ADVERTISEMENT

ಅಶೋಕ, ಛಲವಾದಿ ತಮ್ಮ ವಿರುದ್ಧದ ಆರೋಪಗಳಿಗೆ ಉತ್ತರಿಸುತ್ತಾರಾ?: ರಮೇಶಬಾಬು ಪ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2024, 15:39 IST
Last Updated 13 ಅಕ್ಟೋಬರ್ 2024, 15:39 IST
ರಮೇಶ್‌ಬಾಬು
ರಮೇಶ್‌ಬಾಬು   

ಬೆಂಗಳೂರು: ‘ಕಾಂಗ್ರೆಸ್‌ ನಾಯಕರ ವಿರುದ್ಧ ಸದಾ ಆರೋಪ ಮಾಡುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಮತ್ತು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಮ್ಮ ವಿರುದ್ಧದ ಆರೋಪಗಳಿಗೆ ಉತ್ತರ ನೀಡುತ್ತಾರಾ’ ಎಂದು ಕೆಪಿಸಿಸಿ ಮಾಧ್ಯಮ ಘಟಕದ ಅಧ್ಯಕ್ಷ ರಮೇಶ್ ಬಾಬು ಪ್ರಶ್ನಿಸಿದ್ದಾರೆ. 

ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಬಾಬು ಅವರು, ‘ರಾಜ್ಯ ಕಂಡ ಅತ್ಯಂತ ವಿಫಲ ವಿರೋಧ ಪಕ್ಷಗಳ ನಾಯಕರಿವರು. ಇವರನ್ನು ಬದಲಿಸಿ, ರಾಜ್ಯಕ್ಕೆ ಒಳಿತು ಮಾಡಿ’ ಎಂದು ಬಿಜೆಪಿಯನ್ನು ಕೋರಿದ್ದಾರೆ. ಇಬ್ಬರು ನಾಯಕರಿಗೂ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.

ಆರ್.ಅಶೋಕಗೆ ಪ್ರಶ್ನೆ: 1978ರಲ್ಲಿ ಬಿಡಿಎಗೆ ನೀಡಲಾದ ಜಮೀನನ್ನು ಅಕ್ರಮವಾಗಿ ಪಡೆದುಕೊಂಡು, ಲೋಕಾಯುಕ್ತದಲ್ಲಿ ಪ್ರಕರಣ ದಾಖಲು ಆದ ನಂತರ ಕಾನೂನು ಕುಣಿಕೆ ತಪ್ಪಿಸಿಕೊಳ್ಳಲು ವಾಪಸ್ಸು ದಾನ ಮಾಡಿದ್ದು ಸುಳ್ಳೇ?

ADVERTISEMENT

ಬೆಂಗಳೂರು ದಕ್ಷಿಣ ತಾಲ್ಲೂಕಿನ, ಉತ್ತರಹಳ್ಳಿ ಹೋಬಳಿಯ ಬಿ.ಎಂ ಕಾವಲು ಗ್ರಾಮಕ್ಕೆ ಸೇರಿದ ಸುಮಾರು 2500 ಎಕರೆ ಪ್ರದೇಶವನ್ನು ತಾವು ಶಾಸಕರಾಗಿ ಕಾನೂನು ಬಾಹಿರವಾಗಿ ಹಂಚಿಕೆ ಮಾಡಿರುವುದನ್ನು ಒಪ್ಪಿಕೊಳ್ಳುವಿರಾ? 

ಸರ್ಕಾರದ ಆಸ್ತಿಯನ್ನು ನಿಮ್ಮ ಒಡೆತನದ ಶಿಕ್ಷಣ ಸಂಸ್ಥೆಗೆ ಕಾನೂನುಬಾಹಿರವಾಗಿ ಮಂಜೂರು ಮಾಡಿಸಿಕೊಂಡಿದ್ದನ್ನು ತನಿಖೆಗೆ ಒಳಪಡಿಸಲು ಸಿದ್ಧರಿರುವಿರಾ?

ಛಲವಾದಿ ನಾರಾಯಣಸ್ವಾಮಿಗೆ ಪ್ರಶ್ನೆ: ರಾಜಕೀಯಕ್ಕೆ ಬಂದಾಗಿನಿಂದ ಈವರೆಗೆ ಸರ್ಕಾರದಿಂದ ಎಷ್ಟು ವಸತಿ ನಿವೇಶನ, ಕೈಗಾರಿಕಾ ನಿವೇಶನ ಮತ್ತು ನಾಗರಿಕ ಸೌಲಭ್ಯದ (ಸಿ.ಎ) ನಿವೇಶಗಳನ್ನು ಪಡೆದುಕೊಂಡಿರುವಿರಿ?

ಕರ್ನಾಟಕ ಗೃಹ ಮಂಡಳಿ ನಿರ್ದೇಶಕರಾಗಿದ್ದಾಗ, ನಿಯಮ ಬಾಹಿರವಾಗಿ ನೀವೇ ಸಿ.ಎ ನಿವೇಶನ ಪಡೆದಿರುವುದು ಸುಳ್ಳೇ? ನೀವು ಪಡೆದುಕೊಂಡಿರುವ ಸಿ.ಎ ನಿವೇಶನದಲ್ಲಿ ಬಿರಿಯಾನಿ ಸೆಂಟರ್ ನಡೆಸುತ್ತಿರುವುದು ಸುಳ್ಳೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.