ಬೆಂಗಳೂರು: ಉಕ್ರೇನ್ - ರಷ್ಯಾ ಯುದ್ಧದ ಪರಿಣಾಮದಿಂದಾಗಿ ಭಾರತಕ್ಕೆ ಮರಳಿದ್ದ ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯ ಕಾಪಾಡಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ವಿದ್ಯಾರ್ಥಿಗಳು ಏನೇ ಸಹಾಯ ಕೇಳಿದರೂ ಮಾಡಲೂ ಸಿದ್ಧ ಎಂದಿರುವ ಅವರು, ಸಾಮಾಜಿಕ ಮಾಧ್ಯಮದಲ್ಲಿ ನೇರ ಸಂದೇಶ ರವಾನಿಸಲು ವಿದ್ಯಾರ್ಥಿಗಳನ್ನು ಕೋರಿದ್ದಾರೆ.
ಉಕ್ರೇನ್–ರಷ್ಯಾ ಯುದ್ಧ ಆರಂಭವಾದ ಬಳಿಕ ಭಾರತಕ್ಕೆ ಮರಳಿದ್ದ ನಿರಾಶ್ರಿತ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಶಿಕ್ಷಣ ಮುಂದುವರಿಸಲು ಅವಕಾಶ ಕಲ್ಪಿಸದ ಕಾರಣ ನಿರಾಶರಾದ ವಿದ್ಯಾರ್ಥಿಗಳು ಇದೀಗ ಮತ್ತೆ ವಿದೇಶಗಳತ್ತ ಮುಖ ಮಾಡತೊಡಗಿದ್ದಾರೆ. ಇದರಿಂದ ಪೋಷಕರಿಗೂ ದೊಡ್ಡ ಆರ್ಥಿಕ ಹೊರೆ ಬೀಳುತ್ತಿದೆ. ಈ ಬಗ್ಗೆ ‘ಪ್ರಜಾವಾಣಿ’ಯು ಮಂಗಳವಾರದ ತನ್ನ ಸಂಚಿಕೆಯ ಮುಖಪುಟದಲ್ಲಿ ‘ವಿದೇಶಗಳತ್ತ ಉಕ್ರೇನ್ ಸಂತ್ರಸ್ತ ವೈದ್ಯ ವಿದ್ಯಾರ್ಥಿಗಳು’ ಎಂಬ ಶೀರ್ಷಿಕೆಯಡಿಯಲ್ಲಿ ವಿಶೇಷ ವರದಿ ಪ್ರಕಟಿಸಿದೆ.
ಇದೇ ವರದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಡಿ.ಕೆ ಶಿವಕುಮಾರ್, ಸಹಾಯದ ಭರವಸೆ ನೀಡಿದ್ದಾರೆ. ಇದೇ ವೇಳೆ ವಿದ್ಯಾರ್ಥಿಗಳ ನೆರವಿಗೆ ನಿಲ್ಲದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ರಷ್ಯಾ-ಉಕ್ರೇನ್ ನಡುವಿನ ಯುದ್ಧದ ಸಂದರ್ಭದಲ್ಲಿ ರಾಜ್ಯಕ್ಕೆ ಮರಳಿದ್ದ ಸಂತ್ರಸ್ತ ವೈದ್ಯಕೀಯ ವಿದ್ಯಾರ್ಥಿಗಳು ತಾಯ್ನಾಡಿನಲ್ಲಿ ಶಿಕ್ಷಣ ಮುಂದುವರಿಸಲು ಸರ್ಕಾರ ನೆರವಾಗದೇ ಇರುವುದು ದುಃಖಕರ ವಿಚಾರ. ಅತಂತ್ರಗೊಂಡಿರುವ ರಾಜ್ಯದ 700ಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯ ಕಾಪಾಡಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ‘ ಎಂದು ಅವರು ತಿಳಿಸಿದ್ದಾರೆ.
‘ಯುದ್ಧ ಸಂತ್ರಸ್ತ ವಿದ್ಯಾರ್ಥಿಗಳು ರಾಜ್ಯದಲ್ಲೇ ಶಿಕ್ಷಣ ಮುಂದುವರಿಸಲು ಪರಿಹಾರವೇನು? ನನ್ನಿಂದ ಹಾಗೂ ಪಕ್ಷದಿಂದ ಏನೇ ಸಹಾಯ ಕೇಳಿದರೂ ಮಾಡಲು ಖಂಡಿತ ಸಿದ್ಧ. ವಿದ್ಯಾರ್ಥಿಗಳು ಈ ಕೂಡಲೇ ನನ್ನ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ನೇರ ಸಂದೇಶ (DM) ಕಳಿಸುವ ಮೂಲಕ ಸಂಪರ್ಕಿಸಬಹುದು. ವಿದ್ಯಾರ್ಥಿಗಳ ಬೆನ್ನಿಗೆ ಖಂಡಿತ ನಾವು ನಿಲ್ಲುತ್ತೇವೆ’ ಎಂದು ಅವರು ಭರವಸೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.