ADVERTISEMENT

ಮಧುಗಿರಿ: 35 ವರ್ಷಗಳಿಂದ ಗುಹೆಯಲ್ಲೇ ವಾಸ!

ಬೆಟ್ಟದಲ್ಲಿ ವಾಸಿಸುವ ಈ ಕುಟುಂಬಕ್ಕೆ ಸ್ವಂತ ಮನೆಯೇ ಇಲ್ಲ

ಗಂಗಾಧರ್ ವಿ ರೆಡ್ಡಿಹಳ್ಳಿ
Published 16 ನವೆಂಬರ್ 2019, 22:19 IST
Last Updated 16 ನವೆಂಬರ್ 2019, 22:19 IST
ಗುಡ್ಡದಲ್ಲಿರುವ ಗುಹೆಯಲ್ಲಿ ವಾಸಿಸುತ್ತಿರುವ ನಾಗಮ್ಮ ಕುಟುಂಬ
ಗುಡ್ಡದಲ್ಲಿರುವ ಗುಹೆಯಲ್ಲಿ ವಾಸಿಸುತ್ತಿರುವ ನಾಗಮ್ಮ ಕುಟುಂಬ   

ಕೊಡಿಗೇನಹಳ್ಳಿ (ಮಧುಗಿರಿ ತಾ): ಸ್ವಂತ ಸೂರಿಲ್ಲದೆ ಈ ಕುಟುಂಬ ಗುಡ್ಡದಲ್ಲಿ 35 ವರ್ಷಗಳಿಂದ ವಾಸಿಸುತ್ತಿದೆ. ನಿತ್ಯವೂ ಕಾಡು ಪ್ರಾಣಿಗಳ ಭಯ ಕಾಡುತ್ತಿದೆ. ಗುಡ್ಡದಲ್ಲಿ ಬದುಕುತ್ತಿರುವ ಕಾರಣ ಕುಟುಂಬದಲ್ಲಿ ಮದುವೆ ವಯಸ್ಸಿಗೆ ಬಂದ ಐದು ಗಂಡು ಮಕ್ಕಳಿಗೆ ಹೆಣ್ಣು ಕೊಡುವವರಿಲ್ಲ!

ಮಧುಗಿರಿ ತಾಲ್ಲೂಕಿನ ಬಿಜವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಬತ್ತನಹಳ್ಳಿ ಗ್ರಾಮದಿಂದ ಒಂದು ಕಿ.ಮೀ ದೂರದಲ್ಲಿರುವ ಅಂಬೆಸೆಯುವ ಗುಡ್ಡದಲ್ಲಿ ವಾಸಿಸುತ್ತಿರುವ ತಿಮ್ಮಣ್ಣ (75), ನಾಗಮ್ಮ (65) ದಂಪತಿಯ ಬದುಕಿನ ಕಥೆ ಇದು.

ಮಿಡಿಗೇಶಿ ಹೋಬಳಿಯ ಜಿ.ಡಿ.ಪಾಳ್ಯದ ಈ ದಂಪತಿ ಮದುವೆಯಾದ ಹೊಸತರಲ್ಲಿ ಕಂಬತ್ತನಹಳ್ಳಿಗೆ ವಲಸೆ ಬಂದರು. ಮೊದಲು ಸರ್ಕಾರಿ ಜಾಗದಲ್ಲಿ ಗುಡಿಸಲು ಹಾಕಿಕೊಂಡು ಜೀವನ ಸಾಗಿಸಿದರು. ಆದರೆ ಜಾಗದ ವಿಚಾರವಾಗಿ ಗ್ರಾಮಸ್ಥರು ಕಿರಿ ಕಿರಿ ಮಾಡಿದರು. ಇದರಿಂದ ಬೇಸತ್ತ ದಂಪತಿ ಅಂಬೆಸೆ ಯುವ ಗುಡ್ಡದ ಗುಹೆಯಲ್ಲಿ ವಾಸವಾಗಿದ್ದ ಶಂಕರಪ್ಪ ಎಂಬ ಸಾಧುವಿನ ಬಳಿ ಆಶ್ರಯ ಪಡೆದರು. ಸಾಧು ಮೃತಪಟ್ಟ ನಂತರ ಅನ್ಯ ಮಾರ್ಗ ಇಲ್ಲದೆ ಈ ಕುಟುಂಬ ಅದೇ ಗುಹೆಯಲ್ಲಿಯೇ ವಾಸಿಸುತ್ತಿದೆ.

ADVERTISEMENT

‘ಗ್ರಾಮ ಪಂಚಾಯಿತಿಯಿಂದ ಆಶ್ರಯ ಯೋಜನೆಯಡಿ ನಮಗೆ 1990ರಲ್ಲಿ ನಿವೇಶನದ ಹಕ್ಕುಪತ್ರ ಕೊಟ್ಟಿದ್ದಾರೆ. ಆದರೆ, ನಿವೇಶನದ ಜಾಗ ತೋರಿಸಲು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಕೈಮುಗಿದು ಸಾಕಾಗಿದೆ. ನಮ್ಮ ಕಷ್ಟ ಕೇಳುವವರೇ ಇಲ್ಲ’ ಎಂದು ಕಂಬನಿ ಮಿಡಿಯುತ್ತಾರೆ ನಾಗಮ್ಮ.

‘ಇಬ್ಬರು ಹೆಣ್ಣು ಮಕ್ಕಳ ಮದುವೆ ಆಗಿದೆ. ಐದು ಮಂದಿ ಗಂಡು ಮಕ್ಕಳಿಗೆ ಯಾರೂ ಹೆಣ್ಣು ಕೊಡುತ್ತಿಲ್ಲ. ಹೆಣ್ಣು ಕೇಳಲು ಹೋದರೆ ಸ್ವಂತ ಮನೆ, ಜಮೀನು ಇಲ್ಲ. ವಾಸಿಸುವ ಸ್ಥಳಕ್ಕೆ ತೆರಳಲು ದಾರಿಯೂ ಇಲ್ಲ. ನೀರಿನ ಸೌಕರ್ಯ ಮೊದಲೇ ಇಲ್ಲ. ಇಂತಹ ಮನೆಗೆ ಯಾವ ಪುರುಷಾರ್ಥಕ್ಕೆ ಹೆಣ್ಣು ಕೊಡಬೇಕು’ ಎಂದು ಹೀಯಾಳಿಸುತ್ತಾರೆ ಎಂದು ನೋವು ತೋಡಿಕೊಂಡರು.

ಮದುವೆ ಆಗದ ಕಾರಣ ಬೇಸತ್ತಿರುವ ಇಬ್ಬರು ಗಂಡು ಮಕ್ಕಳು ಬೆಂಗಳೂರಿಗೆ ಕೂಲಿ ಕೆಲಸಕ್ಕೆ ತೆರಳಿದ್ದಾರೆ. ಉಳಿದ ಮೂವರು ಇಲ್ಲಿಯೇ ಕೂಲಿ ಮಾಡಿಕೊಂಡಿದ್ದಾರೆ. ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಇದೆ. ಇದು ಬಿಟ್ಟರ ಬೇರೆ ಸೌಲಭ್ಯ ಪಡೆಯಲು ಸಾಧ್ಯವಾಗಿಲ್ಲ ಎಂದು ಹೇಳಿದರು.

ಭೇಟಿ ನೀಡಿ ಪರಿಶೀಲಿಸುವೆ
ನಾನು ಹೊಸದಾಗಿ ಬಂದಿದ್ದೇನೆ. ಅಲ್ಲಿನ ಕುಟುಂಬದ ಸ್ಥಿತಿ ಬಗ್ಗೆ ಮಾಹಿತಿ ಇಲ್ಲ. ಶೀಘ್ರ ಭೇಟಿ ನೀಡಿ ಪರಿಶೀಲಿಸುತ್ತೇನೆ. ಪಂಚಾಯಿತಿಯಿಂದ ದೊರೆಯುವ ಸೌಲಭ್ಯಗಳನ್ನು ದೊರಕಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಬಿಜವರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಗೌಡಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.