ಮಡಿಕೇರಿ: ಕೊಡಗು ಜಿಲ್ಲೆಯ ಕೆ.ನಿಡುಗಣಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 808 ಮರ ಕಡಿಯಲು ಅರಣ್ಯ ಇಲಾಖೆಯೇ ಅನುಮತಿ ನೀಡಿರುವ ಪ್ರಕರಣವನ್ನು ರಾಜ್ಯ ಸರ್ಕಾರವು ಗಂಭೀರವಾಗಿ ಪರಿಗಣಿಸಿದ್ದು ತಕ್ಷಣವೇ ಮರ ಕಡಿಯುವುದನ್ನು ಸ್ಥಗಿತಗೊಳಿಸಿ, ಪ್ರಕರಣದ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸೂಚನೆ ನೀಡಿದ್ದಾರೆ.
ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ್ ಅವರಿಗೆ ಕುಮಾರಸ್ವಾಮಿ ಅವರು ಶುಕ್ರವಾರ ಸೂಚಿಸಿದ್ದಾರೆ.
ಮತ್ತೊಂದೆಡೆ ಜಿಲ್ಲಾಡಳಿತವು ಮರ ಕಡಿತಪ್ರಕರಣದ ತನಿಖೆ ಆರಂಭಿಸಿದ್ದು ವರದಿ ಸಲ್ಲಿಸುವಂತೆಯೂ ಸಿಸಿಎಫ್‌ಗೆ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶಿಸಿದ್ದಾರೆ.
‘ಮರ ಕಡಿಯಲು ಆದೇಶ ನೀಡಿರುವ ಮಡಿಕೇರಿ ವಲಯದ ಡಿಎಫ್‌ಒ ಅವರು ಆ ಸ್ಥಳದ ಭೂಪರಿವರ್ತನೆ ಆಗಿದೆ ಎಂದು ಮಾಹಿತಿ ನೀಡಿದ್ದಾರೆ. ಆ ಪ್ರದೇಶವು ಭೂಪರಿವರ್ತನೆ ಆಗಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ದಾಖಲಾತಿ ಪರಿಶೀಲನೆಗೆ ಸೂಚಿಸಲಾಗಿದೆ. ಮರ ಕಡಿಯುವುದನ್ನು ಸ್ಥಗಿತಗೊಳಿಸಲಾಗಿದೆ. ಜೂನ್ 14ರಂದು ಅರಣ್ಯಾಧಿಕಾರಿಗಳ ಸಭೆ ನಡೆಯಲಿದ್ದು, ಅಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು. ಪರಿಸರ ಉಳಿಸಲು ಜಿಲ್ಲಾಡಳಿತ ಬದ್ಧವಾಗಿದೆ. ಸಭೆಯಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮರ ಕಡಿಯಲು ಅನುಮತಿ ನೀಡಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಜರಿರಲಿದ್ದಾರೆ. ಅಷ್ಟರೊಳಗೆಯೇ ವರದಿ ನೀಡುವಂತೆಯೂ ಸೂಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಕೆ.ನಿಡುಗಣಿ ಗ್ರಾಮದಲ್ಲಿ ಮರ ಕಡಿಯಲು ಡಿಎಫ್‌ಒ ಆದೇಶ ನೀಡಿದ್ದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ತುತ್ತಾಗಿತ್ತು. ಗೃಹ ನಿರ್ಮಾಣ ಮಂಡಳಿಯ ಹೆಸರಿನಲ್ಲಿ ಹೊರ ರಾಜ್ಯದ ಉದ್ಯಮಿಯೊಬ್ಬರು ರೆಸಾರ್ಟ್ ನಿರ್ಮಿಸಲು ನೂರಾರು ಮರಗಳನ್ನು ಕಡಿಸಿ, ವನ್ಯ ಸಂಪತ್ತು ನಾಶ ಪಡಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಗುರುವಾರ ಪರಿಸರ ಪ್ರೇಮಿಗಳು ಸ್ಥಳಕ್ಕೆ ತೆರಳಿ ಅರಣ್ಯಾಧಿಕಾರಿಗಳ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ಆಕ್ರೋಶ ವ್ಯಕ್ತವಾಗಿತ್ತು.
ಕೊಡಗು ಭೂಕುಸಿತದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಅಷ್ಟರಲ್ಲಿಯೇ ವಾಣಿಜ್ಯ ಉದ್ದೇಶಕ್ಕೆ ನೂರಾರು ಮರ ಕಡಿದಿರುವುದಕ್ಕೆ ಖಂಡನೆ ವ್ಯಕ್ತವಾಗಿತ್ತು.
'ಪ್ರಜಾವಾಣಿ'ಯ ಶುಕ್ರವಾರದ ಸಂಚಿಕೆಯ ಮುಖಪುಟದಲ್ಲಿ '808 ಮರಗಳು ಬಲಿ; ಅರಣ್ಯ ಇಲಾಖೆಯಿಂದಲೇ ಕಡಿತಕ್ಕೆ ಅನುಮತಿ' ಶೀರ್ಷಿಕೆ ಅಡಿ ವಿವರವಾದ ವರದಿ ಪ್ರಕಟವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.