ADVERTISEMENT

ಕೆಕೆಆರ್‌ಡಿಬಿ ವಿವೇಚನಾ ಕೋಟಾ: ರಾಜ್ಯಪಾಲರಿಗೆ ₹250 ಕೋಟಿ

ರಾಜೇಶ್ ರೈ ಚಟ್ಲ
Published 20 ಆಗಸ್ಟ್ 2024, 23:39 IST
Last Updated 20 ಆಗಸ್ಟ್ 2024, 23:39 IST
<div class="paragraphs"><p>ಥಾವರ್ ಚಂದ್ ಗೆಹಲೋತ್‌</p></div>

ಥಾವರ್ ಚಂದ್ ಗೆಹಲೋತ್‌

   

ಬೆಂಗಳೂರು: ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಅವರ ವಿವೇಚನೆಯಂತೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ವ್ಯಾಪ್ತಿಯ ವಿಶ್ವವಿದ್ಯಾಲಯಗಳಲ್ಲಿ ₹250 ಕೋಟಿ ವೆಚ್ಚ ಮಾಡುವ ಪ್ರಸ್ತಾವಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.

ಕ್ರಿಯಾ ಯೋಜನೆ ತಯಾರಿಸಿ, ಯೋಜನೆ ಅನುಷ್ಠಾನಗೊಳಿಸಲು ರಾಜ್ಯಪಾಲರ ವಿವೇಚನಾ ಕೋಟಾವನ್ನು ಇದೇ ಮೊದಲ ಬಾರಿಗೆ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಫಾರಸಿ ನಂತೆ ಈ ತೀರ್ಮಾನ ಕೈಗೊಳ್ಳಲಾಗಿದೆ.

ADVERTISEMENT

ಮಂಡಳಿ ವ್ಯಾಪ್ತಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಬೀದರ್‌, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ಒಟ್ಟು 41 ವಿಧಾನಸಭಾ ಕ್ಷೇತ್ರಗಳಿವೆ. ಈ ಜಿಲ್ಲೆಗಳಲ್ಲಿ ಪ್ರಸಕ್ತ ಸಾಲಿನಲ್ಲಿ (2024–25) ₹5 ಸಾವಿರ ಕೋಟಿಗೆ ಕ್ರಿಯಾಯೋಜನೆ ರೂಪಿಸಲಾಗಿತ್ತು. ಆದರೆ, ಬಜೆಟ್‌ನಲ್ಲಿ ₹3 ಸಾವಿರ ಕೋಟಿ ಮಾತ್ರ ಒದಗಿಸಲಾಗಿದೆ. ಹಾಗಿದ್ದರೂ ಪೂರ್ಣ ₹5,000 ಕೋಟಿಗೆ ಕ್ರಿಯಾ ಯೋಜನೆ ರೂಪಿಸಲು ಸೂಚಿಸಲಾಗಿತ್ತು.

ಉಳಿಕೆ ಕಾಮಗಾರಿಗಳನ್ನು ಮುಂದುವರಿದ ಕಾಮಗಾರಿ ಎಂದು ಪರಿಗಣಿಸಿ ಮುಂದಿನ ವರ್ಷದಲ್ಲಿ ಅನುಷ್ಠಾನಗೊಳಿಸಲು ಆರ್ಥಿಕ ಇಲಾಖೆ ಸೂಚಿಸಿತ್ತು. 

ಅದರಂತೆ, ₹5 ಸಾವಿರ ಕೋಟಿಯಲ್ಲಿ ₹3,750 ಕೋಟಿಯನ್ನು ಕಲ್ಯಾಣ ಕರ್ನಾಟಕ ಪ್ರದೇಶದ ವ್ಯಾಪ್ತಿಯ ಜಿಲ್ಲೆ ಮತ್ತು ತಾಲ್ಲೂಕುಗಳಿಗೆ ವರ್ಗ ಅಭಿವೃದ್ಧಿ ಸೂಚ್ಯಂಕ (ಸಿಡಿಐ) ಆಧರಿಸಿ ಕ್ರಿಯಾ ಯೋಜನೆಗಳನ್ನು ರೂಪಿಸಲು ಅನುದಾನ ಹಂಚಿಕೆ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಬಜೆಟ್‌ನಲ್ಲಿ ಘೋಷಿಸಿದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಒಟ್ಟು 11 ಇಲಾಖೆಗಳಿಗೆ  ₹1 ಸಾವಿರ ಕೋಟಿ ನಿಗದಿಪಡಿಸಲಾಗಿದೆ. ಉನ್ನತ ಶಿಕ್ಷಣ ವಲಯದಲ್ಲಿ ರಾಜ್ಯಪಾಲರು ಸೂಚಿಸುವ ಯೋಜನೆಗಳಿಗೆ ₹250 ಕೋಟಿಯನ್ನು, ಕೆಕೆಆರ್‌ಡಿಬಿಯ ಶಿಫಾರಸಿನಂತೆ ವೆಚ್ಚ ಮಾಡಲು ನಿಗದಿಪಡಿಸಲಾಗಿದೆ ಎಂದು ಮಂಡಳಿಯ ಮೂಲಗಳು ಹೇಳಿವೆ.

ಜುಲೈ 1ರಂದು ನಡೆದ ಕೆಕೆಆರ್‌ಡಿಬಿ ಸಭೆಯಲ್ಲಿ ₹5,000 ಕೋಟಿ ಅನುದಾನದ ಕ್ರಿಯಾಯೋಜನೆಗೆ ಒಪ್ಪಿಗೆ ಪಡೆದು ಸರ್ಕಾರಕ್ಕೆ ಕಾರ್ಯದರ್ಶಿ ಸುಂದರೇಶ್‌ ಬಾಬು ಅವರು ಪ್ರಸ್ತಾವ ಸಲ್ಲಿಸಿದ್ದರು. ಅದರಂತೆ ಮೈಕ್ರೋ ಮತ್ತು ಮ್ಯಾಕ್ರೋ ಯೋಜನೆಗಳಿಗೆ (ಒಟ್ಟು ಶೇ 86) ₹2096.25 ಕೋಟಿ, ಮುಖ್ಯಮಂತ್ರಿ, ಸರ್ಕಾರ (ಯೋಜನಾ ಇಲಾಖೆಯ ಸಚಿವರು), ಮತ್ತು ಮಂಡಳಿ ಅಧ್ಯಕ್ಷರ ವಿವೇಚನಾ ಕೋಟಾ ತಲಾ ಶೇ 3ರಂತೆ (ತಲಾ ₹112.50 ಕೋಟಿ), ಪ್ರಾದೇಶಿಕ ನಿಧಿ (ಶೇ 4) ₹150 ಕೋಟಿ, ಆಡಳಿತ ವೆಚ್ಚ (ಶೇ 1 ) ₹37.50 ಕೋಟಿ  ಸೇರಿ ಒಟ್ಟು (ಶೇ 100) ₹3,750 ಕೋಟಿ ಹಂಚಿಕೆ ಮಾಡಲಾಗಿತ್ತು.

ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಆಯ ವ್ಯಯದಲ್ಲಿ ಘೋಷಿಸಿರುವ ಕಾರ್ಯಕ್ರಮಗಳಿಗೆ ಒಟ್ಟು ₹1,250 ಕೋಟಿ ಹಂಚಿಕೆ ಮಾಡಲಾಗಿತ್ತು. ಅದರಲ್ಲಿ ಮುಖ್ಯಮಂತ್ರಿ, ಸರ್ಕಾರ ಮತ್ತು ಮಂಡಳಿ ಅಧ್ಯಕ್ಷರ ವಿವೇಚನಾ ಕೋಟಾ ತಲಾ ಶೇ 3ರಂತೆ ಒಟ್ಟು ₹112.50 ಕೋಟಿ ಮೀಸಲಿರಿಸಲಾಗಿತ್ತು. ಹೀಗೆ ಒಟ್ಟು ₹5,000 ಕೋಟಿಯಲ್ಲಿ ಮುಖ್ಯಮಂತ್ರಿ, ಯೋಜನಾ ಇಲಾಖೆಯ ಸಚಿವರು ಮತ್ತು ಮಂಡಳಿ ಅಧ್ಯಕ್ಷರ ವಿವೇಚನಾ ಕೋಟಾ ತಲಾ ₹150 ಕೋಟಿ ಮೀಸಲಿರಿಸಿ, ಇಡೀ ಕ್ರಿಯಾಯೋಜನೆಯ ಪ್ರಸ್ತಾವವನ್ನು ಅನುಮೋದಿಸಿ, ರಾಜ್ಯಪಾಲರ ಅನುಮೋದನೆಗಾಗಿ ಮುಖ್ಯಮಂತ್ರಿ ಶಿಫಾರಸು ಮಾಡಿದ್ದರು.

ಕ್ರಿಯಾ ಯೋಜನೆಗೆ ಅನುಮೋದನೆ ನೀಡುವಂತೆ ರಾಜ್ಯಪಾಲರ ಬಳಿಗೆ ಯೋಜನಾ ಇಲಾಖೆಯ ಅಧಿಕಾರಿಗಳು ತೆರಳಿದ್ದರು. ಈ ವೇಳೆ ಕ್ರಿಯಾಯೋಜನೆಯಲ್ಲಿ ಬದಲಾವಣೆ ಮಾಡುವ ಕುರಿತು ಚರ್ಚೆ ನಡೆದಿತ್ತು. ಬಳಿಕ ಮುಖ್ಯಮಂತ್ರಿಯ  ಸೂಚನೆಯಂತೆ,  ಆಯವ್ಯಯದಲ್ಲಿ ಘೋಷಿಸಿರುವ ಕಾರ್ಯಕ್ರಮಗಳಿಗೆ ಹಂಚಿಕೆ ಮಾಡಿದ್ದ ₹1,250 ಕೋಟಿಯಲ್ಲಿ ₹250 ಕೋಟಿಯನ್ನು ರಾಜ್ಯಪಾಲರ ವಿವೇಚನೆಯಂತೆ ವಿಶ್ವವಿದ್ಯಾಲಯಗಳಿಗೆ ವೆಚ್ಚ ಮಾಡುವ ಪೂರಕ ಟಿಪ್ಪಣಿ ಸಿದ್ಧಪಡಿಸಲಾಗಿತ್ತು ಎಂದೂ ಮೂಲಗಳು ತಿಳಿಸಿವೆ.

ರಾಜ್ಯಪಾಲರು ವಿಶ್ವವಿದ್ಯಾಲಯಗಳ ಕುಲಪತಿಗಳಿಂದ ಪ್ರಸ್ತಾವಗಳನ್ನು ಪಡೆದು, ಅವರ ವಿವೇಚನೆಯಂತೆ ಕ್ರಿಯಾ ಯೋಜನೆಗಳಿಗೆ ಒಟ್ಟು ₹250 ಕೋಟಿ ವೆಚ್ಚ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಅಜಯ್‌ ಸಿಂಗ್‌, ಅಧ್ಯಕ್ಷ, ಕೆಕೆಆರ್‌ಡಿಬಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.