ADVERTISEMENT

ಹಾಲು ಉತ್ಪಾದನೆ: ರೈತರಿಗೆ ವರ್ಷಕ್ಕೆ ₹1,800 ಕೋಟಿ ಪ್ರೋತ್ಸಾಹಧನ– ಸಿಎಂ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 16:06 IST
Last Updated 2 ಜುಲೈ 2024, 16:06 IST
ಒಂದು ಕೋಟಿ ಲೀಟರ್ ಹಾಲು ಸಂಗ್ರಹದ ಸಂಭ್ರಮಾಚರಣೆಯ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾ ಗೋ ಪೂಜೆ ಸಲ್ಲಿಸಿದರು. ಸಹಕಾರ ಸಚಿವ ಕೆ.ಎನ್. ರಾಜಣ್ಣ, ಕೆಎಂಎಫ್‌ ಅಧ್ಯಕ್ಷ ಭೀಮಾ ನಾಯ್ಕ, ವಸತಿ ಸಚಿವ ಬಿ.ಜೆಡ್‌. ಜಮೀರ್‌ ಅಹಮದ್ ಖಾನ್, ಪಶು ಸಂಗೋಪನೆ ಸಚಿವ ಕೆ. ವೆಂಕಟೇಶ್‌ ಇದ್ದರು. 
ಒಂದು ಕೋಟಿ ಲೀಟರ್ ಹಾಲು ಸಂಗ್ರಹದ ಸಂಭ್ರಮಾಚರಣೆಯ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾ ಗೋ ಪೂಜೆ ಸಲ್ಲಿಸಿದರು. ಸಹಕಾರ ಸಚಿವ ಕೆ.ಎನ್. ರಾಜಣ್ಣ, ಕೆಎಂಎಫ್‌ ಅಧ್ಯಕ್ಷ ಭೀಮಾ ನಾಯ್ಕ, ವಸತಿ ಸಚಿವ ಬಿ.ಜೆಡ್‌. ಜಮೀರ್‌ ಅಹಮದ್ ಖಾನ್, ಪಶು ಸಂಗೋಪನೆ ಸಚಿವ ಕೆ. ವೆಂಕಟೇಶ್‌ ಇದ್ದರು.    

ಬೆಂಗಳೂರು: ‘ಒಂದು ಕೋಟಿ ಲೀಟರ್ ಹಾಲು ಉತ್ಪಾದನೆಯಾದರೆ ದಿನವೊಂದಕ್ಕೆ ₹5 ಕೋಟಿ ಪ್ರೋತ್ಸಾಹಧನವನ್ನು ರೈತರಿಗೆ ರಾಜ್ಯ ಸರ್ಕಾರ ಕೊಡುತ್ತದೆ. ಆ ಮೊತ್ತ ತಿಂಗಳಿಗೆ ₹150 ಕೋಟಿ, ವರ್ಷಕ್ಕೆ ₹1,800 ಕೋಟಿ ಆಗುತ್ತದೆ. ಇದರಿಂದ ರೈತರಿಗೆ ಸಹಾಯವಾಗುತ್ತದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಒಂದು ಕೋಟಿ ಲೀಟರ್ ಹಾಲು ಸಂಗ್ರಹದ ಸಂಭ್ರಮಾಚರಣೆಯ ಅಂಗವಾಗಿ ಗೋ ಪೂಜೆ ಸಲ್ಲಿಸಿ ಮಾತನಾಡಿದ ಅವರು, ‘ಕೆಎಂಎಫ್ ವತಿಯಿಂದ ಪ್ರತಿದಿನ ಒಂದು ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಇದೊಂದು ಮೈಲಿಗಲ್ಲು. ಕಳೆದ ವರ್ಷ ಜೂನ್‌ನಲ್ಲಿ ದಿನವೊಂದಕ್ಕೆ 90 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗಿತ್ತು’ ಎಂದರು.

‘ರಾಜ್ಯದಲ್ಲಿ ಸುಮಾರು 16 ಸಾವಿರ ಸೊಸೈಟಿಗಳು, 15 ಹಾಲು ಒಕ್ಕೂಟಗಳಿವೆ. ಕೆಲವೆಡೆ 2–3 ಜಿಲ್ಲೆ ಸೇರಿ ಒಕ್ಕೂಟ ಮಾಡಿಕೊಂಡಿದ್ದಾರೆ. 15 ಮದರ್ ಡೇರಿಗಳಿವೆ. ಒಂದು ಕೋಟಿ ಲೀಟರ್ ಹಾಲು ಉತ್ಪಾದನೆ ಆಗುತ್ತಿದ್ದು, ಸಂಗ್ರಹವಾಗುವ ಹಾಲನ್ನು ಮಾರಾಟ ಮಾಡಬೇಕಿದೆ. ರೈತರಿಗೆ ಮತ್ತು ಸೊಸೈಟಿಗಳಿಗೆ ಹಾಲು ಬೇಡ ಎಂದು ನಾವು ಹೇಳಲು ಆಗುವುದಿಲ್ಲ. ಈ ಕಾರಣಕ್ಕೆ ಅರ್ಧ ಲೀಟರ್ ಹಾಲಿನ ಪ್ಯಾಕೆಟ್‌ನಲ್ಲಿ 50 ಮೀ.ಲೀಟರ್ ಹಾಲು ಹೆಚ್ಚು ಮಾಡಲಾಗಿದೆ. ರೈತರಿಗೆ ಸಹಾಯ ಮಾಡಲು ನಂದಿನಿ ಹಾಲಿನ ಪ್ರಮಾಣ ಹೆಚ್ಚಿಸಲಾಗಿದೆ. ಹೆಚ್ಚಾಗಿರುವ ಪ್ರಮಾಣಕ್ಕೆ ₹2 ಹೆಚ್ಚಿಸಲಾಗಿದೆ’ ಎಂದರು.

ADVERTISEMENT

ವಿಪಕ್ಷದ ಅಪಪ್ರಚಾರ: ‘ವಿರೋಧ ಪಕ್ಷದವರು ವಿಷಯ ಅರ್ಥ ಮಾಡಿಕೊಳ್ಳದೆ, ಹಾಲಿನ ಬೆಲೆ ಹೆಚ್ಚು ಮಾಡಿದ್ದಾರೆಂದು ಅಪಪ್ರಚಾರ ಮಾಡುತ್ತಿದ್ದಾರೆ. ರೈತರ ಬಗ್ಗೆ ಅವರಿಗೆ ಕಾಳಜಿ ಇಲ್ಲ. ಹಾಲು ಉತ್ಪಾದನೆ ಹೆಚ್ಚಾದರೆ ಆದಾಯ ಹೆಚ್ಚಾಗಲಿದೆ. ರೈತರಿಗೆ ನೀಡುತ್ತಿದ್ದ ₹2 ಪ್ರೋತ್ಸಾಹಧನವನ್ನು ₹5 ಮಾಡಿದವನು ನಾನು. ವಿರೋಧ ಪಕ್ಷದ ನಾಯಕ ಆರ್. ಅಶೋಕ ಈ ಬಗ್ಗೆ ತಿಳಿಯದೆ ಮಾತನಾಡುತ್ತಾರೆ’ ಎಂದರು.

‘ಹಾಲಿನ ಬೆಲೆ ಹೆಚ್ಚಾದರೂ ಕೊಳ್ಳುವವರಿಗೆ ‌ಭಾರವಾಗುತ್ತದೆಯೇ ಹೊರತು, ರೈತರಿಗಲ್ಲ. ರೈತರಿಗೆ ಸಹಾಯವಾಗುತ್ತದೆ. ಹಾಲಿನ ಬೆಲೆ ಹೆಚ್ಚು ಮಾಡಿಲ್ಲ’ ಎಂದು ಮುಖ್ಯಮಂತ್ರಿ ಪುನರುಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.