ರಾಣಿ ಚನ್ನಮ್ಮ ವೇದಿಕೆ, ಚನ್ನಮ್ಮನ ಕಿತ್ತೂರು: ‘ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಬಲ ತುಂಬಲಾಗುವುದು. ಈ ತಾಲ್ಲೂಕಿನ ಅಭಿವೃದ್ಧಿ ಕುರಿತಾಗಿ ಒಂದಷ್ಟು ಕೆಲಸಗಳು ಬಾಕಿ ಇವೆ. ಶೀಘ್ರ ಅವುಗಳಿಗೆ ಆದ್ಯತೆ ನೀಡುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಕಿತ್ತೂರು ವಿಜಯೋತ್ಸವದ 200ನೇ ವರ್ಷಾಚರಣೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಇಲ್ಲಿ ‘ಥೀಮ್ ಪಾರ್ಕ್’ ನಿರ್ಮಾಣ ಮಾಡಬೇಕು ಎಂಬ ಬೇಡಿಕೆಯನ್ನೂ ಈಡೇರಿಸುತ್ತೇವೆ. ತಾಲ್ಲೂಕು ಮಟ್ಟದ ಕಚೇರಿಗಳನ್ನೂ ನೀಡುತ್ತೇವೆ’ ಎಂದರು.
ಇದಕ್ಕೂ ಮುನ್ನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ಅನೇಕ ಜನರ ತ್ಯಾಗ, ಬಲಿದಾನಗಳಿಂದ ನಮಗೆ ಸ್ವಾತಂತ್ರ್ಯ ಬಂದಿದೆ. ಅದನ್ನು ಉಳಿಸಿಕೊಳ್ಳಬೇಕು. ಸಮ ಸಮಾಜ ನಿರ್ಮಾಣ ಮಾಡಬೇಕು. ಎಲ್ಲರೂ ಮುಖ್ಯವಾಹಿನಿಗೆ ಬರಬೇಕು’ ಎಂದರು.
ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ‘ಮಂಗಲ್ ಪಾಂಡೆ, ಭಗತ್‌ಸಿಂಗ್, ಸುಖದೇವ್ ಗಲ್ಲಿಗೇರಿದ ಇತಿಹಾಸ ಎಲ್ಲರಿಗೂ ಗೊತ್ತಾಗಿದೆ. ಆದರೆ, ಅವರಿಗಿಂತ ಮುಂಚೆಯೇ ಗಲ್ಲಿಗೇರಿದ ಸಂಗೊಳ್ಳಿ ರಾಯಣ್ಣ ಹಾಗೂ ಅವನ ಸಹಚರರನ್ನು ನಿರ್ಲಕ್ಷ್ಯ ಮಾಡಲಾಗಿದೆ. ಉತ್ತರ ಭಾರತದ ಯೋಧರು ಮಾತ್ರ ಬೆಳಗಬೇಕು ಎಂಬ ಕಾರಣಕ್ಕೆ ಚನ್ನಮ್ಮ, ರಾಯಣ್ಣ ಅವರನ್ನು ಹಿಂದಿಡುವ ವ್ಯವಸ್ಥಿತ ಪ್ರಯತ್ನ ನಡೆದಿದೆ. ಚನ್ನಮ್ಮನ ಸಮಾಧಿ ಸ್ಥಳವಾದ ಬೈಲಹೊಂಗಲ ರಾಷ್ಟ್ರೀಯ ಸ್ಮಾರಕವಾಗಬೇಕು’ ಎಂದು ಮನವಿ ಮಾಡಿದರು.
ಕಿತ್ತೂರು ರಾಜಗುರು ಸಂಸ್ಥಾನ ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಿಚ್ಚಣಕಿಯ ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ, ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಶೀರ್ವಚನ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ, ಹಣಕಾಸು ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ, ವಿಧಾನಸಭೆಯ ಮುಖ್ಯಸಚೇತಕ ಅಶೋಕ ಪಟ್ಟಣ, ಶಾಸಕರಾದ ವಿಶ್ವಾಸ ವೈದ್ಯ, ಆಸಿಫ್ ಸೇಠ್, ಗಣೇಶ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಐಜಿಪಿ ವಿಕಾಶಕುಮಾರ್ ವಿಕಾಶ್, ಕಿತ್ತೂರು ಉತ್ಸವ ಸಮಿತಿ ಅಧ್ಯಕ್ಷ ಮೊಹಮ್ಮದ್ ರೋಷನ್, ಎಸ್ಪಿ ಡಾ.ಭೀಮಾಶಂಖರ ಗುಳೇದ, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಶಿಂಧೆ ವೇದಿಕೆ ಮೇಲಿದ್ದರು.
*
‘ಚನ್ನಮ್ಮನಿಂದ ದೇಶದ ಚರಿತ್ರೆಗೆ ಬೆಳಕು’
ಸಮಾರೋಪ ನುಡಿ ಆಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳೆಮಲೆ, ‘ಕಿತ್ತೂರು ಇತಿಹಾಸದ ಮೂಲಕವೇ ಇಡೀ ದೇಶದ ಚರಿತ್ರೆಗೆ ಹೊಸ ರೂಪ ಸಿಗಲಿದೆ’ ಎಂದರು.
‘ಬ್ರಿಟಿಷರ ದತ್ತು ಸ್ವೀಕಾರ ರದ್ದು ಕಾನೂನು ಮೊಟ್ಟ ಮೊದಲ ಬಾರಿಗೆ ಅನುಷ್ಠಾನ ಆಗಿದ್ದು ಕಿತ್ತೂರಿನಲ್ಲೇ. ಇದು ಅಮಾನುಷ, ಅನಾಗರಿಕ, ಅಸಂಸ್ಕೃತಿಕ ಕಾನೂನು ಆಗಿತ್ತು. ಅದರ ಮೂಲಕ ಇಡೀ ದೇಶವನ್ನು ನುಂಗುತ್ತಾರೆ ಎಂಬುದನ್ನು ಅರಿತೇ ಚನ್ನಮ್ಮ ಯುದ್ಧಕ್ಕೆ ಸಿದ್ಧಳಾದಳು’ ಎಂದು ಅಭಿಪ್ರಾಯ ಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.