ಮಡಿಕೇರಿ: ಕೊಡಗಿನಲ್ಲಿ ಸುರಿದ ಮಹಾಮಳೆಯಿಂದ ನೆಲೆ ಕಳೆದುಕೊಂಡ ಕುಟುಂಬಗಳಿಗೆ ಪುನರ್ವಸತಿ ಕಾರ್ಯ ಚುರುಕಾಗಿದ್ದು, ಜಿಲ್ಲೆಯ ವಿವಿಧೆಡೆ ಸಂತ್ರಸ್ತರ ಕುಟುಂಬಗಳಿಗೆ ನಿವೇಶನ ಗುರುತಿಸಲಾಗಿದೆ.
ಮಡಿಕೇರಿ ತಾಲ್ಲೂಕಿನ ಕರ್ಣಂಗೇರಿ ಗ್ರಾಮದ ಸರ್ವೆ ನಂ. 178ರಲ್ಲಿ 4 ಎಕರೆ ಜಾಗ ಗುರುತಿಸಲಾಗಿದ್ದು, 80 ನಿವೇಶನಗಳು ಲಭ್ಯವಾಗಲಿವೆ. ಕರ್ಣಂಗೇರಿಯ 13, ಮಕ್ಕಂದೂರಿನ 11, ಹಚ್ಚಿನಾಡು ಗ್ರಾಮದ 1, ಹೊದಕಾನ 9 ಹಾಗೂ ಮಡಿಕೇರಿ ನಗರದ 43 ಕುಟುಂಬಗಳೂ ಸೇರಿದಂತೆ ಒಟ್ಟು 65 ಕುಟುಂಬಗಳಿಗೆ ಈ ಜಾಗದಲ್ಲಿ ನಿವೇಶನ ಹಂಚಿಕೆ ಮಾಡಿ ಮನೆ ನಿರ್ಮಿಸಲು ಜಿಲ್ಲಾಡಳಿತ ಮುಂದಾಗಿದೆ.
ಕೆ.ನಿಡುಗಣೆ ಗ್ರಾಮದ ಸರ್ವೆ ನಂ. 1/13ರಲ್ಲಿ 5 ಎಕರೆ ಜಾಗ ಗುರುತಿಸಲಾಗಿದೆ. ಇಲ್ಲಿ ಕಾಲೂರು ಗ್ರಾಮದ 22 ಕುಟುಂಬ, ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯಲ್ಲಿ ಗುರುತಿಸಿರುವ 7 ಎಕರೆಯಲ್ಲಿ ಹೆಬ್ಬೆಟ್ಟಗೇರಿಯ 90 ಕುಟುಂಬಗಳಿಗೆ ನಿವೇಶನ ಒದಗಿಸಲಾಗುವುದು ಎಂದು ವಿಶೇಷ ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದ್ದಾರೆ.
ಗಾಳಿಬೀಡು ಸರ್ವೆ ನಂ. 99/3, 100/3, 100/4ರಲ್ಲಿ 13 ಎಕರೆ ಜಾಗ ಗುರುತಿಸಲಾಗಿದೆ. ಗಾಳಿಬೀಡು ಗ್ರಾಮದ 19, ನಿಡುವಟ್ಟಿನ 26, ಬಾರಿಬೆಳ್ಳಚ್ಚು 2, 1ನೇ ಮೊಣ್ಣಂಗೇರಿ 9 ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಲಾಗುವುದು. ಮದೆ ಗ್ರಾಮದಲ್ಲೂ 10 ಎಕರೆ ಜಾಗ ಗುರುತಿಸಲಾಗಿದೆ. ಅಲ್ಲಿ 2ನೇ ಮೊಣ್ಣಂಗೇರಿಯ 188, ಮದೆ ಗ್ರಾಮದ 79 ಕುಟುಂಬಗಳಿಗೆ ನಿವೇಶ ನೀಡಲು ಸಾಧ್ಯವಿದೆ. ಸಂಪಾಜೆಯಲ್ಲಿ 1.50 ಎಕರೆ ಗುರುತಿಸಲಾಗಿದ್ದು, ಸಂಪಾಜೆಯ 4 ಕುಟುಂಬಗಳಿಗೆ ನಿವೇಶನ ನೀಡಬಹುದು ಎಂದೂ ಅವರು ಮಾಹಿತಿ ನೀಡಿದ್ದಾರೆ.
ಜಂಬೂರು ಗ್ರಾಮದಲ್ಲಿ 50 ಎಕರೆ ಜಾಗ ಗುರುತಿಸಲಾಗಿದೆ. ಮಕ್ಕಂದೂರು ಗ್ರಾಮದ 99, ಎಮ್ಮೆತಾಳಿನ 39, ಮುಕ್ಕೋಡ್ಲು ಗ್ರಾಮದ 9, ಮೇಘತ್ತಾಳು ಗ್ರಾಮದ 26 ಸೇರಿದಂತೆ ಒಟ್ಟು 173 ಕುಟುಂಬಗಳಿಗೆ ಈ ಪ್ರದೇಶದಲ್ಲಿ ನಿವೇಶನ ನೀಡಲಾಗುವುದು. ಸೋಮವಾರಪೇಟೆ ತಾಲ್ಲೂಕಿನ ಚೌಡ್ಲು 2, ಕಿರಂಗಂದೂರು 6, ಬೇಳೂರು 4, ಹಾನಗಲ್ಲು 3, ನೆರುಗಳಲೆ 1, ಹಾಡಗೇರಿ 22, ಮುವತ್ತೊಕ್ಲು ಗ್ರಾಮದ 4, ಇಗ್ಗೋಡ್ಲು 9, ಕಡಗದಾಳು 11, ಕಾಂಡನಕೊಲ್ಲಿ 5, ಕೊಪ್ಪತ್ತೂರು 3, ಜಂಬೂರು 4, ಗರ್ವಾಲೆ 2, ಶಿರಂಗಳ್ಳಿ 1, ಮಂಕ್ಯ 1, ಕಿಕ್ಕರಳ್ಳಿ 1, ಹಾಲೇರಿ 5 ಕುಟುಂಬಗಳಿಗೆ ನಿವೇಶನ ಗುರುತಿಸಲಾಗಿದೆ ಎಂದೂ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.