ಬೆಂಗಳೂರು: ‘ಕೊಡವ ಸಮುದಾಯದರಿಗೆ ಭೌಗೋಳಿಕ–ರಾಜಕೀಯ ಸ್ವಾಯತ್ತತೆಯ ಸಾಂವಿಧಾನಿಕ ಸ್ಥಾನಮಾನ ಕಲ್ಪಿಸುವ ದಿಸೆಯಲ್ಲಿ ಆಯೋಗ ರಚಿಸಬೇಕೆಂಬ ಕೋರಿಕೆ ಜನಾಂಗೀಯ ಹಕ್ಕುಗಳ ಆಗ್ರಹ ಮತ್ತು ಪ್ರತ್ಯೇಕ ರಾಜ್ಯದ ಬೇಡಿಕೆಯ ಸ್ವರೂಪ ಹೊಂದಿದೆ’ ಎಂದು ಕೊಡಗು ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪಂಗಡ ಮತ್ತು ಆದಿವಾಸಿ ಸಮುದಾಯಗಳ ಸಂಘಟನೆಗಳು ಆಕ್ಷೇಪಿಸಿವೆ.
‘ಕೊಡವ ಸಮುದಾಯದರಿಗೆ ಭೌಗೋಳಿಕ–ರಾಜಕೀಯ ಸ್ವಾಯತ್ತತೆಯ ಸಾಂವಿಧಾನಿಕ ಸ್ಥಾನಮಾನ ಕಲ್ಪಿಸುವ ದಿಸೆಯಲ್ಲಿ ಪರಿಶೀಲನೆ ನಡೆಸಲು ಆಯೋಗವೊಂದನ್ನು ರಚಿಸಲು ನಿರ್ದೇಶಿಸಬೇಕು’ ಎಂದು ಕೋರಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಅಧ್ಯಕ್ಷ ಎನ್.ವಿ.ನಾಚಪ್ಪ ಕೊಡವ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಮಧ್ಯಂತರ ಅರ್ಜಿದಾರರಾದ ‘ಕೊಡವ ಬೊನಿಪಟ್ಟ ಸಮಾಜ’ವೂ ಸೇರಿದಂತೆ ಒಟ್ಟು ಹತ್ತು ಸಂಘಟನೆಗಳ ಪರ ಹಾಜರಿದ್ದ ಹಿರಿಯ ವಕೀಲ ಕೆ. ರವಿವರ್ಮ ಕುಮಾರ್, ‘ಮಧ್ಯಂತರ ಅರ್ಜಿದಾರರು ಕೊಡಗಿನ ಮೂಲ ನಿವಾಸಿಗಳು. ಕೊಡಗಿನ ಅಸ್ಮಿತೆಯಲ್ಲಿ ಇವರ ಪಾತ್ರ ಹಿರಿದು. ಹೀಗಾಗಿ, ಮೂಲ ಅರ್ಜಿ ವಿಚಾರಣೆಗೂ ಮುನ್ನ ಇವರನ್ನೂ ಮಧ್ಯಂತರವಾಗಿ ಸೇರ್ಪಡೆ ಮಾಡಿಕೊಂಡು ಇವರ ಮನವಿಯನ್ನೂ ಆಲಿಸಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
‘ಅರ್ಜಿದಾರರ ಮನವಿ ಪರಿಗಣಿಸಿದರೆ ಅದು ಜಿಲ್ಲೆಯ ಮೂಲ ನಿವಾಸಿಗಳು ಮತ್ತು ಬುಡಕಟ್ಟು ಜನಾಂಗಗಳ ಬದುಕಿನ ಮೇಲೆ ಗಾಢ ಪರಿಣಾಮ ಬೀರಲಿದೆ. ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಗಿದ್ದರೂ, ಒಂದು ಸೀಮಿತ ಸಮುದಾಯಕ್ಕೆ ಲಾಭವನ್ನುಂಟು ಮಾಡಲಿದೆ. ಕೊಡಗು ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಶೇ 30ರಷ್ಟಿರುವ ಪರಿಶಿಷ್ಟ ಜಾತಿ–ಪಂಗಡ, ಆದಿವಾಸಿ, ಬುಡಕಟ್ಟು, ಒಬಿಸಿ ವರ್ಗಗಳ ಮೇಲೆ ಪರಿಣಾಮ ಉಂಟು ಮಾಡಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
ಇದನ್ನು ಬಲವಾಗಿ ಆಕ್ಷೇಪಿಸಿದ ಅರ್ಜಿದಾರ ಸಿಎನ್‌ಸಿ ಪರ ಖುದ್ದು ಹಾಜರಿದ್ದ ಮಾಜಿ ಕೇಂದ್ರ ಸಚಿವ ಸುಬ್ರಮಣಿಯನ್ ಸ್ವಾಮಿ, ‘ಮಧ್ಯಂತರ ಅರ್ಜಿದಾರರ ಯಾವುದೇ ಕೋರಿಕೆಯನ್ನು ಆಲಿಸಲು ಆಯೋಗವೇ ಸೂಕ್ತ ಪರಿಹಾರ. ಹಾಗಾಗಿ, ಅರ್ಜಿಯಲ್ಲಿನ ಮನವಿಯ ಅನುಸಾರ ರೂಪುಗೊಳ್ಳುವ ಆಯೋಗದ ಮುಂದೆಯೇ ಸಲ್ಲಿಸಿ ಪರಿಹಾರ ಪಡೆಯಲಿ’ ಎಂದು ಸೂಚಿಸಿದರು.
ಆದರೆ, ಇದನ್ನು ಒಪ್ಪದ ನ್ಯಾಯಪೀಠ, ‘ಇದೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ. ಈ ಮಧ್ಯಂತರ ಅರ್ಜಿಯನ್ನೂ ವಿಚಾರಣೆಗೆ ಅಂಗೀಕರಿಸಿದರೆ ಪರಾಮರ್ಶೆಗೆ ಇನ್ನಷ್ಟು ವಿಸ್ತೃತ ಅವಕಾಶಗಳು ದೊರೆಯುತ್ತವೆ. ಅಂತೆಯೇ, ನಿಮ್ಮ ಮನವಿಯನ್ನು ಪರಿಶೀಲಿಸಿದರೆ ಇದಕ್ಕೊಂದು ನ್ಯಾಯಾಂಗದ ಚೌಕಟ್ಟು ರೂಪಿಸುವ ಅಗತ್ಯವಿದೆ‘ ಎಂಬ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತು. ಪ್ರಕರಣದಲ್ಲಿನ ಮಧ್ಯಂತರ ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಿ ಎಂದು ಸುಬ್ರಮಣಿಯನ್ ಸ್ವಾಮಿ ಅವರಿಗೆ ಸೂಚಿಸಿ ವಿಚಾರಣೆಯನ್ನು ಜೂನ್ 5ಕ್ಕೆ ಮುಂದೂಡಿತು.
ಮತ್ತೊಂದು ಮಧ್ಯಂತರ ಅರ್ಜಿ: ಇದೇ ವೇಳೆ ಮೂಲ ಅರ್ಜಿದಾರರ ಮನವಿಯನ್ನು ಬೆಂಬಲಿಸುವ ಮತ್ತೊಂದು ಮಧ್ಯಂತರ ಅರ್ಜಿಯನ್ನು ‘ಬೆಂಗಳೂರು ಕೊಡವ ಸಮಾಜ‘ದ ವತಿಯಿಂದ ಸಲ್ಲಿಸಲಾಯಿತು. ಈ ಅರ್ಜಿದಾರರ ಪರ ಅಜಿತ್ ನಾಚಪ್ಪ, ರಾಜ್ಯದ ಪರ ಎಸ್.ಎಸ್.ಮಹೇಂದ್ರ, ಕೇಂದ್ರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ ಕಾಮತ್, ಡೆಪ್ಯುಟಿ ಸಾಲಿಸಿಟರ್ ಜನರಲ್ ಎಚ್.ಶಾಂತಿಭೂಷಣ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.