ಬೆಂಗಳೂರು: ‘ಕರ್ನಾಟಕ ಏಕೀಕರಣ ಚಳವಳಿಯ ಹೋರಾಟಗಾರ, ಸಾಹಿತಿ ಹಾಗೂ ನಿವೃತ್ತ ನ್ಯಾಯಾಧೀಶರಾಗಿದ್ದ ಕೋ.ಚೆನ್ನಬಸಪ್ಪ ಅವರ ಜನ್ಮ ಶತಮಾನೋತ್ಸವ ಸಮಾರೋಪ ಸಮಾರಂಭವನ್ನು ಫೆ.26ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಕೋ.ಚೆನ್ನಬಸಪ್ಪ ಜನ್ಮಶತಮಾನೋತ್ಸವ ಸಮಿತಿ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಹೇಳಿದರು.
‘ಕೋ.ಚೆನ್ನಬಸಪ್ಪ ಅವರ ನೆನಪುಗಳನ್ನು ಸದಾ ಹಸಿರಾಗಿರುವಂತೆ ಕಾಪಾಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಈ ಸಮಾರಂಭವನ್ನು ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಉದ್ಘಾಟನೆ ಮಾಡಲಿದ್ದು, ಕೋ.ಚೆನ್ನಬಸಪ್ಪ ಅವರ ಕುರಿತು ನಿರ್ಮಿಸಿರುವ ಸಾಕ್ಷ್ಯಚಿತ್ರವನ್ನು ಸಹ ಬಿಡುಗಡೆ ಮಾಡಲಿದ್ದಾರೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ನಿವೃತ್ತ ನ್ಯಾಯಾಧೀಶರಾದ ಎಸ್. ಸುಜಾತ ಅವರು ಕೋಚೆ ಸಮಗ್ರ ಸಾಹಿತ್ಯದ ಎರಡು ಸಂಪುಟಗಳನ್ನು ಬಿಡುಗಡೆಗೊಳಿಸಲಿದ್ದಾರೆ. ಲಕ್ಷ್ಮಣ ಕೊಡಸೆ ಸಂಪಾದಿಸಿದ, ಕೋಚೆ ಜನ್ಮಶತಮಾನೋತ್ಸವ ಸಮಾರಂಭಗಳಲ್ಲಿ ಮಂಡನೆಯಾದ ಉಪನ್ಯಾಸಗಳು ಮತ್ತು ವರದಿಗಳ ‘ಕೋಚೆ ನೂರರ ನೆನಪು’ ಸ್ಮರಣ ಗ್ರಂಥವನ್ನು ಪತ್ರಕರ್ತೆ ವಿಜಯಾ ಬಿಡುಗಡೆ ಮಾಡಲಿದ್ದಾರೆ. ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್.ಶಂಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮಹೇಶ್ ಕರ್ಜಗಿ ಕಾರ್ಯಕ್ರಮದಲ್ಲಿ
ಭಾಗವಹಿಸಲಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.