ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಆಗಸ್ಟ್‌ನಲ್ಲಿ ಉಂಟಾಗಿದ್ದ ಭೂಕುಸಿತವು ‘ಮಾನವ ನಿರ್ಮಿತ ದುರಂತ’ವೆಂದು ಭಾರತೀಯ ಭೂಸರ್ವೇಕ್ಷಣಾ ಇಲಾಖೆ ತಜ್ಞರು ಅಭಿಪ್ರಾಯಪಟ್ಟಿದ್ದು, ಮತ್ತೊಂದು ಅಧ್ಯಯನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ.
ಜಿಲ್ಲೆಯ 105 ಸ್ಥಳಗಳಲ್ಲಿ ಸಣ್ಣ ಹಾಗೂ ದೊಡ್ಡ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿತ್ತು. ಸರ್ಕಾರದ ಸೂಚನೆಯ ಮೇರೆಗೆ ಭೂಸರ್ವೇಕ್ಷಣಾ ಇಲಾಖೆ ನಿರ್ದೇಶಕ ಕೆ.ವಿ.ಮಾರುತಿ, ಹಿರಿಯ ಭೂವಿಜ್ಞಾನಿ ಅಂಕುರ್ ಕುಮಾರ್ ಶ್ರೀವಾಸ್ತವ್, ಭೂವಿಜ್ಞಾನಿ ಸುನಂದನ್ ಬಸು ಅವರನ್ನು ಒಳಗೊಂಡ ತಂಡವು ಭೂಕುಸಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ತಯಾರಿಸಿತ್ತು. ಪ್ರಾಥಮಿಕ ವರದಿಯನ್ನು ಸೆ. 26ರಂದು ಕೊಡಗು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದ ತಂಡವು, ಮತ್ತಷ್ಟು ಅಧ್ಯಯನ ನಡೆಸಿ ಈಗ ಅಂತಿಮ ವರದಿಯನ್ನು ಸರ್ಕಾರಕ್ಕೆ ಹಸ್ತಾಂತರಿಸಿದೆ ಎಂದು ಮೂಲಗಳು ತಿಳಿಸಿವೆ.
ನಾಲ್ಕು ಪಂಚಾಯಿತಿ ವ್ಯಾಪ್ತಿಯ 38 ಗ್ರಾಮಗಳಲ್ಲಿ ಅತಿಯಾದ ಮಾನವ ಹಸ್ತಕ್ಷೇಪ ಹಾಗೂ ಅರಣ್ಯ ನಾಶ ಭೂಕುಸಿತಕ್ಕೆ ಕಾರಣವೇ ಹೊರತು ಜುಲೈನಲ್ಲಿ ಉಂಟಾಗಿದ್ದ ಲಘು ಭೂಕಂಪನದಿಂದ ಆದ ದುರಂತವಲ್ಲ ಎಂದು ವರದಿಯಲ್ಲಿ ಭೂವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.
ಅವೈಜ್ಞಾನಿಕ ರಸ್ತೆ: ಕೊಡಗಿನಲ್ಲಿ ಬೆಟ್ಟಗಳನ್ನು ಕಡಿದು ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸಲಾಗಿದೆ. ರಸ್ತೆ ನಿರ್ಮಾಣಕ್ಕೆ ಯಾವುದೇ ತಂತ್ರ ಪಾಲಿಸಿಲ್ಲ. ಮನೆ, ಹೋಟೆಲ್, ರೆಸಾರ್ಟ್, ಹೋಂ ಸ್ಟೇ, ಕಾಫಿ ತೋಟ ನಿರ್ಮಾಣಕ್ಕೆ ನೈಸರ್ಗಿಕ ಬೆಟ್ಟಗಳನ್ನು ಮಾರ್ಪಾಡು ಮಾಡಲಾಗಿದೆ. ಭೌಗೋಳಿಕ ಸ್ವರೂಪವೇ ಬದಲಾಗಿದ್ದು ಮಹಾಮಳೆಯ ನೀರು ಏಕಾಏಕಿ ನುಗ್ಗಿದ ಪರಿಣಾಮವಾಗಿ ಬೆಟ್ಟಕ್ಕೆ ಹಾನಿಯಾಗಿರುವ ಸಾಧ್ಯತೆಯಿದೆ. ಬೆಟ್ಟಗಳಲ್ಲಿ ಆಧುನಿಕ ವ್ಯವಸ್ಥೆ ಮಾಡಿಕೊಂಡಿರುವುದೂ ದೊಡ್ಡ ಪ್ರಮಾಣದ ದುರಂತಕ್ಕೆ ಕಾರಣ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.
ಪರಿಹಾರ ಕ್ರಮ: ಭವಿಷ್ಯದಲ್ಲಿ ವಿಪತ್ತು ತಡೆಯಲು ಬೆಟ್ಟದ ಪ್ರದೇಶದಲ್ಲಿ ಭೂಬಳಕೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಬೆಟ್ಟ ಪ್ರದೇಶದಲ್ಲಿ ಹಾದು ಹೋಗಿರುವ ಹೆದ್ದಾರಿಗಳಲ್ಲಿ ಸೂಕ್ತ ಚರಂಡಿ ನಿರ್ಮಾಣ ಮಾಡಬೇಕು. ಭೂಕುಸಿತ ಸ್ಥಳ ಹಾಗೂ ಇಳಿಜಾರು ಪ್ರದೇಶದಲ್ಲಿ ಸಸ್ಯ ಬೆಳೆಸಬೇಕು. ತಡೆಗೋಡೆ ನಿರ್ಮಾಣಕ್ಕೂ ಆದ್ಯತೆ ನೀಡಬೇಕು ಎಂದು ವಿವರಿಸಲಾಗಿದೆ.
**
ಮುಖ್ಯಾಂಶಗಳು
* ಭೂಕುಸಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ
* ಲಘು ಭೂಕಂಪನದಿಂದ ಆದ ದುರಂತವಲ್ಲ
* ಮಾನವ ಹಸ್ತಕ್ಷೇಪ, ಅರಣ್ಯ ನಾಶ ಭೂಕುಸಿತಕ್ಕೆ ಕಾರಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.