ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ಅವರಿಗೀಗ ಅನಾರೋಗ್ಯದ ನೆಪ ಹೇಳಲಾಗುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಆರೋಪಿಸಿದೆ.
ಈ ಕುರಿತು ಸರಣಿ ಟ್ವೀಟ್‌ನಲ್ಲಿ ವಾಗ್ದಾಳಿ ನಡೆಸಿದ್ದು, ರಮೇಶ್ ಜಾರಕಿಹೊಳಿ 'ಜಾರಿಕೊಳ್ಳಲು' ಕೊರೊನಾ ಹೆಸರಿನ ನೆಪವೇ? ಭೀಮಾ ಕೊರೆಗಾಂವ್ ಪ್ರಕರಣದಲ್ಲಿ ದಲಿತಪರ ಧ್ವನಿಗಳಾಗಿದ್ದ ಚಿಂತಕರ ವೃದ್ಧಾಪ್ಯವನ್ನು ಲೆಕ್ಕಿಸದೆ, ಅನಾರೋಗ್ಯವನ್ನೂ ಪರಿಗಣಿಸದೆ ಕ್ರೂರವಾಗಿ ನಡೆಸಿಕೊಂಡ ಬಿಜೆಪಿ ಈಗ ಅತ್ಯಾಚಾರ ಆರೋಪಿಗೆ ಅನಾರೋಗ್ಯದ ನೆಪ ಹೇಳುವುದು ಹಾಸ್ಯಾಸ್ಪದ. "ಕಳ್ಳನಿಗೊಂದು ಪಿಳ್ಳೆ ನೆಪ"!! ಎಂದು ಆರೋಪಿಸಿದೆ.
ಅತ್ಯಾಚಾರ ಆರೋಪಿ ರಮೇಶ್ ಜಾರಕಿಹೊಳಿಗೆ ಕೊರೊನಾ ಪಾಸಿಟಿವ್ ಎನ್ನುವ ವರದಿಯಾಗಿದೆ. ಅದು ನಿಜವೇ ಆಗಿದ್ದರೆ ಅವರ ಸಂಪರ್ಕಕ್ಕೆ ಬಂದಿದ್ದ ಎಸ್‌ಐಟಿ ಅಧಿಕಾರಿಗಳು ಕೋವಿಡ್ ಪರೀಕ್ಷೆಗೆ ಒಳಪಡದೆ, ಕ್ವಾರಂಟೈನ್ ಆಗದೆ ಕೋವಿಡ್ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ತಪ್ಪಲ್ಲವೇ? ಎಂದು ಪ್ರಶ್ನಿಸಿದೆ.
ನೀವು (ಬಿಜೆಪಿ) ವಿರೋಧ ಪಕ್ಷಗಳ ನಾಯಕರ ಹೆಸರುಗಳನ್ನು ಅನಗತ್ಯವಾಗಿ ಪ್ರಸ್ತಾಪಿಸಿ ಪ್ರಕರಣವನ್ನು ಮುಚ್ಚಿಕೊಳ್ಳಬಹುದು ಎಂದುಕೊಂಡಿದ್ದರೆ ಅದು ನಿಮ್ಮ ಭ್ರಮೆ. ಕಾನೂನು ಗಟ್ಟಿ ಇದೆ, ಅದನ್ನು ಬಳಸುತ್ತಿರುವ ಕೈಗಳು ಭ್ರಷ್ಟರದ್ದಾಗಿದೆ ಅಷ್ಟೇ. ಇಂತಹ ನವರಂಗಿ ನಾಟಕ ಬಿಟ್ಟು ಆರೋಪಿಯನ್ನು ಬಂಧಿಸುವುದು ಯಾವಾಗ ಹೇಳಿ? ಎಂದು ತಿರುಗೇಟು ನೀಡಿದೆ.
"ಸಿಡಿ ಇಟ್ಟುಕೊಂಡು ಮುಖ್ಯಮಂತ್ರಿಯನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಬಿಜೆಪಿಯವರು" ಎಂದು ಬಸನಗೌಡ ಪಾಟೀಲ್ ಯತ್ನಾಳ್ ಪದೇ ಪದೇ ಆರೋಪಿಸುತ್ತಿದ್ದಾರೆ. ಸಿಎಂ ಬ್ಲ್ಯಾಕ್‌ಮೇಲ್‌ಗೆ ಒಳಪಟ್ಟರೆ ಭ್ರಷ್ಟಾಚಾರ, ಅರಾಜಕತೆ, ಅಧಿಕಾರ ದುರುಪಯೋಗ ಮುಂತಾದವುಗಳಿಗೆ ಅವಕಾಶವಾಗುವ ಸಾಧ್ಯತೆ ಇದೆ. ಈ ಬಗ್ಗೆ ಗಂಭೀರವಾಗಿ ಉನ್ನತ ಮಟ್ಟದ ತನಿಖೆಯಾಗುವ ಅಗತ್ಯವಿದೆ ಎಂದು ಆಗ್ರಹಿಸಿದೆ.
ರಫೇಲ್ ಖರೀದಿಯಲ್ಲಿ ಭ್ರಷ್ಟಾಚಾರ...
ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ನಡೆದ ಭ್ರಷ್ಟಾಚಾರದ ಸಂಗತಿಗಳು ಹೊರಬರುತ್ತಲೇ ಇವೆ. ಡಸಾಲ್ಟ್ ಕಂಪೆನಿ ಭಾರತದ ಮಧ್ಯವರ್ತಿಗೆ "ಗ್ರಾಹಕರಿಗೆ ಉಡುಗೊರೆ" ಹೆಸರಲ್ಲಿ ಸುಮಾರು 8 ಕೋಟಿ ಲಂಚ ನೀಡಿದ್ದು ತನಿಖಾ ವರದಿಯಲ್ಲಿ ಬಯಲಾಗಿದೆ. ರಫೆಲ್ ಗ್ರಾಹಕ ನೀವೇ ಅಲ್ಲವೇ ಪ್ರಧಾನಿ ನರೇಂದ್ರ ಮೋದಿ ಅವರೇ? ಆ ಹಣ ಪಡೆದದ್ದು ನೀವಾ? ಅಥವಾ ಇತರರಾ? ತನಿಖೆಗೆ ವಹಿಸದೆ ಮೌನವೇಕೆ? ಎಂದು ಆರೋಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.