ADVERTISEMENT

ಕೋಚಿಮುಲ್ ವಿಭಜನೆ; ರಾಜ್ಯ ಸರ್ಕಾರದ ಆದೇಶ ಎತ್ತಿ ಹಿಡಿದ ನ್ಯಾಯಾಲಯ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 0:25 IST
Last Updated 26 ಅಕ್ಟೋಬರ್ 2024, 0:25 IST
<div class="paragraphs"><p>ಕೋಲಾರದಲ್ಲಿ ಶುಕ್ರವಾರ ಕೋಚಿಮುಲ್‌ ಅಧ್ಯಕ್ಷ, ಶಾಸಕ ಕೆ.ವೈ.ನಂಜೇಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಿರ್ದೇಶಕರು ಹಾಗೂ ವ್ಯವಸ್ಥಾಪಕ ನಿರ್ದೇಶಕ ಪಾಲ್ಗೊಂಡಿದ್ದರು</p></div>

ಕೋಲಾರದಲ್ಲಿ ಶುಕ್ರವಾರ ಕೋಚಿಮುಲ್‌ ಅಧ್ಯಕ್ಷ, ಶಾಸಕ ಕೆ.ವೈ.ನಂಜೇಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಿರ್ದೇಶಕರು ಹಾಗೂ ವ್ಯವಸ್ಥಾಪಕ ನಿರ್ದೇಶಕ ಪಾಲ್ಗೊಂಡಿದ್ದರು

   

ಕೋಲಾರ: ‘ಕೋಲಾರ ಹಾಗೂ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ವಿಭಜಿಸಬೇಕೆಂಬುದು ಬಹಳ ದಿನಗಳ ಬೇಡಿಕೆ ಆಗಿತ್ತು. ರಾಜ್ಯ ಸರ್ಕಾರದ ಆದೇಶವನ್ನು ಈಗ ನ್ಯಾಯಾಲಯ ಎತ್ತಿ ಹಿಡಿದಿದೆ. ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವನ್ನು (ಕೋಚಿಮುಲ್) ವಿಭಜಿ ಸಲಾಗಿದೆ’ ಎಂದು ಒಕ್ಕೂಟದ ಅಧ್ಯಕ್ಷ,‌ ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.

ನಗರ ಹೊರವಲಯದ ಕೋಚಿಮುಲ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ‌ಮಾತನಾಡಿ, ‘ಹಿಂದಿನ ಸರ್ಕಾರ ಒಕ್ಕೂಟ ವಿಭಜನೆಗೆ ಮುಂದಾದಾಗ ಎರಡೂ ಜಿಲ್ಲೆಯವರ ತಕರಾರು ಇರಲಿಲ್ಲ. ಆದರೆ, ಆಗ ಆತುರದ ನಿರ್ಧಾರ ತೆಗೆದುಕೊಂಡು ವಿಭಜನೆಗೆ ‌ಆದೇಶ ಮಾಡಿದ್ದರು. ಇದರಿಂದ ಒಕ್ಕೂಟಕ್ಕೆ ತೊಂದರೆ ಆಗಿತ್ತು, ಅಭಿವೃದ್ಧಿಯಿಂದ ವಂಚಿತರಾಗಿದ್ದೆವು’ ಎಂದರು‌.

ADVERTISEMENT

'ಸರ್ಕಾರ ಬದಲಾದ ಮೇಲೆ ‌ನಮ್ಮ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಕೋಲಾರ ಉಸ್ತುವಾರಿ ಸಚಿವ ಬೈರತಿ ಸುರೇಶ್‌, ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್‌, ಸಹಕಾರ ಸಚಿವ ರಾಜಣ್ಣ, ಎರಡೂ ಜಿಲ್ಲೆಯ ಶಾಸಕರು ಹಾಗೂ ವಿಧಾನ ಪರಿಷತ್‌ ಸದಸ್ಯರ ಸಹಕಾರದಿಂದ ಕಾನೂನು ರೀತಿಯಲ್ಲಿ ವಿಭಜನೆ ಮಾಡಬೇಕೆಂದು ಆದೇಶ ವಾಪಸ್ ಪಡೆಯಲಾಗಿತ್ತು. ಆ ನಂತರ ನ್ಯಾಯಾಲಯದ ಆದೇಶದಂತೆ ವಿಭಜನೆ ಮಾಡಲಾಗಿದೆ. ಇದರ ಪ್ರಕಾರ ಕೋಲಾರ ಹಾಗೂ ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಹಾಲು ಒಕ್ಕೂಟ ಲಭಿಸಿದಂತಾಗಿದೆ’ ಎಂದು
ಹೇಳಿದರು.

‘ಶೇ57ರಷ್ಟು ಪಾಲು ಕೋಲಾರಕ್ಕೆ ಹಾಗೂ ಶೇ 43ರಷ್ಟು ಚಿಕ್ಕಬಳ್ಳಾಪುರಕ್ಕೆ ಸಿಗಲಿದೆ’ ಎಂದರು.

ಸದ್ಯದಲ್ಲೇ ಆಡಳಿತಾಧಿಕಾರಿ ನೇಮಕ

ವಿಭಜನೆಯಾಗಿರುವ ಕೋಚಿಮುಲ್‌ಗೆ ಸದ್ಯದಲ್ಲೇ ಆಡಳಿತಾಧಿಕಾರಿಯನ್ನು ಸರ್ಕಾರ ನೇಮಿಸಲಿದೆ. ಆರು ತಿಂಗಳೊಳಗೆ ಚುನಾವಣೆ ನಡೆಯಲಿದೆ ಎಂದು ನಂಜೇಗೌಡ ತಿಳಿಸಿದರು.

ಎರಡೂ ಒಕ್ಕೂಟಗಳಿಗೂ ಪ್ರತ್ಯೇಕವಾಗಿ ತಲಾ 13 ನಿರ್ದೇಶಕರ ಆಡಳಿತ ಮಂಡಳಿ ರಚನೆಯಾಗಲಿದೆ ಎಂದರು. ‘ಪ್ರಸಕ್ತ ಆಡಳಿತ ಮಂಡಳಿ ಶುಕ್ರವಾರ ಕೊನೆಯಾಗಿದೆ. ಮುಂದೆ ನೇಮಕವಾಗಲಿರುವ ಆಡಳಿತಾಧಿಕಾರಿ ಚುನಾವಣೆ ಪ್ರಕ್ರಿಯೆ ‌ನಡೆಸಲಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.