ADVERTISEMENT

ಖರ್ಗೆ ಕುಟುಂಬಕ್ಕೆ ಮಸಿ ಬಳಿಯಲು ಲಹರ್‌ ಸಿಂಗ್‌ ಯತ್ನ: ರಮೇಶ್ ಬಾಬು

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2024, 16:21 IST
Last Updated 26 ಆಗಸ್ಟ್ 2024, 16:21 IST
   

ಬೆಂಗಳೂರು: ‘ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ರಾಹುಲ್‌ ಖರ್ಗೆ ಅವರ ಸಿದ್ಧಾರ್ಥ ವಿಹಾರ ಶಿಕ್ಷಣ ಟ್ರಸ್ಟ್‌ಗೆ ನಾಗರಿಕ ಸೌಲಭ್ಯದ ನಿವೇಶನ ನಿಯಮ ಪ್ರಕಾರವೇ ಹಂಚಿಕೆ ಆಗಿದ್ದರೂ, ಖರ್ಗೆ ಕುಟುಂಬಕ್ಕೆ ಮಸಿ ಬಳಿಯಲು ಬಿಜೆಪಿ ನಾಯಕ ಲಹರ್‌ ಸಿಂಗ್‌ ಸಿರೋಯ ಜಾತಿಯ ಬಣ್ಣ ಲೇಪಿಸಿದ್ದಾರೆ’ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಂದು ಸಮುದಾಯವನ್ನು ಲಹರ್‌ ಸಿಂಗ್‌ ಗುರಿ ಮಾಡಿರುವ ಕಾರಣಕ್ಕೆ ಅವರ ವಿರುದ್ಧ ದೂರು ದಾಖಲಿಸಲಾಗುವುದು. ಅವರು ಸಾರ್ವಜನಿಕವಾಗಿ ಕ್ಷಮೆ ಕೇಳದಿದ್ದರೆ ಕಾಂಗ್ರೆಸ್ ಪಕ್ಷ ಅವರ ವಿರುದ್ಧ ಹೋರಾಟ ಹಮ್ಮಿಕೊಳ್ಳಲಿದೆ’ ಎಂದು ಎಚ್ಚರಿಕೆ ನೀಡಿದರು.

‘ರಾಜಸ್ಥಾನದಿಂದ ವಲಸೆ ಬಂದು ಕರ್ನಾಟಕದಲ್ಲಿ ರಾಜಕೀಯವಾಗಿ ಲಾಟರಿ ಹೊಡೆದವರಲ್ಲಿ ಲಹರ್‌ ಸಿಂಗ್‌ ಕೂಡಾ ಒಬ್ಬರು. ಅವರಿಂದ ಕರ್ನಾಟಕದ ಅಭಿವೃದ್ಧಿಗೆ, ಬೆಳವಣಿಗೆಗೆ ಕಿಂಚಿತ್ತೂ ಕೊಡುಗೆಯಿಲ್ಲ. ಬಿಜೆಪಿಯ ಖಜಾಂಚಿಯಾಗಿದ್ದ ಅವರು ಹೇಗೆ ರಾಜ್ಯಸಭೆ ಸದಸ್ಯ ಸ್ಥಾನಕ್ಕೆ ಹೋದರು ಎಂಬುದರ ಬಗ್ಗೆ ತನಿಖೆ ಆಗಬೇಕಿದೆ. ಯಾವ್ಯಾವ ನಾಯಕರಿಗೆ ಏನು ಕೆಲಸ ಮಾಡಿಕೊಟ್ಟು ಈ ಹುದ್ದೆಗೆ ಅವರು ಏರಿದ್ದಾರೆ ಎಂಬ ಬಗ್ಗೆಯೂ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಆ ಪಕ್ಷ ಬೆಂಬಲಿತ ಸಂಸ್ಥೆಗಳು ಅಕ್ರಮವಾಗಿ ಪಡೆದಿರುವ ನಿವೇಶನವನ್ನು ತಕ್ಷಣ ವಾಪಸ್ ಮಾಡುವಂತೆ ನಾವು ಹೇಳುವುದಿಲ್ಲ. ಏಕೆಂದರೆ, ನಾವು ಲಹರ್ ಸಿಂಗ್ ರೀತಿ ಕೆಳಮಟ್ಟದ ರಾಜಕಾರಣ ಮಾಡುವುದಿಲ್ಲ. ರಾಹುಲ್‌ ಖರ್ಗೆ ಅವರ ಟ್ರಸ್ಟ್‌ಗೆ ನಿವೇಶನ ನೀಡಿರುವುದನ್ನು ಪ್ರಶ್ನಿಸುವ ಮೂಲಕ ಲಹರ್‌ ಸಿಂಗ್ ಅವರು, ದಲಿತ ವಿರೋಧಿ ಮನಸ್ಥಿತಿ ಹೊಂದಿರುವ ಬಿಜೆಪಿಯ ಗುಣವನ್ನು ಹೊರ ಹಾಕಿದ್ದಾರೆ’ ಎಂದೂ ಟೀಕಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.