ADVERTISEMENT

ಕೊಡಗು ಪ್ರವಾಹ 2018: ವರ್ಷ ಕಳೆದರೂ ಸಿಕ್ಕಿಲ್ಲ ಸೂರು

ನೆರೆ ಸಂತ್ರಸ್ತರ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾದವರಿಗೆ ಆಶ್ರಯ ಯಾವಾಗ?

ಅದಿತ್ಯ ಕೆ.ಎ.
Published 15 ಆಗಸ್ಟ್ 2019, 5:24 IST
Last Updated 15 ಆಗಸ್ಟ್ 2019, 5:24 IST
ಕಳೆದ ವರ್ಷ ನೆರೆಯಿಂದ ಸಂತ್ರಸ್ತರಾದವರಿಗೆ ನಿರ್ಮಿಸುತ್ತಿರುವ ಮನೆಗಳು
ಕಳೆದ ವರ್ಷ ನೆರೆಯಿಂದ ಸಂತ್ರಸ್ತರಾದವರಿಗೆ ನಿರ್ಮಿಸುತ್ತಿರುವ ಮನೆಗಳು   

ಮಡಿಕೇರಿ: ಕಳೆದ ವರ್ಷ ಆಗಸ್ಟ್‌ 15ರಂದು ಇಡೀ ದೇಶವೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಮುಳುಗಿದ್ದರೆ, ಕೊಡಗು ಮಾತ್ರ ಭೀಕರ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿತ್ತು. ಭಾರೀ ಮಳೆ, ಭೂಕುಸಿತ ಹಾಗೂ ಪ್ರವಾಹದಿಂದ ಜಿಲ್ಲೆಯ ಜನರು ಕಂಗಾಲಾಗಿದ್ದರು. ಇಂದಿಗೆ (ಗುರುವಾರ) ದುರಂತ ಸಂಭವಿಸಿ ವರ್ಷ ಕಳೆದರೂ ನೆರೆ ಸಂತ್ರಸ್ತರಿಗೆ ಸರ್ಕಾರದಿಂದ ಸೂರು ಮಾತ್ರ ಸಿಕ್ಕಿಲ್ಲ; ಪರಿಸ್ಥಿತಿಯೂ ಭಿನ್ನವಾಗಿಲ್ಲ.

ಕಳೆದ ವರ್ಷದ ಆಘಾತದಿಂದ ಚೇತರಿಸಿಕೊಳ್ಳಲು ಅವಕಾಶವೂ ಸಿಗದಂತೆ ಈ ಸಲವೂ ಕೊಡಗಿನಲ್ಲಿ ಸಂಭವಿಸಿದ ಭೂಕುಸಿತ, ಸುರಿದ ಮಳೆಯು ಜಿಲ್ಲೆಯ ಮತ್ತಷ್ಟು ಜನರನ್ನು ಹೈರಾಣಾಗಿಸಿದ್ದು, ಹಲವರು ನೆಲೆ ಕಳೆದುಕೊಂಡಿದ್ದಾರೆ. ಇದರೊಂದಿಗೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನೆರೆಯಿಂದ ಸಾವಿರಾರು ಮಂದಿ ಸಂತ್ರಸ್ತರಾಗಿದ್ದಾರೆ. ಇವರಿಗೆಲ್ಲಾ ಯಾವಾಗ ಸೂರು ಸಿಗಲಿದೆ ಎಂಬ ಪ್ರಶ್ನೆ ಎದುರಾಗಿದೆ.

ಸಂತ್ರಸ್ತರಿಗಾಗಿ ಕೊಡಗಿನ ಮೂರು ಸ್ಥಳಗಳಲ್ಲಿ ಮನೆ ನಿರ್ಮಿಸುತ್ತಿದ್ದರೂ ಒಂದೇ ಒಂದು ಮನೆಯೂ ಹಸ್ತಾಂತರವಾಗಿಲ್ಲ. ಮನೆ ಕಳೆದುಕೊಂಡವರು ಬಾಡಿಗೆ ಮನೆಗಳಲ್ಲಿಯೇ ಇದ್ದಾರೆ. ಮಡಿಕೇರಿ ತಾಲ್ಲೂಕಿನ ಕರ್ಣಂಗೇರಿಯಲ್ಲಿ 35 ಹಾಗೂ ಮದೆಯಲ್ಲಿ 80 ಮನೆಗಳ ಕಾಮಗಾರಿ ಪೂರ್ಣಗೊಂಡಿದೆ. ಲಾಟರಿ ಮೂಲಕ 115 ಫಲಾನುಭವಿಗಳಿಗೆ ಮನೆ ಹಂಚಿಕೆ ಆಗಿದ್ದರೂ, ಮೂಲಸೌಲಭ್ಯ ಕಲ್ಪಿಸದ ಕಾರಣಕ್ಕೆ ಆ ಮನೆಗಳೂ ಸಂತ್ರಸ್ತರ ಕೈಸೇರಿಲ್ಲ.

ADVERTISEMENT

ರಾಜಕೀಯ ಬೆಳವಣಿಗೆಯಿಂದ ತಡ:‘ಮೊದಲ ಹಂತದಲ್ಲಿ 150 ಮನೆಗಳನ್ನು ಜುಲೈ ಅಂತ್ಯದಲ್ಲಿ ಹಸ್ತಾಂತರಿಸುವ ಉದ್ದೇಶವಿತ್ತು. ಆದರೆ, ರಾಜ್ಯದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಿಂದಾಗಿ ಸಾಧ್ಯವಾಗಲಿಲ್ಲ’ ಎಂದು ಅಧಿಕಾರಿಯೊಬ್ಬರು ‍‘ಪ್ರಜಾವಾಣಿ’ಗೆ ತಿಳಿಸಿದರು.

118 ವರ್ಷಗಳಲ್ಲಿಯೇ, ಕೊಡಗಿನಲ್ಲಿ ಕಳೆದ ವರ್ಷ ಅತಿ ಹೆಚ್ಚು ಮಳೆಯಾಗಿತ್ತು. 34 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳು ಸಮಸ್ಯೆಗೆ ತುತ್ತಾಗಿದ್ದವು. ಬೆಳೆ ಹಾನಿ, ಜೀವಹಾನಿಯೂ ಸಂಭವಿಸಿದ್ದಕ್ಕೆ ಎನ್‌ಡಿಆರ್‌ಎಫ್‌ ನಿಯಮಾವಳಿ ಪ್ರಕಾರ ಪರಿಹಾರ ವಿತರಿಸಲಾಗಿದೆ. ಮನೆಗಾಗಿ ವರ್ಷದಿಂದ ಚಾತಕ ಪಕ್ಷಿಯಂತೆ ಕಾದಿರುವ ಸಂತ್ರಸ್ತರಿಗೆ ಮಾತ್ರ ನಿರಾಸೆ ತಂದಿದೆ.

ಪ್ರತಿ ಮನೆಗೆ ₹9.85 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಕಳೆದ ವರ್ಷ ಡಿ.7ರಂದು ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ದ ಸರ್ಕಾರ, ಒಂಬತ್ತು ತಿಂಗಳು ಕಳೆದರೂ ಒಬ್ಬರಿಗೂ ಮನೆ ಹಸ್ತಾಂತರಿಸುವ ಕೆಲಸ ಮಾಡಿಲ್ಲ ಎಂಬುದು ಸಂತ್ರಸ್ತರ ನೋವು.

‘ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮದಿಂದ ಮೊದಲ ಹಂತದಲ್ಲಿ 433 ಮನೆಗಳನ್ನು ಕಟ್ಟಲಾಗುತ್ತಿದೆ. ಅದರಲ್ಲಿ 150 ಮನೆಗಳು ಮಾತ್ರ ಪೂರ್ಣಗೊಂಡು ಹಸ್ತಾಂತರಕ್ಕೆ ಸಿದ್ಧವಾಗಿವೆ. ಇನ್ಫೊಸಿಸ್‌ ಪ್ರತಿಷ್ಠಾನದಿಂದಲೂ 200 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಬಿಳಿಗಿರಿ ಹಾಗೂ ಗಾಳಿಬೀಡಿನಲ್ಲಿ 2ನೇ ಹಂತದಲ್ಲಿ ನಿಗಮದಿಂದಲೇ 200 ಮನೆಗಳನ್ನು ನಿರ್ಮಿಸುವ ಉದ್ದೇಶವಿದ್ದು ಅಲ್ಲಿ ಕೆಲಸಗಳು ಇನ್ನೂ ಆರಂಭವಾಗಿಲ್ಲ.52 ಸಂತ್ರಸ್ತರು ಸ್ವಂತ ಸ್ಥಳದಲ್ಲೇ ಮನೆಗಳನ್ನು ಕಟ್ಟಿಸಿಕೊಳ್ಳುತ್ತಿದ್ದು, ಅವರಿಗೆ ಮೂರು ಕಂತುಗಳಲ್ಲಿ ತಲಾ ₹9.85 ಲಕ್ಷ ಪರಿಹಾರವನ್ನು ಜಿಲ್ಲಾಡಳಿತ ಬಿಡುಗಡೆ ಮಾಡಲಿದೆ. ಕೆಲವರು ಕಾಮಗಾರಿ ಆರಂಭಿಸಿದ್ದಾರೆ’ ಎಂದು ನಿಗಮದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.