ADVERTISEMENT

ಕಣ್ ಮುಂದೆಯೇ ಇಂಚಿಂಚಾಗಿ ಜಾರಿದ ಕಾಫಿನಾಡು

ಉಷಾ ಪ್ರೀತಮ್
Published 20 ಆಗಸ್ಟ್ 2018, 19:30 IST
Last Updated 20 ಆಗಸ್ಟ್ 2018, 19:30 IST
ಉಷಾ ಪ್ರೀತಮ್
ಉಷಾ ಪ್ರೀತಮ್   

ವಿರಾಜಪೇಟೆ: ಈ ಕೊಡಗಿನ ಸ್ಥಿತಿನಾ ಯಾವ ಕಡೆಯಿಂದ ಶುರು ಮಾಡೋದು ಅನ್ನೋದೆ ದೊಡ್ಡ ಗೊಂದಲ. ಏಕೆಂದರೆ, ಈ ಗುಬ್ಬಿ ಗಾತ್ರದ ಜಿಲ್ಲೆ ತನ್ನ ರೆಕ್ಕೆ, ಕಾಲು, ಕೈ, ಕಣ್ಣು, ಸ್ವಲ್ಪ ಕಿವಿ, ಸ್ವಲ್ಪ ಹೊಟ್ಟೆ ಎಲ್ಲವನ್ನು ಕಳೆದುಕೊಂಡು ನಿತ್ರಾಣಸ್ಥಿತಿಯಲ್ಲಿದೆ. ಸ್ವಲ್ಪಹೊತ್ತು ಕೋಮಾಗು ಜಾರುತ್ತೆ. ಈ ವರ್ಷದ ಶುರುವಿನಿಂದ ಪ್ರಾರಂಭಿಸಿ ಈಗ ನಮ್ಮ ಜಿಲ್ಲೆ, ಇಲ್ಲಿನ ಜನತೆ, ನೀವೆಲ್ಲರೂ ಹೇಳೋ ಸುಂದರ ಕೊಡಗು, ನಿಮ್ಮ ಕಾವೇರಿ ಎಲ್ಲಿಗೆ ಬಂದು ತಲುಪಿದ್ದೀವಿ ಅಂಥ ಹೇಳಿಬಿಡ್ತೀನಿ. ಏಕೆಂದರೆ, ನಿಮ್ಮ ಗಮನಕ್ಕೆ ಬಾರದೆ, ನಾನು ಸೇರಿದಂತೆ ಎಲ್ಲರೂ ಬಾರದ ಲೋಕಕ್ಕೆ ಹೋದರೆ ಎನ್ನುವ ಆತಂಕದಿಂದ.

ನನ್ನೂರು ತುಂಬಾ ಚೆನ್ನಾಗಿ ಇತ್ತು. ವೀರರಾಜೇಂದ್ರಪೇಟೆ. ಕೇರಳ ಕಡೆಯಿಂದ ಪ್ರವೇಶವಾದ ಮುಂಗಾರು ಜೂನ್ ಮಧ್ಯಂತರದಲ್ಲಿ ಒಂದು ರಾತ್ರಿ ಇದ್ದಕಿದ್ದಂತೆ, ಕರ್ನಾಟಕ-ಕೇರಳ ಹೆದ್ದಾರಿಯಲ್ಲಿ ರುದ್ರತಾಂಡವವಾಡ್ತು. ಈ ಹೆದ್ದಾರಿಯಲ್ಲಿ ಇರುವುದು ಒಂದು ಗೂಡಂಗಡಿ ಮಾದರಿ ಹೋಟೇಲ್. ಆ ಹೋಟೇಲಿನ ಐವರು ಕೆಲಸಗಾರರು ಕೆಲಸವೆಲ್ಲ ಮುಗಿಸಿ ಆಗಷ್ಟೆ ನಿದ್ರೆಗೆ ಜಾರಿದ್ದರಂತೆ. ಜೋರಾದ ಸದ್ದಾಯ್ತು, ಮರಗಳು ಲಟಲಟ ಮುರಿದುಬೀಳತೊಡಗಿದವು. ಕಣ್ಬಿಟ್ಟು ನೋಡಿದರೆ ಅರ್ಧ ಹೋಟೇಲ್ ಕೊಚ್ಚಿ ಹೋಗಿದೆ. ಮಾಕುಟ್ಟ ಹೊಳೆ ಅವರ ಕಣ್ಣಿಗೆ ಕಾಣುತ್ತಿದೆ. ಹೊಟೇಲ್ ಮುಂಬದಿ ಬಾಗಿಲು ತೆರೆದರೆ ಸೇತುವೆ ಅಡಿ ಹರಿಯಬೇಕಾಗಿದ್ದ ಮಾಕುಟ್ಟ ಹೊಳೆ ದಿಕ್ಕು ಬದಲಿಸಿ ರಸ್ತೆ ಮೇಲೆ ಹರಿಯುತ್ತಿದೆ. ಬೆದರಿದ ಕೆಲಸಗಾರರು ಹೇಗೋ ಸಾಹಸ ಮಾಡಿ ಪೋಲಿಸ್ ಔಟ್‌ಪೋಸ್ಟ್‌ನ ಮಹಡಿ ಹತ್ತಿ ಬೆಳಕು ಹರಿಸಿದರು. ಅಂದು ರಾತ್ರಿ 26 ಕಿಲೋಮೀಟರ್ ರಸ್ತೆಯುದ್ದಕ್ಕೂ ಭಾರಿ ಪ್ರಮಾಣದಲ್ಲಿ ಭೂಮಿ ಕುಸಿಯಿತು. ಸಾಕಷ್ಟು ವಾಹನಗಳು ದಾರಿ ಮಧ್ಯೆ ಸಿಲುಕಿದವು. ಹೀಗೆ ವಾಹನಗಳಲ್ಲಿ ಸಿಕ್ಕಿಹಾಕಿಕೊಂಡವರು ಆ ಭಯಾನಕ ರಾತ್ರಿಯನ್ನು ರಸ್ತೆಯಲ್ಲೇ ಕಳೆದು ಬೆಳಕು ಹರಿದಮೇಲೆ 15 ರಿಂದ 16 ಮೈಲಿ ನಡೆದು ವಿರಾಜಪೇಟೆ ತಲುಪಿದರು.

ವಿ.ಬಾಡಗ ಎನ್ನುವ ಗ್ರಾಮದಲ್ಲಿ ಒಂದೇ ರಾತ್ರಿ 18 ಇಂಚು ಮಳೆ ಸುರಿದು 14 ಮನೆಗಳು, ಹಲವು ಎಕರೆ ತೋಟ ಮಣ್ಣು ಪಾಲಾದವು. ಹಲವರ ಬದುಕು ಬೀದಿಗೆ ಬಿತ್ತು. ನೀರು ಹೆಚ್ಚಾಯ್ತು. ಯಾರದೋ ಮನೆ ಗೋಡೆ ಬಿರುಕು ಅಂದ್ರು. ಬಿರುಕಿರುವ ಮನೆಗಳು ಊರಿಗೆ ಹತ್ತು ಆದವು. ಕೆಲವು ಮನೆಗಳು ನೋಡನೋಡುತ್ತಲೇ ಬಿದ್ದೇ ಹೋದವು. ಕೆಲಸಕ್ಕೆ ಹೋದ ಕೂಲಿ ಕಾರ್ಮಿಕರು ಬಂದು ಬಾಗಿಲು ತೆರೆದರೆ ಹಿಂಬದಿಯ ಗೋಡೆನೇ ಇಲ್ಲ ಆಕಾಶ ಕಣ್ಣಿಗೆ ಕಾಣ್ತಿದೆ. ಹಾಗೇ ನೇರವಾಗಿ ಆಕಾಶ ನೋಡೋ ಭಾಗ್ಯ ನಮ್ಮ ಜಿಲ್ಲೆಯ ಅರ್ಧದಷ್ಟು ಮಂದಿಗೆ ಈಗಾಗಲೇ ಸಿಕ್ಕಿದೆ.

ADVERTISEMENT

ಸೋಮವಾರಪೇಟೆ ತಾಲ್ಲೂಕು ಮಕ್ಕಂದೂರಿನ ಪ್ರಭಾ ಮತ್ತು ಅವರ ಪತಿ ಶಾಪಿಂಗ್ ನಿಮಿತ್ತ ಕುಟುಂಬ ಸಮೇತ ಕುಶಾಲನಗರಕ್ಕೆ ಬಂದಿದ್ದರು. ಹಿಂದಿರುಗಿ ಹೋಗಿ ನೋಡಿದರೆ, ಅವರ ಎಂಟು ಎಕರೆ ತೋಟ, ಮನೆ ಯಾವುದೂ ಇಲ್ಲ. ಇಂಥ ಪರಿಸ್ಥಿತಿ ಕೊಡಗಿನಲ್ಲಿ ಹಲವರದ್ದಾಗಿದೆ. ಗೃಹಪ್ರವೇಶ ಮಾಡಿ ಮೂರು ದಿನವಾಗಿತ್ತು ಈಗ ನೋಡಲು ಅವರ ಮನೆಯ ಒಂದು ಇಟ್ಟಿಗೆ ಕೂಡ ಅಲ್ಲಿ ಉಳಿದಿಲ್ಲ. ಅಜ್ಜಮುತ್ತಾತರ ಕಾಲದಿಂದ ಬಾಳಿದ ಮನೆಗಳು, ನಡೆದಾಡುವ ಕಾಲು ದಾರಿಗಳು, ಅವರ ಪ್ರೀತಿಯ ಜೀಪು-ಕಾರುಗಳು, ಶತಮಾನಗಳಷ್ಟು ಹಳೆಯದಾದ ನೂರಾರು ಎಕರೆ ಕಾಫಿತೋಟಗಳು, ಪ್ರೀತಿಯ ಸಾಕುಪ್ರಾಣಿಗಳು, ಅವರ ಕೈದೋಟಗಳು ಅವನ್ನೆ ನಂಬಿದ್ದ ಹಲವರ ಬದುಕು ಯಾವುದು ಇಂದು ಇಲ್ಲವಾಗಿಸಿದೆ ಒಂದು ಮಳೆ. ಬಿಟ್ಟುಬಿಡದೆ ಕೊಡಗು ಮಾಯವಾಗುವವರೆಗೂ ಸುರಿಯುತ್ತಲೇ ಇದೆ.

ಎಲ್ಲಿ ಬೆಟ್ಟಗಳಿವೆಯೋ ಅವು ಕುಸಿಯುತ್ತಿವೆ. ರಸ್ತೆಗಳು ಬರ್ತ್‌ಡೇ ಕೇಕ್ ಕತ್ತರಿಸಿದ ಮಾದರಿಯಲ್ಲಿ ಕತ್ತರಿಸಿ ಹೋಗಿವೆ. ಗ್ರಾಮೀಣ ರಸ್ತೆಯಿಂದ ಹಿಡಿದು ರಾಜ್ಯ ಹೆದ್ದಾರಿ ತನಕ ಶೇಕಡ ನೂರರಷ್ಟು ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗಿ ಉಳಿದಿಲ್ಲ. ಮಡಿಕೇರಿಯಂತೂ ಯಾವ ಕಡೆಯಿಂದ ಸಂಪರ್ಕಿಸಲಾಗದಷ್ಟು ದ್ವೀಪವಾಗಿ ಹೋಗಿದೆ. ಮಡಿಕೇರಿಯ ಹಳೇ ಖಾಸಗಿ ಬಸ್ ನಿಲ್ದಾಣ ನಾಮಾವಶೇಷವಾಗಿದೆ. ರಾಜಾಸೀಟು ಜರುಗುತ್ತಿದೆ. ಅದರ ಅಕ್ಕಪಕ್ಕದವರನ್ನು ಸ್ಥಳಾಂತರ ಮಾಡಲಾಗಿದೆ. ಹಲವು ಸರ್ಕಾರಿ ಕಟ್ಟಡಗಳು, ಮನೆಗಳು ಲೆಕ್ಕವಿಲ್ಲದ್ದಷ್ಟು ಉರುಳಿ, ಜಾರಿ ಬಿದ್ದಿವೆ. ಅರ್ಧ ಮಡಿಕೇರಿ ಸರಿಪಡಿಸಲಾಗದಷ್ಟು ಹೋಗಿದೆ. ಅದಕ್ಕಿದ್ದ ಪಾರಂಪರಿಕ ಇತಿಹಾಸ, ಚೆಲುವು, ಸೊಬಗು ಇನ್ನು ನೆನಪಷ್ಟೇ ಆಗಬಹುದೇನೋ. ಸೋಮವಾರಪೇಟೆ ತಾಲ್ಲೂಕಿನ ಹಲವು ಗ್ರಾಮಗಳು ಇತಿಹಾಸದ ಪುಟ ಸೇರಿಹೋಗಿವೆ. ಮಣ್ಣಿನಡಿ ಇನ್ನು ಉತ್ಖನನ ಮಾಡಿದಾಗ ಸಿಗಬಹುದು.

ಆದರೂ ಮಳೆರಾಯ ನೀನು ಯಾಕೆ ಸಾಯುವ ಮಳೆ ಆದೆ ಅಂಥ ಯಾರು ಕೇಳ್ತಿಲ್ಲಾ. ಯಾಕೆ ಗೊತ್ತಾ? ಇಲ್ಲಿನ ಜನರು ಮಳೆನಾ ತಮ್ಮ ಜೀವನದಿಂದ ಎಂದೂ ಬೇರೆಯಾಗಿ ನೋಡಿದ್ದೆ ಇಲ್ಲ. ಪ್ರತಿಯೊಬ್ಬರ ಜೀವನದಲ್ಲಿ ಮಳೆ ಒಬ್ಬ ಗೆಳೆಯನಂತೆ ಇಲ್ಲಿ. ಆದರೆ, ಮಳೆರಾಯ ಮಾತ್ರ ಯಾಕೆ ಹೀಗೆ ಮಾಡಿದ? ಆ ತಾಯಿ ಕಾವೇರಿಯೆ ಹೇಳಬೇಕು.

ಸ್ನೇಹಿತರೇ, ನಿಮ್ಮನ್ನು ಕಾಪಾಡುತ್ತಿರುವ ಕಾವೇರಿತಾಯಿಯ ತವರು ಮುಳುಗಿದೆ. ಜಿಲ್ಲೆ ಅಳಿವಿನಂಚಿನ್ನಲ್ಲಿದೆ. ನಿಮ್ಮ ಸ್ಮಾರ್ಟ್‌ಫೋನ್ ಜಗತ್ತಿಂದ, ಆ ಬೆಂಗಳೂರೆಂಬ ಭ್ರಮಾ ಜಗತ್ತಿನಿಂದ ಹೊರಗೆ ಬನ್ನಿ ಕೊಡಗನ್ನು ಉಳಿಸಿ. ಕಳೆದುಹೋಗಿರುವ ಇಲ್ಲಿನವರ ಬದುಕು ಕಟ್ಟಿಕೊಡಿ. ಇಷ್ಟುವರ್ಷ ನಿಮ್ಮನ್ನು ಚೆನ್ನಾಗಿ ಇಡೋಕೆ ಕೊಡಗಿನವರು ಮಳೆಯಲ್ಲಿ ತೇಲಿದ್ದಾರೆ, ಮುಳುಗಿದ್ದಾರೆ, ಜೀವವನ್ನೆ ಮಳೆಗಾಗಿ ಅರ್ಪಣೆ ಮಾಡಿದ್ದಾರೆ. ಇವತ್ತು ಏಳಲಾರದಷ್ಟು ಮುಳುಗಿದ್ದಾರೆ.

ಗುಬ್ಬಿಯಂಥ ಕೊಡಗಿಗೆ ನಿಮ್ಮ ಬೆರಳತುದಿಯಲ್ಲಿ ಸಹಾಯ ಮಾಡಿದ್ರೂ ಉಳಿಯುತ್ತೇವೆ. ಕಾವೇರಿ ಈಗಾಗಲೇ ನಿಮ್ಮ ಮನೆ ಕೊಳಾಯಿಗಳಲ್ಲಿ ಇದ್ದಾಳೆ. ನಿಮ್ಮ ಸಹಾಯ ಕೇಳ್ತಾ ಇದ್ದಾಳೆ. ನನ್ನ ಮಕ್ಕಳು ಕಷ್ಟದಲ್ಲಿದ್ದಾರೆ ಎನ್ನುತ್ತಿದ್ದಾಳೆ. ನಿಮ್ಮ ಟಿವಿ ಸದ್ದು ತಗ್ಗಿಸಿದರೆ ಇವೆಲ್ಲ ಕೇಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.