ADVERTISEMENT

ನಂದಿನಿ ಹಾಲಿನ ದರ ಪ್ರತಿ ಪ್ಯಾಕೆಟ್‌ಗೆ ₹2.10 ಹೆಚ್ಚಳ

‘ಕಾಫಿ–ಟೀ ದರ ಹೆಚ್ಚಳವಿಲ್ಲ’

​ಪ್ರಜಾವಾಣಿ ವಾರ್ತೆ
Published 25 ಜೂನ್ 2024, 20:47 IST
Last Updated 25 ಜೂನ್ 2024, 20:47 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳದ (ಕೆಎಂಎಫ್‌) ನಂದಿನಿ ಹಾಲಿನ ದರವನ್ನು ಹೆಚ್ಚಿಸಲಾಗಿದ್ದು, ಪರಿಷ್ಕೃತ ದರಗಳು ನಾಳೆ(ಜೂನ್ 26)ಯಿಂದ ಜಾರಿಗೆ ಬರಲಿವೆ.

ನಂದಿನಿಯ ಎಲ್ಲ ಮಾದರಿಗಳ ಹಾಲಿನ ದರವನ್ನು ಪ್ರತಿ ಪ್ಯಾಕೆಟ್‌ಗೆ ₹2.10 ಹೆಚ್ಚಿಸಿ ಪರಿಷ್ಕರಿಸಲಾಗಿದೆ ಎಂದು ಕೆಎಂಎಫ್‌ ಅಧ್ಯಕ್ಷ ಭೀಮನಾಯ್ಕ್ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ADVERTISEMENT

‍ದರ ಪರಿಷ್ಕರಣೆಗೊಂಡ ನಂತರ ಅರ್ಧ ಲೀಟರ್ ಹಾಲಿನ ದರ ₹22ರಿಂದ ₹24ಕ್ಕೆ ಹೆಚ್ಚಿಸಲಾಗಿದೆ. ಆದರೆ, ಗ್ರಾಹಕರಿಗೆ ಸಿಗುತ್ತಿದ್ದ 1 ಲೀಟರ್‌ (1 ಸಾವಿರ ಎಂ.ಎಲ್‌) ಹಾಗೂ ಅರ್ಧ ಲೀಟರ್ (500 ಎಂ.ಎಲ್‌) ಹಾಲು ಇನ್ನು ಮುಂದೆ ಕ್ರಮವಾಗಿ 1050 ಎಂ.ಎಲ್‌ ಹಾಗೂ 550 ಎಂ.ಎಲ್‌. ಸಿಗಲಿದೆ. ಅಂದರೆ 50 ಎಂ.ಎಲ್‌ ಹಾಲು ಹೆಚ್ಚುವರಿಯಾಗಿ ಸಿಗಲಿದೆ ಎಂದು ಅವರು ತಿಳಿಸಿದರು.

50 ಎಂಎಲ್ ಹೆಚ್ಚುವರಿ ‘ಮಾಯೆ’

‘ಹಾಲಿನ ದರವನ್ನು ಹೆಚ್ಚಿಸಿಲ್ಲ; 500 ಎಂಎಲ್‌ ಪ್ಯಾಕೆಟ್‌ಗೆ ಆರಂಭಿಕ ದರ ₹22 ಇದ್ದು, ಹೆಚ್ಚುವರಿಯಾಗಿ 50 ಎಂಎಲ್‌ ಹಾಲನ್ನು ನೀಡುತ್ತಿರುವುದಕ್ಕಾಗಿ ಪ್ಯಾಕೆಟ್‌ ಮೇಲೆ ₹2ರಷ್ಟು ಜಾಸ್ತಿ ಮಾಡಲಾಗಿದೆ. ಗ್ರಾಹಕರಿಗೆ ಹೆಚ್ಚುವರಿಯಾಗಿ ನೀಡುತ್ತಿರುವ ಹಾಲಿಗಷ್ಟೇ ದರ ವಿಧಿಸಲಾಗಿದೆ ಎಂದು ಕೆಎಂಎಫ್ ಮತ್ತು ಸರ್ಕಾರ ಪ್ರತಿಪಾದಿಸಿದೆ. 500ಎಂಎಲ್‌ಗೆ ₹22 ಆದರೆ, 50 ಎಂಎಲ್‌ಗೆ ₹2.20 ಆಗುತ್ತದೆ. ಸರ್ಕಾರದ ಲೆಕ್ಕವೇನೋ ಸರಿ ಇದೆ. 

ಹಿಂದೆ ದರ ಏರಿಕೆ ಮಾಡಿದಾಗಲೂ ಇದೇ ರೀತಿ 50 ಎಂಎಲ್ ಹೆಚ್ಚುವರಿ ಹಾಲು ನೀಡುತ್ತಿರುವುದಾಗಿ ಸರ್ಕಾರ ಪ್ರತಿಪಾದಿಸಿತ್ತು. ದರ ಏರಿಕೆಗೆ ತಕ್ಕಂತೆ ಗ್ರಾಹಕರಿಗೆ 550 ಎಂಎಲ್‌ ಅಳತೆಯ ಪ್ಯಾಕೆಟ್ ಪೂರೈಸಬೇಕಾಗಿತ್ತು. ದರ ಏರಿಕೆಯನ್ನು ಗ್ರಾಹಕರು ಮರೆತ ಕೂಡಲೇ, 50 ಎಂಎಲ್‌ ಕಡಿಮೆ ಮಾಡಿ 500 ಎಂಎಲ್‌ಗೆ ಇಳಿಸಲಾಗಿತ್ತು. ಕೆಎಂಎಫ್‌ ಹೇಳುತ್ತಿರುವಂತೆ ನೀಡುತ್ತಿರುವುದೇ ಆಗಿದ್ದರೆ ಹಿಂದಿನ ವರ್ಷದ ಆಗಸ್ಟ್‌ನಿಂದ ನೀಡಬೇಕಾಗಿದ್ದ 550 ಎಂಎಲ್ ಜತೆಗೆ 50 ಎಂಎಲ್ ಈಗ ಹೆಚ್ಚುವರಿಯಾಗಿ ನೀಡಿದ್ದರೆ ಗ್ರಾಹಕರಿಗೆ ಅರ್ಧ ಲೀಟರ್ ಅಲ್ಲ; 600 ಎಂಎಲ್‌ ಪ್ಯಾಕೆಟ್ ಲಭ್ಯವಾಗಬೇಕಿತ್ತು. ಆದರೆ, ದರ ಏರಿಕೆಯ ಬಳಿಕ 550 ಎಂಎಲ್‌ ಪ್ಯಾಕೆಟ್ ಅಷ್ಟೇ ಬುಧವಾರದಿಂಧ ಸಿಗಲಿದೆ. ಹಿಂದಿನ ಬಾರಿ ಕೆಎಂಎಫ್ ಹೇಳಿದ್ದ 50 ಎಂಎಲ್ ಎಲ್ಲಿ...?

‘ಕಾಫಿ–ಟೀ ದರ ಹೆಚ್ಚಳವಿಲ್ಲ’

‘ನಂದಿನಿ ಹಾಲಿನ ದರ ಹೆಚ್ಚಿಸುವುದರ ಜೊತೆಗೆ ಹೆಚ್ಚುವರಿಯಾಗಿ 50 ಎಂ.ಎಲ್‌ ಹಾಲು ನೀಡಲಾಗುತ್ತಿದೆ. ಇದರಿಂದ, ಹೋಟೆಲ್‌ ಉದ್ಯಮಕ್ಕೆ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ. ಆದ್ದರಿಂದ, ನಾವು ಕಾಫಿ–ಟೀ ದರಗಳನ್ನು ಹೆಚ್ಚಳ ಮಾಡುವುದಿಲ್ಲ’ ಎಂದು ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಪಿ.ಸಿ. ರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.

ಹಾಲಿನ ದರ ಏರಿಸಿಲ್ಲ: ಸಿದ್ದರಾಮಯ್ಯ

ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್‌) ಹಾಲಿನ ಪ್ರತಿ ಪ್ಯಾಕೆಟ್‌ನಲ್ಲಿ ಹೆಚ್ಚುವರಿಯಾಗಿ ನೀಡುವ 50 ಮಿಲಿ ಲೀಟರ್‌ ಹಾಲಿನ ಬಾಬ್ತು ₹2 ದರ ನಿಗದಿಪಡಿಸಿದೆ. ಹಾಲಿನ ದರ ಏರಿಕೆ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಅರ್ಧ ಲೀಟರ್‌ ಮತ್ತು ಒಂದು ಲೀಟರ್‌ ಹಾಲಿನ ಪ್ಯಾಕೆಟ್‌ಗಳಲ್ಲಿ ತಲಾ 50 ಮಿ.ಲೀ ಹಾಲು ಹೆಚ್ಚುವರಿಯಾಗಿ ದೊರಕಲಿದೆ. ಅದಕ್ಕೆ ತಕ್ಕಂತೆ ತಲಾ ₹2 ದರ ವಿಧಿಸಲಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.