ಬೆಳಗಾವಿ: ‘ಕೆಲ ಮಠಾಧೀಶರಿಂದ ಮಠಗಳಿಗೂ ಕಳಂಕ ಬರುತ್ತಿದೆ. ಜನರು ಧಾರ್ಮಿಕ ಸ್ಥಳಗಳನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಇಂದಿನ ಮಠಗಳಿಗೆ ಉತ್ತಮ ಚಾರಿತ್ರ್ಯ ಹೊಂದಿರುವ ಮಠಾಧೀಶರು ಬೇಕಾಗಿದೆ’ ಎಂದು ಸಾಹಿತಿ ಗೊ.ರು.ಚನ್ನಬಸಪ್ಪ ಅಭಿಪ್ರಾಯಪಟ್ಟರು.
ನಗರದಲ್ಲಿ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅಮೃತ ಮಹೋತ್ಸವ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ‘ಅಭಿನಂದನಾ ಸಮಾರಂಭ’ ಹಾಗೂ ‘ಮಠಾಧೀಶರ ಚಿಂತನಾ ಸಮಾವೇಶ’ದಲ್ಲಿ ಅವರು ಆಶಯ ನುಡಿಗಳನ್ನಾಡಿದರು.
‘ಪ್ರಭಾಕರ ಕೋರೆ ಈಗ ಬೆಳಗಾವಿಯವರಾಗಿ ಉಳಿದಿಲ್ಲ. ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿ ವಿದೇಶದಲ್ಲೂ ಖ್ಯಾತಿ ಗಳಿಸಿದ್ದಾರೆ. ಅನೇಕ ಮಠಗಳಿಂದಲೂ ಸಾಧ್ಯವಾಗದ ಕೆಲಸವನ್ನು ಅವರು ಮಾಡಿದ್ದಾರೆ’ ಎಂದು ಪ್ರಶಂಸಿಸಿದರು.
ಮೈಸೂರಿನ ಸುತ್ತೂರು ಕ್ಷೇತ್ರದ ವೀರಸಿಂಹಾಸನ ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ‘ಕೆಎಲ್ಇ ಸಂಸ್ಥೆ ಈ ಭಾಗದ ಜನರ ಆಶಾಕಿರಣವಾಗಿದೆ. ಎರಡಂಕಿಯಷ್ಟಿದ್ದ ಅಂಗಸಂಸ್ಥೆಗಳ ಸಂಖ್ಯೆ ಕೋರೆ ನೇತೃತ್ವದಲ್ಲಿ ಮೂರಂಕಿ ತಲುಪಿದೆ. ಇಲ್ಲಿ ಸುವರ್ಣ ವಿಧಾನಸೌಧ ತಲೆ ಎತ್ತಿದ ಶ್ರೇಯಸ್ಸು ಕೋರೆ ಅವರಿಗೆ ಸಲ್ಲುತ್ತದೆ’ ಎಂದರು.
ಸಿರಿಗೆರೆಯ ತರಳಬಾಳು ಮಹಾಸಂಸ್ಥಾನದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ‘ಸಮಾಜ ಸೇವೆಯ ಆಶಯದೊಂದಿಗೆ ಮುನ್ನಡೆಯುತ್ತಿರುವ ಕೋರೆ ಗಂಡೆದೆ ನಾಯಕ’ ಎಂದು ಬಣ್ಣಿಸಿದರು.
ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ, ಶಿವಮೊಗ್ಗದ ಆನಂದ ಪುರಂನ ಬೆಕ್ಕಿನಕಲ್ಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಹುಬ್ಬಳ್ಳಿಯ ಮೂರುಸಾವಿರ ಮಠದ ಡಾ.ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿದರು.
ನಾಡಿನ ವಿವಿಧೆಡೆಯಿಂದ ಬಂದಿದ್ದ 250ಕ್ಕೂ ಅಧಿಕ ಮಠಾಧೀಶರು, ಕೋರೆ ಅವರನ್ನು ಸತ್ಕರಿಸಿ ಗೌರವಿಸಿದರು. ಶಿಕ್ಷಣ ಮತ್ತು ಆರೋಗ್ಯ ರಂಗಕ್ಕೆ ಕೋರೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು. ಮಠಗಳು ಮತ್ತು ಶಿಕ್ಷಣ ಸಂಸ್ಥೆಗಳಿಂದ ಮುಂದಿನ ದಿನಗಳಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಚರ್ಚಿಸಿದರು.
*
ಲಿಂಗಾಯತ ಸಮುದಾಯ ಈಗ ದಿಕ್ಕು ತಪ್ಪುತ್ತಿದೆ. ಅಲ್ಲಲ್ಲಿ ಧರ್ಮಾಂತರ ಪ್ರಕ್ರಿಯೆ ನಡೆಯುತ್ತಿದೆ. ಮಠಾಧೀಶರು ಶಿಕ್ಷಣ ಪ್ರಸಾರದ ಜೊತೆಗೆ ಸಮಾಜದ ಉಳಿವಿಗಾಗಿಯೂ ಗಂಭೀರವಾಗಿ ಚಿಂತನೆ ನಡೆಸಬೇಕಿದೆ.
–ಪ್ರಭಾಕರ ಕೋರೆ, ಕಾರ್ಯಾಧ್ಯಕ್ಷ, ಕೆಎಲ್‌ಇ ಸಂಸ್ಥೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.