ಸುಳ್ಯ: ಕೊಡಗು ಜಿಲ್ಲೆಯ ಅನೇಕ ಬೆಟ್ಟ ಪ್ರದೇಶಗಳು ವಾಸ ಯೋಗ್ಯ ಅಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಮಳೆ ಮುಗಿದ ಬಳಿಕ ಇನ್ನಷ್ಟು ದೊಡ್ಡ ತಂಡ ಮತ್ತು ಪರಿಕರಗಳೊಂದಿಗೆ ಸಂಪೂರ್ಣ ಸುತ್ತಾಡಿ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡಲಿದ್ದೇವೆ’ ಎಂದು ಭೂಗರ್ಭ ಶಾಸ್ತ್ರಜ್ಞ ಎಚ್.ಎನ್.ಪ್ರಕಾಶ್ ಹೇಳಿದರು.
ಈಚೆಗೆ ಭಾರಿ ಭೂಕುಸಿತ ಉಂಟಾಗಿರುವ ಜೋಡುಪಾಲ ಪ್ರದೇಶಕ್ಕೆ ಬುಧವಾರ ಭೇಟಿ ನೀಡಿದ ವಿಜ್ಞಾನಿಗಳ ತಂಡದ ಜತೆಗಿದ್ದ ಅವರು ‘ಪ್ರಜಾವಾಣಿ’ಗೆ ಈ ವಿಷಯ ತಿಳಿಸಿದರು.
‘ಈಗ ಮಳೆ ಮುಂದುವರಿಯುತ್ತಿರುವುದರಿಂದ ಎಲ್ಲಾ ಹಂತದಲ್ಲಿ ಅಧ್ಯಯನ ಮಾಡಲು ಸಾಧ್ಯ ಆಗುವುದಿಲ್ಲ. ಈಗಾಗಲೇ ಮೊದಲ ಹಂತದಲ್ಲಿ ಮಾತ್ರ ಮೇಲ್ನೋಟದ ಅಧ್ಯಯನ ಮಾಡಿದ್ದೇವೆ’ ಎಂದರು.
‘ಅತಿ ಮಳೆಯೇ ಭೂಕುಸಿತಕ್ಕೆ ಮೂಲ ಕಾರಣ. ಅಸ್ಥಿರ ಗುಡ್ಡ ಪ್ರದೇಶ ಇನ್ನೊಂದು ಕಾರಣ. ಪಯಸ್ವಿನಿ ನದಿ ಭಾಗದಲ್ಲಿಯೂ ಮಣ್ಣು ಕೊರೆದು ಹೋಗಿದೆ. ನೀರು ಸಾಮಾನ್ಯವಾಗಿ ಅಡಿಭಾಗದಲ್ಲಿ ಹರಿಯುತ್ತಿತ್ತು. ಮಳೆ ಏಕಕಾಲದಲ್ಲಿ ಹೆಚ್ಚಾದಾಗ ಮಳೆ ನೀರು ಏಕಕಾಲದಲ್ಲಿ ಮಣ್ಣಿನಡಿಯಲ್ಲಿ ಇಂಗಿ ಹೋಗುವುದಕ್ಕೆ ಸಾಧ್ಯ ಆಗದೇ ಇದ್ದಾಗ ಮೇಲ್ಭಾಗದಲ್ಲೇ ಹರಿದು ಹೋಯಿತು. ನೀರು ಇರುವ ಜಾಗದಲ್ಲಿ ಅದರ ಮೇಲೆ ಇದ್ದ ಮನೆಗಳನ್ನು ಕೊಚ್ಚಿಕೊಂಡು ಹೋಗಿದೆ. ಇದರಿಂದ ಈ ಘಟನೆ ನಡೆದಿದೆ’ ಎಂದು ಅವರು ವಿವರಿಸಿದರು.
‘ಇಲ್ಲಿ ದೊಡ್ಡ ಪ್ರಮಾಣದಲ್ಲಿ ಹಾನಿ ಆಗಿದೆ. ಇದನ್ನೆಲ್ಲಾ ದೀರ್ಘ ಅಧ್ಯಯನ ಮಾಡಬೇಕಿದೆ. ಗುಡ್ಡ, ಕಾಡು ಕಡಿದು ಇಲ್ಲಿ ಆಧುನಿಕ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಸಾಮಾನ್ಯ ರಚನೆಯಲ್ಲಿ ಅಂದರೆ ಮೂಲ ರಚನೆ, ಮೂಲ ಪದರಕ್ಕೆ ಹಾನಿ ಆಗಿದೆ’ ಎಂದು ಭಾರತೀಯ ಭೂ ಸರ್ವೇಕ್ಷಣೆಯ ಇಲಾಖೆಯ ವಿಜ್ಞಾನಿ ಡಾ.ಮಾರುತಿ ತಿಳಿಸಿದರು.
ಈ ಹಿಂದೆಯೂ ಸರ್ವೇ: ಜಿಎಸ್‌ಐ ತಂಡದಿಂದ ಈ ಪ್ರದೇಶದಲ್ಲಿ ಈ ಹಿಂದೆಯೂ ಒಂದು ಸಮೀಕ್ಷೆ ಮಾಡಿದ್ದೇವೆ. ಅಷ್ಟೊಂದು ಉತ್ತಮ ಪ್ರದೇಶ ಅಲ್ಲ ಎನ್ನುವುದು ಗಮನಕ್ಕೆ ಬಂದಿದೆ. ಮುಂದಿನ ದಿನದಲ್ಲಿ ಸೂಕ್ತ ಅಧ್ಯಯನ ಮಾಡಿ ಸರ್ಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೂ ವರದಿ ನೀಡುತ್ತೇವೆ ಎಂದು ಹೇಳಿದರು.
‘ಮುಂದಿನ ದಿನಗಳಲ್ಲಿ ಹೀಗೆ ಜಾಸ್ತಿ ಮಳೆ ಬಂದರೆ ಏನಾಗಬಹುದು. ಈ ಭಾಗದಲ್ಲಿ ರಸ್ತೆ ಇರುವುದರಿಂದ ಮತ್ತು ಮನೆ ನಿರ್ಮಿಸಿಕೊಂಡರೆ ಏನಾಗಬಹುದು ಎನ್ನುವ ಅಧ್ಯಯನ ಮಾಡುತ್ತಿದ್ದೇವೆ’ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ನಿರ್ದೇಶಕ ಶ್ರೀನಿವಾಸ ರೆಡ್ಡಿ ವಿವರಿಸಿದರು.
ಮಳೆ ಇಳಿಕೆ: ಮಂಗಳವಾರ ಸಂಜೆಯಿಂದಲೇ ಜೋಡಪಾಲ ಮತ್ತು ದೇವರಕೊಲ್ಲಿ ಪ್ರದೇಶದಲ್ಲಿ ಮಳೆ ಪ್ರಮಾಣ ಕಡಿಮೆ ಆಗಿದೆ. ಪಯಸ್ವಿನಿ ನದಿಯಲ್ಲಿ ಮಳೆ ನೀರು, ಮಣ್ಣು ಮಿಶ್ರಿತ ನೀರಿನ ಪ್ರಮಾಣ ಕಡಿಮೆ ಆಗಿದೆ. ಘಾಟಿ ರಸ್ತೆಯಲ್ಲಿ ತುಂಬಿರುವ ಮಣ್ಣನ್ನು ತೆರವುಗೊಳಿಸುವ ಕಾರ್ಯ ಇದೀಗ ಆರಂಭವಾಗಿದೆ.
‘ವರದಿ ಆಧಾರದಲ್ಲಿ ಮುಂದಿನ ಕ್ರಮ’
ಮಂಗಳೂರು: ಭಾರತೀಯ ಭೂ ಸರ್ವೇಕ್ಷಣಾ ಇಲಾಖೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕೇಂದ್ರದ ತಜ್ಞರ ತಂಡ ಜೋಡುಪಾಲ, ಮೊನ್ನಂಗೇರಿ, ಹೆಮ್ಮತ್ತಾಳ ಪ್ರದೇಶದಲ್ಲಿ ಬುಧವಾರ ಅಧ್ಯಯನ ನಡೆಸಿದ್ದು, ಪ್ರಾಥಮಿಕ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದೆ. ವರದಿಯ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ಹೆಚ್ಚು ಹಾನಿಗೆ ಒಳಗಾಗಿರುವ ದೇವರಕಲ್ಲು, ಅರಮಕಲ್ಲು ಮತ್ತು ಕರೆಕಲ್ಲು ಪ್ರದೇಶಗಳಲ್ಲಿ ತಜ್ಞರು ಪರಿಶೀಲನೆ ನಡೆಸಿದ್ದಾರೆ. ಈ ಪ್ರದೇಶಗಳು ಸುರಕ್ಷಿತ ಎಂದು ತಜ್ಞರು ಅಭಿಪ್ರಾಯಪಟ್ಟಲ್ಲಿ, ಆ ಪ್ರದೇಶದ ಜನರು ಮನೆಗಳಿಗೆ ತೆರಳಲು ಅವಕಾಶ ನೀಡಲಾಗುವುದು. ಸಂಪಾಜೆ, ಕಲ್ಲುಗುಂಡಿ, ಅರಂತೋಡು ಪರಿಹಾರ ಕೇಂದ್ರಗಳಲ್ಲಿ ಇರುವ ಬಹುತೇಕ ಸಂತ್ರಸ್ತರು ತಮ್ಮ ಮನೆಗಳಿಗೆ ತೆರಳುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದ ಅವರು, ಭೂಕುಸಿತದಿಂದ ಹಾನಿಗೆ ಒಳಗಾದ ಜೋಡುಪಾಲ, ಮೊನ್ನಂಗೇರಿ ಪ್ರದೇಶಗಳು ಅಪಾಯಕಾರಿಯಾಗಿವೆ ಎಂದು ಹೇಳಿದ್ದಾರೆ.
ಜೋಡುಪಾಲದ ಹೆದ್ದಾರಿಯಲ್ಲಿ ಬಿದ್ದಿರುವ ಕಲ್ಲು, ಮಣ್ಣು, ಮರಗಳ ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ. ಪರಿಹಾರ ಕೇಂದ್ರದಲ್ಲಿ ಇರುವ ಬಹುತೇಕ ಮಕ್ಕಳು ಹತ್ತಿರದ ಶಾಲೆಗಳಿಗೆ ಹೋಗುತ್ತಿದ್ದಾರೆ ಎಂದರು.
ಪರಿಹಾರ ಕೇಂದ್ರದಲ್ಲಿ ಸಾವು
ಸೋಮವಾರಪೇಟೆ: ಪರಿಹಾರ ಕೇಂದ್ರದಲ್ಲಿದ್ದ ಸಂಬಂಧಿಕರನ್ನು ಮಾತನಾಡಿಸಲು ಬಂದಿದ್ದ ವೃದ್ಧೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬಿಳಿಗೇರಿ ಗ್ರಾಮದ ಭೋಜಮ್ಮ (80) ಮೃತಪಟ್ಟವರು. ಸಂಬಂಧಿಕರನ್ನು ನೋಡಲು ಕೊಡವ ಸಮಾಜದಲ್ಲಿನ ಸಂತ್ರಸ್ತ ಕೇಂದ್ರಕ್ಕೆ ಮಂಗಳವಾರ ಬಂದಿದ್ದು ಅಲ್ಲಿಯೇ ತಂಗಿದ್ದು, ರಾತ್ರಿ ಹೃದಯಾಘಾತವಾಗಿದೆ. ಕೂಡಲೇ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.