ADVERTISEMENT

ನವ ಕರ್ನಾಟಕ ಶೃಂಗ | ಸರ್ವರ ಅಭಿವೃದ್ಧಿಗೆ ಅಹರ್ನಿಶಿ ಪ್ರಯತ್ನ: ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2023, 19:45 IST
Last Updated 10 ಮಾರ್ಚ್ 2023, 19:45 IST
‘ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕಾಗಿ ಸಮಾಜ ಕಲ್ಯಾಣ ಕಾರ್ಯಕ್ರಮಗಳು’ ಗೋಷ್ಠಿಯಲ್ಲಿ ಡೆಕ್ಕನ್‌ ಹೆರಾಲ್ಡ್‌ ವರದಿಗಾರ ಪವನ್‌ ಕುಮಾರ್‌, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಡಾ.ಸುಭಾಷ ನಾಟೀಕರ, ಪ್ರೊ.ವಿಷ್ಣುಕಾಂತ ಎಸ್‌. ಚಟಪಲ್ಲಿ ಹಾಗೂ ಪ್ರೊ.ಎಂ.ಎಸ್‌.ಸುಭಾಷ್ ಪಾಲ್ಗೊಂಡಿದ್ದರು  –ಪ್ರಜಾವಾಣಿ ಚಿತ್ರ
‘ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕಾಗಿ ಸಮಾಜ ಕಲ್ಯಾಣ ಕಾರ್ಯಕ್ರಮಗಳು’ ಗೋಷ್ಠಿಯಲ್ಲಿ ಡೆಕ್ಕನ್‌ ಹೆರಾಲ್ಡ್‌ ವರದಿಗಾರ ಪವನ್‌ ಕುಮಾರ್‌, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಡಾ.ಸುಭಾಷ ನಾಟೀಕರ, ಪ್ರೊ.ವಿಷ್ಣುಕಾಂತ ಎಸ್‌. ಚಟಪಲ್ಲಿ ಹಾಗೂ ಪ್ರೊ.ಎಂ.ಎಸ್‌.ಸುಭಾಷ್ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಪ್ರತಿ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ಸರ್ಕಾರ ಬದ್ಧವಾಗಿದೆ. ಉದ್ದೇಶ ಈಡೇರಿಕೆ ಆಗಿದೆಯೇ ಎಂದು ಕಾಲಕಾಲಕ್ಕೆ ಪರಿಶೀಲಿಸಲಾಗುತ್ತಿದೆ’ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

‘ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕಾಗಿ ಸಮಾಜ ಕಲ್ಯಾಣ ಕಾರ್ಯಕ್ರಮಗಳು’ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಸ್‌ಸಿ, ಎಸ್‌ಟಿಯಲ್ಲಿ ಹಲವು ಉಪಜಾತಿ– ಪಂಗಡಗಳಿವೆ. ಒಬ್ಬೊಬ್ಬರದು ಒಂದೊಂದು ಕುಲಕಸುಬು. ಅಂಥ ಸಮುದಾಯಗಳಿಗೆ ಸೌಲಭ್ಯ ಕಲಿಸಿ, ಅವರಿಗೆ ಸಾಮಾಜಿಕ ಬದುಕು ಕಟ್ಟಿಕೊಳ್ಳಲು ಸರ್ಕಾರ ನೆರವಾಗುತ್ತಿದೆ’ ಎಂದರು.

‘ಕೊಪ್ಪಳದಲ್ಲಿ ಒಂದು ಅಸ್ಪಶ್ಯ ಆಚರಣೆಯ ಘಟನೆ ನಡೆದಿತ್ತು. ನಮ್ಮ ಸರ್ಕಾರ ಅಸ್ಪಶ್ಯ ನಿವಾರಣೆಗೆ ವಿನಯ ಸಾಮರಸ್ಯ ಯೋಜನೆ ಜಾರಿಗೊಳಿಸಿತು. ಪ್ರತಿಷ್ಠಿತ ಶಾಲೆಗಳಿಗೆ ಸಫಾಯಿ ಕರ್ಮಚಾರಿಗಳು, ಸ್ಮಶಾನ ಕೆಲಸ ಮಾಡುವ ಕಾರ್ಮಿಕರ ಮಕ್ಕಳನ್ನು ಸೇರಿಸಲು ಕ್ರಮವಹಿಸಲಾಗಿದೆ’ ಎಂದರು.

ADVERTISEMENT

‘ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರಿ ಯೋಜನೆಗಳು ಪರಿಣಾಮಕಾರಿಯಾಗಿ ತಲುಪುತ್ತಿಲ್ಲ. ಅಲ್ಲಿ ಮಧ್ಯವರ್ತಿಗಳ ಹಾವಳಿಯಿದೆ. ಅದನ್ನು ಸರಿಪಡಿಸಲು ಸರ್ಕಾರ ಕ್ರಮವಹಿಸಬೇಕು’ ಎಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಡಾ.ಬಿ.ಆರ್‌.ಅಂಬೇಡ್ಕರ್‌ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಸುಭಾಷ ನಾಟೀಕರ ಸಲಹೆ ನೀಡಿದರು.

ಗದುಗಿನ ಕರ್ನಾಟಕ ರಾಜ್ಯ ಪಂಚಾಯತ್ ರಾಜ್ಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿಷ್ಣುಕಾಂತ ಎಸ್. ಚಟಪಲ್ಲಿ, ‘ಸರ್ಕಾರಿ ಯೋಜನೆಗಳ ನಡುವಣ ಸಮನ್ವಯ ಕೊರತೆ ನೀಗಿಸಿದರೆ, ಅವು ಸಮುದಾಯದ ಅಭಿವೃದ್ಧಿಗೆ ನೆರವಾಗುತ್ತವೆ. ಕಾಲೇಜು ಶುರುವಾದಾಗ ಹಾಸ್ಟೆಲ್‌ ಶುರುವಾಗಲ್ಲ. ಬಸ್‌ ಪಾಸ್‌ ಕೂಡ ಸಿಗಲ್ಲ. ಈ ಕೊರತೆಗಳನ್ನು ನೀಗಿಸಿದಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ನೆರವಾಗುತ್ತದೆ’ ಎಂದರು.

‘ಸಾಮಾಜಿಕ ತಾರತಮ್ಯ ಸರಿಪಡಿಸಲು ಸಮಾಜದ ಜನರೆಲ್ಲರೂ ಸೂಕ್ಷ್ಮತೆ ಬೆಳೆಸಿಕೊಳ್ಳುವ ಅಗತ್ಯವಿದೆ’ ಎಂದು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎಂ.ಎಸ್‌. ಸುಭಾಷ್ ಹೇಳಿದರು.

*
ಸರ್ಕಾರದ ಎಸ್‌ಸಿಪಿ, ಟಿಎಸ್‌ಪಿ ಅನುದಾನವು ಶೈಕ್ಷಣಿಕ ಚಟುವಟಿಗಳಿಗೆ ವರದಾನ.
-ಡಾ.ಸುಭಾಷ ನಾಟೀಕರ, ನಿರ್ದೇಶಕ, ಡಾ.ಬಿಆರ್‌.ಅಂಬೇಡ್ಕರ್‌ ಅಧ್ಯಯನ ಕೇಂದ್ರ, ಕ.ವಿ.ವಿ. ಧಾರವಾಡ

*
ಪರಿಶಿಷ್ಟರ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಯೋಜನೆ ರೂಪಿಸಿ, ಅನುದಾನ ಕೊಡುತ್ತಿದೆ. ಇದರ ಉದ್ದೇಶ ಈಡೇರುತ್ತಿಲ್ಲ.
-ಪ್ರೊ.ಎಂ.ಎಸ್‌.ಸುಭಾಷ್, ವಿಶ್ರಾಂತ ಕುಲಪತಿ, ವಿಜಯನಗರ ಶ್ರೀಕೃಷ್ಣದೇವರಾಯ ವಿ.ವಿ, ಬಳ್ಳಾರಿ

*
ಅಂಬೇಡ್ಕರ್‌ ಜಯಂತಿ ಎಸ್‌ಸಿ,ಎಸ್‌ಟಿ ಸಮುದಾಯದವರಿಗೆ ಸೀಮಿತವಾಗದೇ ಎಲ್ಲರೂ ಆಚರಿಸಬೇಕು.
-ಪ್ರೊ.ವಿಷ್ಣುಕಾಂತ ಎಸ್. ಚಟಪಲ್ಲಿ, ಕುಲಪತಿ, ಕರ್ನಾಟಕ ರಾಜ್ಯ ಪಂಚಾಯತ್ ರಾಜ್ಯ ವಿ.ವಿ, ಗದಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.