿಂದ ತಿಳಿದು ಬಂದಿದೆ ಎಂದೂ ವರದಿ ಹೇಳಿದೆ.

‘ನೇರ ನಗದು ವರ್ಗಾವಣೆ ಮೇಲಿನ ಕಾರ್ಯನಿರ್ವಹಣಾ ಲೆಕ್ಕ ಪರಿಶೋಧನೆ–2022’ ವರದಿಯನ್ನು ವಿಧಾನಮಂಡಲದಲ್ಲಿ ಬುಧವಾರ ಮಂಡಿಸಲಾಯಿತು. ಈ ವರದಿಯು ಡಿಬಿಟಿಯ ದೋಷಗಳನ್ನು ವಿವರಿಸಿದೆ.

ADVERTISEMENT

ರಾಜ್ಯದಲ್ಲಿ ಎಲ್ಲ ಯೋಜನೆಗಳ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಹಣ ಪಾವತಿ ಮಾಡಲಾಗುತ್ತಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದ್ದರೂ ಶೇ 83 ರಷ್ಟು ಫಲಾನುಭವಿಗಳಿಗೆ ಮಾತ್ರ ನೇರ ನಗದು ವರ್ಗಾವಣೆ ಮೂಲಕ ಹಣ ಪಾವತಿ ಮಾಡಲಾಗಿದೆ. ಶೇ 14 ರಷ್ಟು ಪಾವತಿ ತಿರಸ್ಕೃತಗೊಂಡಿದೆ.

2018-19 ರ ಅವಧಿಯಲ್ಲಿ ನೇರ ನಗದು ವರ್ಗಾವಣೆ (ಡಿಬಿಟಿ) ಪೋರ್ಟಲ್‌ ಮೂಲಕ ಸಾಧ್ಯವಾಗದೇ 22 ಇಲಾಖೆಗಳ 168 ಯೋಜನೆಗಳ ಅಡಿ ₹2,829.02 ಕೋಟಿ ನಗದು ಪಾವತಿ ಮಾಡಲಾಗಿದೆ. ಇದಕ್ಕೆ ಐಸಿಟಿ ಅಪ್ಲಿಕೇಶನ್‌ಗಳ ಮತ್ತು ಫಲಾನುಭವಿ ದತ್ತಾಂಶ ಸಮಸ್ಯೆಯೇ ಕಾರಣ ಎಂದು ಪತ್ತೆ ಮಾಡಿದೆ.

ಕ್ಷೀರಸಿರಿ ಯೋಜನೆಯಲ್ಲಿ ಕಡತಗಳ ರಚನೆ ಮತ್ತು ಅನುಮೋದನೆಯಲ್ಲಿನ ವಿಳಂಬದಿಂದ ಡೇರಿಗೆ ಹಾಲು ಹಾಕುವ8,464 ಹೈನುಗಾರರಿಗೆ 2020 ರಿಂದಲೂ ₹56.08 ಲಕ್ಷ ಬಾಕಿ ಇತ್ತು. ರಾಷ್ಟ್ರೀಯ ಆಹಾರ ಭದ್ರತಾ ಮಿಷನ್‌ ಮತ್ತು ರೈತ ಸಿರಿ ಯೋಜನೆಗಳನ್ನು ಡಿಬಿಟಿ ಪೋರ್ಟಲ್‌ಗೆ ಅಳವಡಿಸಿದ್ದರೂ ಈ ಎರಡೂ ಯೋಜನೆಗಳ ₹45.94 ಕೋಟಿ ಡಿಬಿಟಿ ಪಾವತಿಗಳನ್ನು ಡಿಬಿಟಿ ಪೋರ್ಟಲ್‌ ಮೂಲಕ ಮಾಡಲು ಸಾಧ್ಯವಾಗಿಲ್ಲ ಎಂದು ವರದಿ ಹೇಳಿದೆ.

ಡಿಬಿಟಿ ಅಡಿಯಲ್ಲಿ ಯೋಜನೆಗಳನ್ನು ಜಾರಿಗೊಳಿಸುತ್ತಿರುವ ಇಲಾಖೆಗಳು ವಿಫಲವಾದ ವಹಿವಾಟುಗಳನ್ನು ಸರಿಪಡಿಸಲು ಮತ್ತು ಪುನರಾರಂಭಿಸುವಲ್ಲಿ ವಿಫಲವಾದವು. ವಿಫಲವಾದ ದಿನಾಂಕದಿಂದ 30 ದಿನಗಳು ಕಳೆದಿದ್ದರೂ 91.283 ವಹಿವಾಟುಗಳು ಪುನರಾರಂಭಕ್ಕಾಗಿ ಕಾದಿದ್ದವು. ಪಾವತಿಯಲ್ಲಿ ಅಗತ್ಯ ಕ್ರಮಕೈಗೊಳ್ಳುವಲ್ಲಿ ವಿಫಲವಾಗಿದ್ದರಿಂದ 2018–19 ಮತ್ತು 2019–20 ರ ಸಾಲಿನಲ್ಲಿ 6.67 ಲಕ್ಷ ಫಲಾನುಭವಿಗಳು ₹153.30 ಕೋಟಿ ಆರ್ಥಿಕ ಪ್ರಯೋಜನದಿಂದ ವಂಚಿತರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.