ADVERTISEMENT

ಕೊಲ್ಲೂರಿಗೆ ಹೊಸ ರಥ- ಕೋಟೇಶ್ವರದಿಂದ ಇಂದು ಪ್ರಯಾಣ

ಕೋಟೇಶ್ವರದಿಂದ ಇಂದು ಪ್ರಯಾಣ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2023, 5:43 IST
Last Updated 15 ಫೆಬ್ರುವರಿ 2023, 5:43 IST
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ನೂತನ ಬ್ರಹ್ಮರಥ
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ನೂತನ ಬ್ರಹ್ಮರಥ   

ಕುಂದಾಪುರ (ಉಡುಪಿ ಜಿಲ್ಲೆ): ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕಾಗಿ ಅದ್ಭುತ ಕಾಷ್ಠಶಿಲ್ಪ ಹೊಂದಿರುವ ಬ್ರಹ್ಮರಥದ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಕೋಟೇಶ್ವರದ ಕೋಟಿಲಿಂಗೇಶ್ವರ ದೇವಸ್ಥಾನದಿಂದ ಈ ರಥವನ್ನು ಫೆ.15ರಂದು ಕೊಲ್ಲೂರಿಗೆ ಕೊಂಡೊಯ್ಯಲಾಗುವುದು.

ಅಂದಾಜು 400 ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಕೊಲ್ಲೂರು ದೇಗುಲದ ಬ್ರಹ್ಮರಥ ಶಿಥಿಲ ಸ್ಥಿತಿಯಲ್ಲಿ ಇತ್ತು. ಮುರ್ಡೇಶ್ವರ ಕ್ಷೇತ್ರದ ಪುನರ್ ನಿರ್ಮಾತೃ ದಿ.ಆರ್.ಎನ್.ಶೆಟ್ಟಿ ಅವರ ಪುತ್ರ, ಉದ್ಯಮಿ ಸುನಿಲ್ ಆರ್. ಶೆಟ್ಟಿ ಅವರು ನೂತನ ಬ್ರಹ್ಮರಥವನ್ನು ನಿರ್ಮಿಸಿ ಕೊಡುವ ಪ್ರಸ್ತಾವ ಮುಂದಿಟ್ಟಿದ್ದರು. ಆಡಳಿತ ಮಂಡಳಿ ಹಾಗೂ ಸರ್ಕಾರದ ಒಪ್ಪಿಗೆಯ ಬಳಿಕ ವಾಸ್ತುತಜ್ಞ ಡಾ.ಮಹೇಶ್ ಮುನಿಯಂಗಳ ಅವರ ಉಸ್ತುವಾರಿ ಹಾಗೂ ಶಿಲ್ಪಿ ಕೆ.ಲಕ್ಷ್ಮೀನಾರಾಯಣ ಆಚಾರ್ಯ ಅವರ ಮಾರ್ಗದರ್ಶನದಲ್ಲಿ ಕುಂದಾಪುರ ಸಮೀಪದ ಕುಂಭಾಶಿಯ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದಲ್ಲಿ ನೂತನ ಬ್ರಹ್ಮರಥ ಸಿದ್ಧಪಡಿಸಲಾಗಿದೆ.

ಈಗಿರುವ ಮೂಲ ರಥದ ಎಲ್ಲ ವಿನ್ಯಾಸಗಳನ್ನು ನೂತನ ರಥದಲ್ಲಿಯೂ ಉಳಿಸಿಕೊಳ್ಳಬೇಕು ಎನ್ನುವ ವಾಸ್ತು ತಜ್ಞರ ಹಾಗೂ ಶಿಲ್ಪಿಗಳ ಸಲಹೆಗಳನ್ನು ಅನುಷ್ಠಾನಕ್ಕೆ ತರಲು ಶಿಲ್ಪಿ ರಾಜಗೋಪಾಲ ಆಚಾರ್ಯ ಹಾಗೂ ಶಂಕರ ಆಚಾರ್ಯ ಅವರ ನೇತೃತ್ವದ ತಂಡ ಆಧುನಿಕ ತಂತ್ರಜ್ಞಾನದ ಮೊರೆ ಹೋಗಿತ್ತು.

ADVERTISEMENT

ದೂಳು, ಎಣ್ಣೆ, ಮಣ್ಣು ರಥದ ಕೆತ್ತನೆಗಳನ್ನು ಮುಚ್ಚಿಕೊಂಡಿದ್ದರಿಂದ ಮೂಲ ರಥದಲ್ಲಿನ ಕಾಷ್ಠ ಶಿಲ್ಪದ ರಚನೆಯನ್ನು ತಿಳಿದುಕೊ
ಳ್ಳುವುದೇ ಸವಾಲಿನ ಕೆಲಸವಾಗಿತ್ತು. ವಿಶೇಷ ಉಪಕರಣಗಳ ಮೂಲಕ ರಥವನ್ನು ಸ್ವಚ್ಚಗೊಳಿಸಿ ಆಧುನಿಕ ತಂತ್ರಜ್ಞಾನದಿಂದ ಕೂಡಿದ ಸಿಎನ್‌ಸಿ ಸ್ಕ್ಯಾನಿಂಗ್ ಯಂತ್ರಗಳನ್ನು ಬಳಸಿ ಹಳೆಯ ರಥದಲ್ಲಿನ ಮೂರ್ತಿ ಹಾಗೂ ಕೆತ್ತನೆಗಳ ಚಿತ್ರಣ ಸೆರೆ ಹಿಡಿಯಲಾಯಿತು. ವಿನ್ಯಾಸ ಹಾಗೂ ಕಾಷ್ಠಶಿಲ್ಪಗಳ ರಚನೆಯಲ್ಲಿ ಯಾವುದೇ ಬದಲಾವಣೆ ಮಾಡದೆ ಹಳೆಯ ರಥದ ಪಡಿಯಚ್ಚಿನಂತೆ ಹೊಸ ಬ್ರಹ್ಮರಥ ತಯಾರಿಸಲಾಗಿದೆ.

57 ಅಡಿ ಎತ್ತರದ ಬ್ರಹ್ಮರಥದ ಚಕ್ರ ಮತ್ತು ಅಚ್ಚುಮರಕ್ಕೆ ಭೋಗಿ ಮರವನ್ನು ಬಳಸಿಕೊಳ್ಳಲಾಗಿದೆ. ಸಾಗುವಾನಿ ಮತ್ತು ಹೆಬ್ಬಲಸಿನ ಮರದಿಂದ ಉಳಿದ ಭಾಗವನ್ನು ನಿರ್ಮಿಸಲಾಗಿದೆ. ಕರಾವಳಿಯ ವಾತಾವ
ರಣಕ್ಕೆ ಹೊಂದಿಕೊಳ್ಳುವ, ತುಕ್ಕು ಹಿಡಿಯದ ಕಬ್ಬಿಣದ ಎಸ್‍ಎಸ್ ಪಟ್ಟಿಗಳನ್ನು ರಥದ ಚಕ್ರಗಳಿಗೆ ಅಳವಡಿಸಲಾಗಿದೆ.

ಸಮುದ್ರ ಮಂಥನ, ರಾಮಯಾಣ, ಮಹಾ ಭಾರತ, ರಾಜ ವೈಭೋಗ, ದೇವರ ಉತ್ಸವ, ಆಯುಧಗಳು, ಅಷ್ಟ ದಿಕ್ಪಾಲಕರು, ಆನೆ, ಪಂಚವಾದ್ಯ, ಶಿಲಾ ಬಾಲಿಕೆಯರು, ನಾಗಕನ್ನಿಕೆ, ಸಿಂಹ, ಬ್ರಹ್ಮದೇವ, ಲಕ್ಷ್ಮೀ, ಶಿವ ಪಾರ್ವತಿ, ಗಂಟೆಗಳ ಸಾಲು, ನಾಗನ ಹೆಡೆ, ಹೂವಿನ ಬಳ್ಳಿಗಳ ಕೆತ್ತನೆ ರಥದ ಸೌಂದರ್ಯ ಹೆಚ್ಚಿಸಿದೆ.

ನಾಳೆ ಸಮರ್ಪಣೆ: ಭಾನುವಾರ ರಥದ ಪೂಜೆ ನಡೆಸಲಾಗಿದ್ದು, ಸೋಮವಾರ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಮಂಗಳವಾರ ರಥವನ್ನು ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಇರಿಸಲಾಗಿತ್ತು. ಬುಧವಾರ (ಫೆ.15ರಂದು) ಮೆರವಣಿಗೆಯ ಮೂಲಕ ರಥವನ್ನು ಕೊಲ್ಲೂರು ಕ್ಷೇತ್ರಕ್ಕೆ ಒಯ್ಯಲಾ
ಗುವುದು. ರಥ ಸಾಗುವ
ದಾರಿಯಲ್ಲಿರುವ ಪ್ರಮುಖ ದೇವಸ್ಥಾನಗಳಲ್ಲಿ ಭಕ್ತರಿಗೆ ಪುಷ್ಪಾರ್ಚನೆಗೆ ಅವಕಾಶ ಕಲ್ಪಿಸಲಾಗಿದೆ. ಫೆ.16 ರಂದು ಬ್ರಹ್ಮರಥ ಸಮರ್ಪಣಾ ಕಾರ್ಯ ನಡೆಯಲಿದೆ ಎಂದು ಕೊಲ್ಲೂರು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

148ನೇ ಬ್ರಹ್ಮರಥ: ರಥ ನಿರ್ಮಾಣದಲ್ಲಿ ದೇಶವ್ಯಾಪಿ ಹೆಸರು ಮಾಡಿರುವ ಕುಂಭಾಶಿಯ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದಲ್ಲಿ ನಿರ್ಮಾಣವಾಗುತ್ತಿರುವ 148ನೇ ಬ್ರಹ್ಮರಥ ಇದಾಗಿದೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಮಂಗಳೂರಿನ ವೆಂಕಟರಮಣ, ಮುರ್ಡೇಶ್ವರ ಸೇರಿದಂತೆ ನಾಡಿನ ವಿವಿಧ ಪ್ರಸಿದ್ಧ ಪುಣ್ಯ ಕ್ಷೇತ್ರಗಳ ರಥ ನಿರ್ಮಿಸಿದ ಹೆಗ್ಗಳಿಕೆ ಈ ಸಂಸ್ಥೆಗೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.