ಕಲಬುರಗಿ: ‘ಕೋಳಿ, ಕೋಲಿ, ಕಬ್ಬಲಿಗ ಸೇರಿ ಇತರೆ ಉಪಜಾತಿ ಗಳನ್ನು ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರ್ಪಡೆ ಮಾಡುವ ಕಾಲ ಸಮೀಪವಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರ ದಲ್ಲಿ ಮಂಗಳವಾರ ಹೇರೂರ ಶಿಕ್ಷಣ ಸಂಸ್ಥೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ದಿ.ವಿಠ್ಠಲ ಹೇರೂರ ಅವರ ಕಂಚಿನ ಪ್ರತಿಮೆ ಅನಾವರಣಗೊಳಿಸಿ ಅವರು ಮಾತನಾಡಿದರು.
‘ಉಪಜಾತಿಗಳ ಕುಲಶಾಸ್ತ್ರ ಅಧ್ಯಯನದ ಎಲ್ಲ ವಿವರ ಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ ಮುಂಡಾ ಅವರನ್ನು ಭೇಟಿಯಾಗಿ, ಈ ಬಗ್ಗೆ ಮನವರಿಕೆ ಮಾಡಲಾಗಿದೆ’ ಎಂದರು.
ಗಾಣಗಾಪುರ ಕ್ಷೇತ್ರ ಅಭಿವೃದ್ಧಿ: ‘ಕಾಶಿ ವಿಶ್ಚನಾಥ ಮತ್ತು ಉಜ್ಜಯಿನಿ, ಕಾಳಹಸ್ತಿ ಮಾದರಿಯಲ್ಲಿ ಜಿಲ್ಲೆಯ ಗಾಣಗಾಪುರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಿದೆ. ಈಗಾಗಲೇ ₹ 5 ಕೋಟಿ ನೀಡಲಾಗಿದೆ. ಜಿಲ್ಲಾಡಳಿತವು ಕ್ಷೇತ್ರದ ಅಭಿವೃದ್ಧಿಗೆ ₹ 67 ಕೋಟಿ ವೆಚ್ಚದ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿದ್ದು, ಬಜೆಟ್‌ನಲ್ಲಿ ಹಣ ಒದಗಿಸಲಾಗುವುದು’ ಎಂದರು.
ಇದಕ್ಕೂ ಮುನ್ನ ಬಸವರಾಜ ಬೊಮ್ಮಾಯಿ ಅವರು ಗಾಣಗಾಪುರದ ದತ್ತ ಮಹಾರಾಜರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಅರ್ಚಕರು ಪಂಚಲೋಹ ಮತ್ತು ಬೆಳ್ಳಿ ವಿಗ್ರಹವನ್ನು ಕಾಣಿಕೆಯಾಗಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.