ADVERTISEMENT

ಆದಿವಾಸಿಗಳ ಕಥೆ–ವ್ಯಥೆ: ಬೇಕಾಗಿರುವುದು ಅನುದಾನವಲ್ಲ, ಪ್ರೀತಿ

ಕರಾವಳಿಯಲ್ಲಿ ಮಲೆಕುಡಿಯ, ಕೊರಗ ಸಮುದಾಯದ ದನಿ

ಕೋಡಿಬೆಟ್ಟು ರಾಜಲಕ್ಷ್ಮಿ
Published 17 ಮಾರ್ಚ್ 2019, 1:37 IST
Last Updated 17 ಮಾರ್ಚ್ 2019, 1:37 IST
ಬೆಳ್ತಂಗಡಿಯ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ತಮ್ಮ ಮನೆಗೆ ಪಡಿತರ ಸಾಮಾನು ಹೊತ್ತು ಸಾಗುತ್ತಿರುವ ಮಲೆಕುಡಿಯರು. ಚಿತ್ರ: ವಿಠಲ ಮಲೆಕುಡಿಯ
ಬೆಳ್ತಂಗಡಿಯ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ತಮ್ಮ ಮನೆಗೆ ಪಡಿತರ ಸಾಮಾನು ಹೊತ್ತು ಸಾಗುತ್ತಿರುವ ಮಲೆಕುಡಿಯರು. ಚಿತ್ರ: ವಿಠಲ ಮಲೆಕುಡಿಯ   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆದಿವಾಸಿ ಸಮುದಾಯಕ್ಕೆ ಸೇರಿದ ಮಲೆಕುಡಿಯ, ಕೊರಗ ಮತ್ತು ಮರಾಠಿ ಸಮುದಾಯದವರಿದ್ದಾರೆ.

ಅತ್ತ ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗೆ ಪುರಾತನ ಕಾಲದಿಂದಲೂ ವಾಸವಿದ್ದ ಮಲೆಕುಡಿಯರು ಅರಣ್ಯ ಇಲಾಖೆಯ ಕಾನೂನುಗಳೊಂದಿಗೆ ಗುದ್ದಾಡುತ್ತಿದ್ದರೆ, ಇತ್ತ ಅಳಿವಿನಂಚಿನಲ್ಲಿರುವ ಕೊರಗ ಸಮುದಾಯದವರು ಸಾಮಾಜಿಕ ಪ್ರೀತಿಯ ಕೊರತೆಯಿಂದ ಬಳಲುತ್ತಿದ್ದಾರೆ.

ಹಲವು ತಲೆಮಾರುಗಳಿಂದ ಅರಣ್ಯದಲ್ಲಿ ಹಕ್ಕುಪತ್ರದೊಂದಿಗೆ ಜೀವನ ಮಾಡುತ್ತಿದ್ದ ಮಲೆಕುಡಿಯರು ಈಗಲೂ ಅವಿಭಕ್ತ ಕುಟುಂಬ ಪದ್ಧತಿಯಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಸುಮಾರು 600 ಕುಟುಂಬಗಳು ಈ ರೀತಿ ವಾಸಮಾಡುತ್ತಿದ್ದರೂ, ಕಾಲೋನಿಗಳಿಗೆ ರಸ್ತೆ ಮತ್ತು ವಿದ್ಯುತ್‌ ಸಂಪರ್ಕ ಕಲ್ಪಿಸಲು ಅರಣ್ಯ ಇಲಾಖೆ ಅನುಮತಿ ನೀಡುವುದಿಲ್ಲ.

ADVERTISEMENT
ಬುಟ್ಟಿ ಹೆಣೆಯುತ್ತಿರುವ ಮಲೆಕುಡಿಯ ಸಮುದಾಯದ ಹಿರಿಯರು (ಚಿತ್ರ: ವಿಠಲ ಮಲೆಕುಡಿಯ)

ಹಾಗಾಗಿ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಮೂಲಕ ಬರುವ ಕೋಟಿಗಟ್ಟಲೆ ಅನುದಾನ ಇತರ ಉದ್ದೇಶಗಳಿಗೆ ಬಳಕೆ ಯಾಗುತ್ತಿದೆ. ಮಲೆಕುಡಿಯ ಕಾಲೊನಿಗಳಿಗೆ ರಸ್ತೆ ನಿರ್ಮಿಸುವ ಬದಲು, ಮಲೆಕುಡಿಯರ ಕಾಲೋನಿ ಪ್ರವೇಶಿಸುವ ನಗರ ಪ್ರದೇಶದ ರಸ್ತೆಗಳಿಗೇ ಕಾಂಕ್ರೀಟು ಹಾಕಿ, ಬೋರ್ಡು ಬರೆದು, ಇಲಾಖೆ ಅಧಿಕಾರಿಗಳು ಕೈತೊಳೆದುಕೊಂಡುಬಿಡುತ್ತಾರೆ ಎನ್ನುತ್ತಾರೆ ಆದಿವಾಸಿ ಸಮನ್ವಯ ಸಮಿತಿಯ ಬೆಳ್ತಂಗಡಿ ತಾಲ್ಲೂಕು ಕಾರ್ಯ ದರ್ಶಿ ಜಯಾನಂದ ಸವಣಾಲು.

ಹತ್ತಾರು ಎಕರೆ ಕೃಷಿ ಜಮೀನು ಹೊಂದಿದ ಕುಟುಂಬಗಳು ಕಿಂಚಿತ್‌ ಪರಿಹಾರದೊಂದಿಗೆ ಚಿಕ್ಕ ಪ್ರದೇಶಕ್ಕೆ ಸ್ಥಳಾಂತರ ಆಗುವುದಾದರೂ ಹೇಗೆ ಎಂಬುದೂ ಅವರ ಪ್ರಶ್ನೆ.

ಕೊರಗ ಸಮುದಾಯಕ್ಕೆ ಪೋಷ ಕಾಂಶ ಯುಕ್ತ ಆಹಾರ ವಿತರಣೆ, ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ, ಮನೆ ನಿವೇಶನ, ಕೃಷಿ ಜಮೀನು ಎಂಬುದಾಗಿ ಹತ್ತು ಹಲವು ಕಾರ್ಯಕ್ರಮಗಳಿಗಾಗಿ ಸರ್ಕಾರ ನೀರಿನಂತೆ ಹಣ ವಿನಿಯೋಗಿಸುತ್ತದೆ. ಆದರೆ ದೀರ್ಘಕಾಲದ ಸಾಮಾಜಿಕ ಅಸ್ಪೃಶ್ಯತೆಯಿಂದ ಬಳಲಿರುವ ಕೊರಗರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವ ಹುಮ್ಮಸ್ಸು ತೋರಿಸುತ್ತಿಲ್ಲ. ದೇಹ ತುಸು ಗಟ್ಟಿಮುಟ್ಟಾದದ್ದೇ ತಡ ಮಕ್ಕಳು ಕೂಲಿ ಕೆಲಸಕ್ಕೆ ಓಡಿಬಿಡುತ್ತಾರೆ. ಬೇಗನೇ ನೋಟುಗಳನ್ನು ಎಣಿಸುತ್ತ ಕುಡಿತಕ್ಕೆ ಶರಣಾಗುತ್ತಿದ್ದಾರೆ. ಕುಡಿತ ಮತ್ತು ತಂಬಾಕಿನಿಂದ ಸಾವನ್ನಪ್ಪುವವರೇ ಹೆಚ್ಚು ಎನ್ನುತ್ತಾರೆ ಕೊರಗ ಸಮುದಾಯದ ಮುಖಂಡ ಗಣೇಶ್‌ ಬಾರ್ಕೂರು.

ಕರಾವಳಿಯ ಮಟ್ಟಿಗೆ ಕೊರಗರಿಗೆ ಬೇಕಾದುದು ಪ್ರೀತಿಯೇ ಹೊರತು ಹಣವಲ್ಲ. ಅವರಿಗಾಗಿ ಪ್ರತ್ಯೇಕ ಶಾಲೆಯಲ್ಲಿ ಶಿಕ್ಷಣ ನೀಡುವ ಬದಲಿಗೆ ಎಲ್ಲ ಸಮುದಾಯದವರೊಂದಿಗೆ ಬೆರೆಯುವ ಅವಕಾಶ ಕಲ್ಪಿಸಬೇಕಾಗಿದೆ. ಅವರನ್ನು ಒಳಗೊಂಡು ಕಾರ್ಯಕ್ರಮಗಳನ್ನು ರೂಪಿಸುವ, ಪ್ರೀತಿಯಿಂದ ಸುವ್ಯವಸ್ಥಿತ ಬದುಕು ಕಟ್ಟಿಕೊಳ್ಳುವಂತೆ ತಿಳಿಹೇಳುವ ಜವಾಬ್ದಾರಿ ಸಾಮಾಜಿಕವಾಗಿ ಮುಂದುವರಿದವರೆಂದು ಗುರುತಿಸಿಕೊಂಡವರದ್ದೂ ಆಗಿದೆ.

ಹಾಗೆ ನೋಡಿದರೆ ಜಿಲ್ಲೆಯ ಆದಿವಾಸಿ ಸಮುದಾಯದ ಮಕ್ಕಳಿಗಿಂತ ಹೆಚ್ಚಿನ ಸಂಖ್ಯೆ ಮಕ್ಕಳು ರಾಜ್ಯದ ಇತರ ಭಾಗಗಳಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಬಂದು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕರಾವಳಿಯಲ್ಲಿ ಶಿಕ್ಷಣ ವ್ಯವಸ್ಥೆ ಚೆನ್ನಾಗಿರುವುದರಿಂದ ಮತ್ತು ಉದ್ಯೋಗಾವಕಾಶಗಳೂ ಉತ್ತಮವಾಗಿರುವುದರಿಂದ ಹಲವು ವಿದ್ಯಾರ್ಥಿ ನಿಲಯಗಳಲ್ಲಿ ಮಕ್ಕಳು ಶಿಕ್ಷಣ ಮುಂದುವರಿಸುತ್ತಿದ್ದಾರೆ.

ಅವರಿಗೆ ಪೋಷಕಾಂಶಯುಕ್ತ ಆಹಾರ, ಭತ್ಯೆಗಳು, ವಿದ್ಯಾರ್ಥಿ ವೇತನಗಳನ್ನು ವಿದ್ಯಾರ್ಥಿನಿಲಯದ ಮೂಲಕವೇ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಪ್ರಸ್ತುತ ಜಿಲ್ಲೆಯಲ್ಲಿ 1,604 ಮಲೆಕುಡಿಯ ಕುಟುಂಬಗಳಿದ್ದರೆ, 1,206 ಕೊರಗ ಕುಟುಂಬಗಳಿವೆ. ಮರಾಠಿ ಸಮುದಾಯದ 10,833 ಕುಟುಂಬಗಳಿವೆ. ಸರ್ಕಾರ ನೀಡುತ್ತಿರುವ ಅನುದಾನದಲ್ಲಿ ಬಹುಪಾಲು ಮರಾಠಿ ಸಮುದಾಯದವರಿಗೆ ಸಲ್ಲುತ್ತಿದೆ.

ಉಡುಪಿ ಜಿಲ್ಲೆಯಲ್ಲಿ 2,560 ಕೊರಗ ಕುಟುಂಬ ಗಳಿದ್ದು, 11,133 ಮಂದಿ ಕೊರಗರಿದ್ದಾರೆ. 439 ಮಲೆಕುಡಿಯ ಕುಟುಂಬಗಳಿದ್ದು, 1,932 ಮಂದಿ ಮಲೆಕುಡಿಯರು ಇದ್ದಾರೆ. ಗೊಂಡ ಸಮುದಾಯಕ್ಕೆ ಸೇರಿದ 50 ರಿಂದ 60 ಮಂದಿ ಇದ್ದಾರೆ. ಮರಾಠಿ ಸಮುದಾಯಕ್ಕೆ ಸೇರಿದ 32 ಸಾವಿರಕ್ಕೂ ಹೆಚ್ಚು ಜನರು ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.