ಬೆಂಗಳೂರು: ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಗಗನಸಖಿಯೊಬ್ಬರ ಕಿವಿ ಹಾಗೂ ಕೆನ್ನೆಗೆ ಚಾಕುವಿನಿಂದ ಹಲ್ಲೆ ನಡೆಸಿದ್ದ ರೌಡಿ ಅಜಯ್‌ಕುಮಾರ್ ಅಲಿಯಾಸ್ ಜಾಕಿಯನ್ನು ನಗರದ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
‘ಜಾಲಹಳ್ಳಿ ಠಾಣೆ ರೌಡಿಶೀಟರ್ ಆದ ಅಜಯ್ ಹಾಗೂ ಸಂತ್ರಸ್ತೆ ನಡುವೆ ಹಲವು ವರ್ಷಗಳಿಂದ ಸ್ನೇಹವಿತ್ತು. ಹಣಕಾಸಿನ ವಿಷಯವಾಗಿ ಇತ್ತೀಚೆಗೆ ದ್ವೇಷ ಬೆಳೆದಿದ್ದು, ಅದೇ ಕಾರಣಕ್ಕೆ ಆರೋಪಿ ಈ ಕೃತ್ಯ ಎಸಗಿದ್ದಾನೆ’ ಎಂದು ಪೊಲೀಸರು ಹೇಳಿದರು.
‘ಜಾಲಹಳ್ಳಿ ನಿವಾಸಿಯಾದ ಸಂತ್ರಸ್ತೆ, ಮೇ 12ರಂದು ಕೆಲಸ ಮುಗಿಸಿಕೊಂಡು ಕ್ಯಾಬ್‌ನಲ್ಲಿ ಮನೆಗೆ ತೆರಳುತ್ತಿದ್ದರು. ಸಂಜೆ 4.30ರ ಸುಮಾರಿಗೆ ಹೆಬ್ಬಾಳದ ಮೇಲ್ಸೇತುವೆ ಬಳಿಯ ಸಿಗ್ನಲ್‌ನಲ್ಲಿ ಕ್ಯಾಬ್ ನಿಲ್ಲುತ್ತಿದ್ದಂತೆ ಅಜಯ್ ಒಳಗೆ ನುಗ್ಗಿದ್ದ.’
‘ಕ್ಯಾಬ್‌ನಲ್ಲೇ ಸಂತ್ರಸ್ತೆ ಜೊತೆ ಜಗಳ ತೆಗೆದಿದ್ದ ಆತ, ಕಿವಿ ಹಾಗೂ ಕೆನ್ನೆಗೆ ಚಾಕುವಿನಿಂದ ಹಲ್ಲೆ ನಡೆಸಿದ್ದ. ತನ್ನ ವಿರುದ್ಧ ಯಶವಂತಪುರ ಠಾಣೆಗೆ ನೀಡಿರುವ ದೂರನ್ನು ವಾಪಸು ತೆಗೆದುಕೊಳ್ಳುವಂತೆ ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದ. ತೀವ್ರ ಗಾಯಗೊಂಡಿದ್ದ ಸಂತ್ರಸ್ತೆ, ಮೇ 13ರಂದು ಕೊಡಿಗೇಹಳ್ಳಿ ಠಾಣೆಗೆ ದೂರು ನೀಡಿದ್ದರು’ ಎಂದು ಪೊಲೀಸರು ವಿವರಿಸಿದರು.
ಜಂಟಿ ಕಾರ್ಯಾಚರಣೆ: ‘ಕಳೆದ ತಿಂಗಳು ಯಶವಂತಪುರ ಬಳಿ ಸಂತ್ರಸ್ತೆಯ ಕಾರು ಅಡ್ಡಗಟ್ಟಿದ್ದ ರೌಡಿ, ಗಾಜು ಒಡೆದು ಚಿನ್ನದ ಸರ ದೋಚಿದ್ದ. ಆ ಬಗ್ಗೆ ದೂರು ದಾಖಲಾಗಿತ್ತು. ಅಂದಿನಿಂದಲೇ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದರು. ತಲೆಮರೆಸಿಕೊಂಡು ಓಡಾಡುವಾಗಲೇ ಹೆಬ್ಬಾಳ ಮೇಲ್ಸೇತುವೆ ಬಳಿ ಪುನಃ ಅವರ ಮೇಲೆ ದಾಳಿ ಮಾಡಿದ್ದ. ಆ ಬಗ್ಗೆ ಪ್ರತ್ಯೇಕ ದೂರು ದಾಖಲಾಗುತ್ತಿದ್ದಂತೆಯಶವಂತಪುರ ಹಾಗೂ ಕೊಡಿಗೇಹಳ್ಳಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಮುತ್ಯಾಲನಗರದಲ್ಲಿ ಆತನನ್ನು ಸೆರೆ ಹಿಡಿದಿದ್ದಾರೆ’ ಎಂದು ಅಧಿಕಾರಿಯೊಬ್ಬರು ವಿವರಿಸಿದರು.
‘ಚನ್ನರಾಯಪಟ್ಟಣದಲ್ಲಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿ ಆಗಿದ್ದ ಅಜಯ್, ಹಲ್ಲೆ ಹಾಗೂ ಸುಲಿಗೆ ಪ್ರಕರಣದಲ್ಲೂ ಭಾಗಿಯಾಗಿದ್ದಾನೆ. ಆತನ ಬಂಧನದಿಂದ ಒಂದೊಂದೇ ಪ್ರಕರಣಗಳು ಪತ್ತೆಯಾಗುತ್ತಿವೆ’ ಎಂದು ಹೇಳಿದರು.
ಹಲವು ವರ್ಷಗಳಿಂದ ಪರಿಚಯ: ‘ಆಕೆಗೂ ನನಗೂ ಹಲವು ವರ್ಷಗಳಿಂದ ಪರಿಚಯವಿದೆ. ಪರಸ್ಪರ ಪ್ರೀತಿಸುತ್ತಿದ್ದ ನಾವು, ಕೆಲ ತಿಂಗಳು ಜೊತೆಯಲ್ಲೇ ವಾಸವಿದ್ದೆವು. ಈ ವಿಷಯ ಅವರ ಮನೆಯವರಿಗೂ ಗೊತ್ತಿತ್ತು. ಇತ್ತೀಚೆಗೆ ಆಕೆ, ನನ್ನನ್ನು ದೂರ ಮಾಡಲು ಪ್ರಯತ್ನಿಸುತ್ತಿದ್ದಳು. ಅದೇ ಕಾರಣಕ್ಕೆ ಆಕೆಯ ಮೇಲೆ ಹಲ್ಲೆ ಮಾಡಿದೆ’ ಎಂಬುದಾಗಿ ಆರೋಪಿ ಅಜಯ್ ಹೇಳಿಕೆ ನೀಡಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.