ADVERTISEMENT

ಕೆಎಂಎಫ್‌ | ಹಾಲಿನ ದರ ಹೆಚ್ಚಳ ತಾತ್ಕಾಲಿಕ?

ಸ್ನೇಹಾ ರಮೇಶ್
Published 2 ಜುಲೈ 2024, 20:08 IST
Last Updated 2 ಜುಲೈ 2024, 20:08 IST
   

ಬೆಂಗಳೂರು: ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಹಾಲಿನ ಉತ್ಪಾದನೆಯಲ್ಲಿ ಕುಸಿತವಾದರೆ ಪ್ರತಿ ಲೀಟರ್‌ ಮತ್ತು ಅರ್ಧ ಲೀಟರ್‌ ಪ್ಯಾಕೆಟ್‌ಗಳಲ್ಲಿ 50 ಮಿಲಿ ಲೀಟರ್‌ ಹೆಚ್ಚುವರಿ ಹಾಲನ್ನು ನೀಡಿ, ತಲಾ ₹ 2 ಹೆಚ್ಚಿನ ದರ ಪಡೆಯುತ್ತಿರುವ ನಿರ್ಧಾರವನ್ನು ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್‌) ಹಿಂಪಡೆಯುವ ಸಾಧ್ಯತೆ ಇದೆ.

‘ಮುಂದಿನ ಕೆಲವು ದಿನಗಳಲ್ಲಿ ಹಾಲಿನ ಉತ್ಪಾದನೆ ಇಳಿಮುಖವಾಗುವ ಸಾಧ್ಯತೆ ಇದೆ. ಮುಂದಿನ ಎರಡರಿಂದ ಮೂರು ತಿಂಗಳಲ್ಲಿ ಹಾಲಿನ ಉತ್ಪಾದನೆ ಕುರಿತು ಪರಿಶೀಲನೆ ನಡೆಸಿ ಹೆಚ್ಚುವರಿ ಹಾಲನ್ನು ನೀಡಿ, ಹೆಚ್ಚಿನ ದರ ವಿಧಿಸುತ್ತಿರುವ ವ್ಯವಸ್ಥೆಯನ್ನು ಮುಂದುವರಿಸುವ ಬಗ್ಗೆ ತೀರ್ಮಾನಕ್ಕೆ ಬರಲಾಗುವುದು’ ಎಂದು ಕೆಎಂಎಫ್‌ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಹಾಲಿನ ಉತ್ಪಾದನೆಯಲ್ಲಿ ಗಣನೀಯ ಹೆಚ್ಚಳ ಉಂಟಾದ ಕಾರಣದಿಂದಾಗಿಯೇ ಹಾಲು ಮತ್ತು ದರ ಎರಡನ್ನೂ ಹೆಚ್ಚಿಸುವ ನಿರ್ಧಾರಕ್ಕೆ ಬರಲಾಗಿದೆ. ಆದರೆ, ಎಲ್ಲ ಸಮಯದಲ್ಲೂ ಇದೇ ಪರಿಸ್ಥಿತಿ ಇರುವುದಿಲ್ಲ’ ಎಂದು ಮೂಲಗಳು ಹೇಳಿವೆ.

ADVERTISEMENT

‘ಕೆಲವು ತಿಂಗಳುಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಮೇವಿನ ಉತ್ಪಾದನೆ ಹೆಚ್ಚಿದೆ. ಇದೂ ಸೇರಿದಂತೆ ಹಲವು ಕಾರಣಗಳಿಂದ ರಾಜ್ಯದಲ್ಲಿ ಹಾಲಿನ ಉತ್ಪಾದನೆಯಲ್ಲಿ ಹೆಚ್ಚಳವಾಗಿದೆ. ಆದರೆ, ಇದೇ ಪರಿಸ್ಥಿತಿ ಮುಂದುವರಿಯುವುದಿಲ್ಲ ಎಂಬುದು ನಮಗೆ ತಿಳಿದಿದೆ. ಮುಂದಿನ ದಿನಗಳಲ್ಲಿ ಹಾಲಿನ ಉತ್ಪಾದನೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ. ಈ ಕಾರಣದಿಂದಾಗಿಯೇ ಎರಡರಿಂದ ಮೂರು ತಿಂಗಳಲ್ಲಿ ಪರಿಶೀಲನೆ ನಡೆಸಲು ಕೆಎಂಎಫ್‌ ಯೋಚಿಸಿದೆ’ ಎಂದು ಸಂಸ್ಥೆಯ ಮೂಲಗಳು ಹೇಳುತ್ತವೆ.

ಜೂನ್‌ 28ರಂದು ರಾಜ್ಯದಲ್ಲಿ ದಾಖಲೆಯ ಒಂದು ಕೋಟಿ ಲೀಟರ್‌ ಹಾಲಿನ ಉತ್ಪಾದನೆಯಾಗಿತ್ತು. ನಿಧಾನಕ್ಕೆ ಹಾಲಿನ ಉತ್ಪಾದನೆ ಇಳಿಮುಖವಾಗಿದೆ. ಮಂಗಳವಾರ (ಜುಲೈ 2) ಹಾಲಿನ ಉತ್ಪಾದನೆ ಪ್ರಮಾಣ 98 ಲಕ್ಷ ಲೀಟರ್‌ಗೆ ಕುಸಿದಿದೆ. ಕಳೆದ ವರ್ಷ ಚರ್ಮ ಗಂಟು ರೋಗ ಸೇರಿದಂತೆ ಹಲವು ಕಾರಣಗಳಿಂದ ಹಾಲಿನ ಉತ್ಪಾದನೆಯಲ್ಲಿ ಗಣನೀಯ ಕುಸಿತವಾಗಿತ್ತು.

ಶೀಘ್ರದಲ್ಲಿ ಮೊಸರಿನ ದರ ಏರಿಕೆ ಸಾಧ್ಯತೆ: ಹಾಲಿನ ದರದ ಮಾದರಿಯಲ್ಲೇ ಮೊಸರಿನ ಪ್ರಮಾಣವನ್ನೂ ಹೆಚ್ಚಿಸಿ ದರ ಏರಿಕೆ ಮಾಡಲು ಕೆಎಂಎಫ್‌ ಚಿಂತನೆ ನಡೆಸಿದೆ. ಆದರೆ, ಇನ್ನೂ ನಿರ್ಧಾರವನ್ನು ಅಂತಿಮಗೊಳಿಸಿಲ್ಲ. ದರ ಹೆಚ್ಚಳಕ್ಕೆ ಅನುಸರಿಸಬೇಕಾದ ಮಾನದಂಡಗಳ ಕುರಿತು ಅಧಿಕಾರಿಗಳು ಚರ್ಚೆಯಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.