ಬೆಂಗಳೂರು: ‘ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಕೆಆರ್‌ಡಿಬಿ) ಪ್ರಸಕ್ತ ಸಾಲಿನಲ್ಲಿ ಹಂಚಿಕೆಯಾದ ₹ 5 ಸಾವಿರ ಕೋಟಿ ಅನುದಾನದಲ್ಲಿ ಸುಮಾರು ₹ 4 ಸಾವಿರ ಕೋಟಿಯನ್ನು ಈ ವ್ಯಾಪ್ತಿಯ ಏಳೂ ಜಿಲ್ಲೆಗಳ 41 ಶಾಸಕರಿಗೆ ಹಂಚಿದ್ದೇವೆ. ನಂಜುಡಪ್ಪ ವರದಿ ಪ್ರಕಾರವೇ ಎಲ್ಲ ಶಾಸಕರಿಗೆ ಅನುದಾನ ನೀಡಿದ್ದೇವೆ’ ಎಂದು ಕೆಕೆಆರ್‌ಡಿಬಿ ಅಧ್ಯಕ್ಷರೂ ಆಗಿರುವ ಶಾಸಕ ಅಜಯ್ ಸಿಂಗ್ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಮಂಡಳಿಯ ಅನುದಾನವನ್ನು ಯೋಜನಾ ಸಚಿವರು ಅಥವಾ ಅಧ್ಯಕ್ಷರು ಹಂಚಿಕೆ ಮಾಡುವುದಿಲ್ಲ. ಅಭಿವೃದ್ಧಿ ಸೂಚ್ಯಂಕ ಆಧರಿಸಿ ಅತ್ಯಂತ ಹಿಂದುಳಿದ ತಾಲ್ಲೂಕಿಗೆ ಹೆಚ್ಚು ಅನುದಾನ ಹಂಚಿಕೆ ಮಾಡಲಾಗುತ್ತದೆ’ ಎಂದರು.
ಅನುದಾನ ನೀಡಿಲ್ಲ ಎಂದಿರುವ ಶಾಸಕ ಜನಾರ್ದನ ರೆಡ್ಡಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಕೆಕೆಆರ್‌ಡಿಬಿ ಅನುದಾನ ಎಲ್ಲರಿಗೂ ನಿಯಮದ ಪ್ರಕಾರವೇ ಹಂಚಿಕೆಯಾಗುತ್ತದೆ. ಸಂಡೂರು ಉಪ ಚುನಾವಣೆಯಲ್ಲಿನ ಸೋಲಿನ ಹತಾಶೆಯಿಂದ ಅವರು ಈ ರೀತಿ ಆರೋಪ ಮಾಡುತ್ತಿದ್ದಾರೆ’ ಎಂದರು.
‘ಅಭಿವೃದ್ಧಿ ಪರಿಗಣಿಸಿ ಅನುದಾನ ಹಂಚಿಕೆ ಮಾಡುವ ವೇಳೆ ಯಾರಿಗೂ ಅನ್ಯಾಯ ಆಗಬಾರದೆಂದು ಗೋವಿಂದ ರಾವ್ ಸಮಿತಿ ರಚಿಸಲಾಗಿದೆ’ ಎಂದೂ ಹೇಳಿದರು.
‘ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಲು ರಾಜ್ಯ ಕಾಂಗ್ರೆಸ್ ಸರ್ಕಾರದ ಮಾದರಿಯಲ್ಲಿ ಕೇಂದ್ರ ಸರ್ಕಾರ ಕೂಡ ಹೆಚ್ಚಿನ ಅನುದಾನ ನೀಡಬೇಕು. ನಮ್ಮ ಈ ಬೇಡಿಕೆಗೆ ಕೇಂದ್ರ ಸರ್ಕಾರದಿಂದ ಸೂಕ್ತ ಸ್ಪಂದನೆ ವ್ಯಕ್ತ ಆಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ನಾನು ಕೂಡಾ ಸಚಿವ ಸ್ಥಾನದ ಆಕಾಂಕ್ಷಿ: ಸಚಿವ ಸಂಪುಟ ಪುನರ್ ರಚನೆಯ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನಾನು ಖಂಡಿತವಾಗಿಯೂ ಸಚಿವ ಸ್ಥಾನದ ಆಕಾಂಕ್ಷಿ. ನನ್ನ ತಂದೆಯವರ ಕಾಲದಿಂದ ಪಕ್ಷದ ಕೆಲಸ ಮಾಡುತ್ತಿದ್ದೇನೆ. ಸಚಿವನಾಗಿ ಮಾಡುವ ಭರವಸೆಯನ್ನೂ ಪಕ್ಷದ ಹಿರಿಯರು ನೀಡಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.