ADVERTISEMENT

ಜಾತಿ ಸಿಂಧುತ್ವ ನಿರ್ಣಯ: ಶಾಸಕ ಕೊತ್ತನೂರು ಮಂಜುನಾಥ್‌ ಅರ್ಜಿ ತಿರಸ್ಕೃತ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2023, 23:30 IST
Last Updated 20 ಡಿಸೆಂಬರ್ 2023, 23:30 IST
ಕೊತ್ತೂರು ಮಂಜುನಾಥ್‌
ಕೊತ್ತೂರು ಮಂಜುನಾಥ್‌   

ಬೆಂಗಳೂರು: ಜಾತಿ ಸಿಂಧುತ್ವಕ್ಕೆ ಸಂಬಂಧಿಸಿದಂತೆ ಕೋಲಾರ ಜಿಲ್ಲಾಧಿಕಾರಿ ನೇತೃತ್ವದ ಜಾತಿ ಪರಿಶೀಲನಾ ಸಮಿತಿ ಕೈಗೊಂಡಿದ್ದ ನಿರ್ಣಯವನ್ನು ಪ್ರಶ್ನಿಸಿ ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕ ಕಾಂಗ್ರೆಸ್‌ ಪಕ್ಷದ ಜಿ.ಮಂಜುನಾಥ್ (ಕೊತ್ತನೂರು ಮಂಜುನಾಥ್) ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಹೈಕೋರ್ಟ್‌ ತಿರಸ್ಕರಿಸಿದೆ.

ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ಬುಧವಾರ ಪ್ರಕಟಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಈ ಆದೇಶದಿಂದ ಮಂಜುನಾಥ್‌ ಅವರ ಹಾಲಿ ಶಾಸಕ ಸ್ಥಾನಕ್ಕೆ ಯಾವುದೇ ಬಾಧೆ ಆಗುವುದಿಲ್ಲ. ಆದರೆ, 2013ರಲ್ಲಿ ಮುಳಬಾಗಿಲು ಮೀಸಲು ಕ್ಷೇತ್ರದಿಂದ ಗೆದ್ದಾಗ ಪಡೆದುಕೊಂಡಿದ್ದ ಸೌಲಭ್ಯಗಳನ್ನು ಪೂರ್ವಾಯನ್ವ ಆಗುವಂತೆ ಅವರಿಂದ ವಾಪಸು ಪಡೆದುಕೊಳ್ಳಬಹುದು‘ ಎಂದು ಸ್ಪಷ್ಟಪಡಿಸಿದೆ. ಸರ್ಕಾರದ ಪರ ವಕೀಲ ಸಿ.ಜಗದೀಶ್‌ ವಾದ ಮಂಡಿಸಿದ್ದರು.

‘ಜಿ.ಮಂಜುನಾಥ್ ಬುಡಗ ಜಂಗಮ ಜಾತಿಗೆ ಸೇರಿಲ್ಲ. ಅವರು ಬೈರಾಗಿ ಜಾತಿಗೆ ಸೇರಿದವರು‘ ಎಂದು ಜಿಲ್ಲಾಧಿಕಾರಿ ನೇತೃತ್ವದ ಜಾತಿ ಪರಿಶೀಲನಾ ಸಮಿತಿ ನಿರ್ಣಯ ಕೈಗೊಂಡಿತ್ತು. ಬುಡಗ ಜಂಗಮ ಪರಿಶಿಷ್ಟ ಜಾತಿಗೆ ಸೇರಿದರೆ, ಬೈರಾಗಿ ಒಬಿಸಿ ಪ್ರವರ್ಗ-1ಕ್ಕೆ ಸೇರುತ್ತದೆ.

ADVERTISEMENT

ಪ್ರಕರಣವೇನು?: ಜಿ.ಮಂಜುನಾಥ್ 2013ರಲ್ಲಿ ಮುಳಬಾಗಿಲು ಮೀಸಲು ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಜೆಡಿಎಸ್‌ನ ಪರಾಜಿತ ಅಭ್ಯರ್ಥಿ ಮುನಿನಂಜಪ್ಪ ಇವರ ಜಾತಿ ಪ್ರಮಾಣದ ಸಿಂಧುತ್ವ ಪ್ರಶ್ನಿಸಿದ್ದರು. ಈ ಪ್ರಕರಣ ತಹಶೀಲ್ದಾರ್, ಜಿಲ್ಲಾಧಿಕಾರಿ, ಸಿವಿಲ್ ನ್ಯಾಯಾಲಯ ಮತ್ತು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಒಳಪಟ್ಟಿತ್ತು. ಅಂತಿಮವಾಗಿ ಹೈಕೋರ್ಟ್ ಮಂಜುನಾಥ್ ಅರ್ಜಿಯನ್ನು ವಜಾಗೊಳಿಸಿತ್ತು.

ಇದರ ವಿರುದ್ಧ ಮಂಜುನಾಥ್‌ ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿಯನ್ನು ವಜಾಗೊಳಿಸಿದ್ದ ಸುಪ್ರೀಂ ಕೋರ್ಟ್, ಜಾತಿ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿಗೆ ನಿರ್ದೇಶಿಸಿತ್ತು. ಒಂದು ವೇಳೆ ಜಾತಿ ಪರಿಶೀಲನಾ ಸಮಿತಿಯ ನಿರ್ಣಯದ ಬಗ್ಗೆ ಆಕ್ಷೇಪವಿದ್ದರೆ ಪುನಃ ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಬಹುದು ಎಂದು ಹೇಳಿತ್ತು. ಈ ನಿರ್ದೇಶನದ ಅನುಸಾರ ಮಂಜುನಾಥ್ ಜಾತಿ ಪರಿಶೀಲನಾ ಸಮಿತಿಯ ನಿರ್ಣಯವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. 

ಕೊತ್ತೂರು ಮಂಜುನಾಥ್
ಕೊತ್ತೂರು ಮಂಜುನಾಥ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.