ಮಡಿಕೇರಿ: ಭೂಕುಸಿತ, ಪ್ರವಾಹ ಸಂದರ್ಭದಲ್ಲಿ ನಗರದ ಮೈತ್ರಿ ಹಾಲ್‌ನಲ್ಲಿ ಆರಂಭಿಸಿದ್ದ ಪರಿಹಾರ ಕೇಂದ್ರವನ್ನು ಸ್ಥಗಿತಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿರುವುದು ಸಂತ್ರಸ್ತರ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ಸಂತ್ರಸ್ತರು ವಿರೋಧ ವ್ಯಕ್ತಪಡಿಸಿದ್ದು, ಸೋಮವಾರ ಪ್ರತಿಭಟನೆ ನಡೆಸಿದರು.
‘ಭೂಕುಸಿತದಿಂದ ಮನೆ ಕಳೆದುಕೊಂಡು ನಾಲ್ಕು ತಿಂಗಳಿಂದ ಈ ಕೇಂದ್ರದಲ್ಲಿ ವಾಸ್ತವ್ಯ ಮಾಡಿದ್ದೆವು. ಇಲ್ಲಿಂದಲೂ ಹೊರಹಾಕಲು ಮುಂದಾಗಿರುವುದು ನೋವು ತಂದಿದೆ’ ಎಂದು ಅಳಲು ತೋಡಿಕೊಂಡರು.
ರಾಜ್ಯ ಸರ್ಕಾರ ತಿಂಗಳಿಗೆ ₹ 10 ಸಾವಿರ ಬಾಡಿಗೆ ಹಣ ಪಾವತಿಸುವುದಾಗಿ ಭರವಸೆ ನೀಡಿತ್ತು. ಆದರೆ, ಈ ಕೇಂದ್ರದಲ್ಲಿರುವ ಸಂತ್ರಸ್ತರ ಬ್ಯಾಂಕ್ ಖಾತೆಗೆ ಹಣ ಸಂದಾಯವಾಗಿಲ್ಲ. ಏಕಾಏಕಿ ಸಭಾಂಗಣ ಖಾಲಿ ಮಾಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಪರ್ಯಾಯ ವ್ಯವಸ್ಥೆ ಇಲ್ಲದೇ ಎಲ್ಲಿಗೆ ತೆರಳುವುದು ಎಂದು ಸಂತ್ರಸ್ತರು ಪ್ರಶ್ನಿಸಿದರು.
ಆಗಸ್ಟ್, ಸೆಪ್ಟೆಂಬರ್‌ನಲ್ಲಿ ಈ ಕೇಂದ್ರದಲ್ಲಿ 250 ಮಂದಿ ಸಂತ್ರಸ್ತರಿದ್ದರು. ಕ್ರಮೇಣ ಸಂತ್ರಸ್ತರ ಸಂಖ್ಯೆ ಕಡಿಮೆ ಆಯಿತು. ಈಗ 49 ಮಂದಿ ಮೈತ್ರಿ ಹಾಲ್‌ನಲ್ಲಿದ್ದಾರೆ. ಇವರಲ್ಲಿ ಕೆಲವರು ಕಾಫಿ ತೋಟದ ಲೈನ್‌ಮನೆಗಳಿಂದ ಬಂದು ಪರಿಹಾರ ಕೇಂದ್ರ ಸೇರಿಕೊಂಡಿದ್ದಾರೆ. ಹೀಗಾಗಿ, ಸಮಸ್ಯೆಯಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಆರಂಭದಲ್ಲಿ ಜಿಲ್ಲಾಡಳಿತವೇ ಅಡುಗೆ ಸಿಬ್ಬಂದಿ ನೇಮಕ ಮಾಡಿತ್ತು. ಬಳಿಕ ಸಂತ್ರಸ್ತರೇ ಊಟ, ತಿಂಡಿ ಸಿದ್ಧಪಡಿಸಿಕೊಳ್ಳುತ್ತಿದ್ದರು. ಬಾಡಿಗೆ ಮನೆಗಳಿಗೆ ತೆರಳುವಂತೆ ಅಧಿಕಾರಿಗಳು ಸೂಚಿಸಿದ್ದು, ಬಾಡಿಗೆ ಹಣ ಪಾವತಿಸದಿದ್ದರೆ ಸಭಾಂಗಣ ಖಾಲಿ ಮಾಡುವುದಿಲ್ಲ ಎಂದು ಸಂತ್ರಸ್ತರು ಪಟ್ಟು ಹಿಡಿದಿದ್ದಾರೆ.
ಹುಳು ಹಿಡಿದ ಅಕ್ಕಿ: ಪರಿಹಾರ ಕೇಂದ್ರದಲ್ಲಿ ದಾಸ್ತಾನಿರುವ ಅಕ್ಕಿ, ತೊಗರಿ ಬೇಳೆ, ಗೋಧಿ ಹಿಟ್ಟಿಗೆ ಹುಳು ಹಿಡಿದು ಹಾಳಾಗುತ್ತಿದೆ. ಜತೆಗೆ, ಕುಶಾಲನಗರ ಎಂಪಿಎಂಸಿ ಗೋದಾಮು, ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜು ಕೊಠಡಿಯಲ್ಲೂ ನೆರೆ ಸಂತ್ರಸ್ತರಿಗೆ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಆಹಾರ ಸಾಮಗ್ರಿಗಳಿಗೂ ಹುಳುಗಳ ಕಾಟ ಶುರುವಾಗಿದೆ.
ದಾಸ್ತಾನಿರುವ ಆಹಾರ ಸಾಮಗ್ರಿಗಳನ್ನು ಸಂಕಷ್ಟಕ್ಕೆ ಒಳಗಾದ ಗ್ರಾಮಗಳ ಜನರಿಗೆ ವಿತರಿಸುವಂತೆ ಸಚಿವ ಸಾ.ರಾ.ಮಹೇಶ್ ಈ ಹಿಂದೆ ಸೂಚಿಸಿದ್ದರು. ಆದರೆ, ಅಧಿಕಾರಿಗಳು ಮಾತ್ರ ವಿತರಣೆಗೆ ಮುಂದಾಗಿಲ್ಲ ಎಂದು ಆರೋಪ ಕೇಳಿಬಂದಿದೆ.
‘ಆರಂಭದಲ್ಲಿ ಎಲ್ಲ ಸೌಲಭ್ಯಗಳೂ ಸಿಗುತ್ತಿದ್ದವು. ಈಗ ನಮ್ಮ ನೋವನ್ನು ಯಾರೂ ಆಲಿಸುತ್ತಿಲ್ಲ. ಈ ಕೇಂದ್ರದಲ್ಲಿದ್ದವರ ಬದುಕು ಬೀದಿಗೆ ಬಿದ್ದಿದೆ’ ಎಂದು ಸಂತ್ರಸ್ತ ಮಹಿಳೆ ಸಾವಿತ್ರಿ ಕಣ್ಣೀರು ಸುರಿಸಿದರು.
‘ಕಾಫಿ ತೋಟದ ಲೈನ್‌ಮನೆಯಲ್ಲಿ ವಾಸಿಸುತ್ತಿದ್ದೆ. ಮಳೆಯ ಆರ್ಭಟದಿಂದ ಮಾಲೀಕರ ಮನೆಯೊಂದಿಗೆ ನಾನು ವಾಸಿಸುತ್ತಿದ್ದ ಮನೆಯೂ ಕುಸಿದಿತ್ತು. ದಾಖಲೆ ಪತ್ರ ಇಲ್ಲದವರಿಗೆ ಮನೆ ನೀಡುವುದಿಲ್ಲವೆಂದು ಈಗ ಅಧಿಕಾರಿಗಳು ಹೇಳುತ್ತಿದ್ದು ದಿಕ್ಕು ತೋಚುತ್ತಿಲ್ಲ’ ಎಂದು ಮಕ್ಕಂದೂರಿನ ಸಂತ್ರಸ್ತ ಮಹಿಳೆ ಕೆ.ಬಿ.ಲೀಲಾವತಿ ಅಳಲು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.