ADVERTISEMENT

ಭದ್ರತಾ ವೈಫಲ್ಯ: ಮೋದಿ ಮೌನ– ಕಾಂಗ್ರೆಸ್‌ ಟೀಕೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2023, 15:52 IST
Last Updated 19 ಡಿಸೆಂಬರ್ 2023, 15:52 IST
<div class="paragraphs"><p>ಕಾಂಗ್ರೆಸ್‌</p></div>

ಕಾಂಗ್ರೆಸ್‌

   

ಬೆಂಗಳೂರು: ‘ಸಂಸತ್ ಸದಸ್ಯರಿಗೆ ಭದ್ರತೆ ನೀಡಲಾಗದ ಕೇಂದ್ರ ಸರ್ಕಾರ, ಸಂಸದರನ್ನು ಸಂಸತ್ತಿನಿಂದ ಓಡಿಸುವ ಕೆಲಸ ಮಾಡುತ್ತಿದೆ. ಮೋದಿ ಇದ್ದರೆ ಮಾತ್ರ ಭದ್ರತೆ ಎಂದು ಹೇಳುತ್ತಿದ್ದರು. ಆದರೆ, ಸಂಸ‌ತ್‌ನ ಭದ್ರತಾ ವೈಫಲ್ಯದ ಬಗ್ಗೆ ಅವರೇ ಮೌನವಾಗಿದ್ದಾರೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್. ಚಂದ್ರಪ್ಪ ಹೇಳಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿರುದ್ಯೋಗದಿಂದ ಬೇಸತ್ತು ಬಿಜೆಪಿ ಬೆಂಬಗಲಿಗರೇ ಸಂಸತ್ ಮೇಲೆ ದಾಳಿ ಮಾಡಿದ್ದಾರೆ. ಸಣ್ಣ ಘಟನೆಯಾದರೂ ಮಾಧ್ಯಮಗಳ ಮುಂದೆ ಬರುತ್ತಿದ್ದ ಶೋಭಾ ಕರಂದ್ಲಾಜೆ, ಪ್ರತಾಪ ಸಿಂಹ, ಸಿ.ಟಿ. ರವಿ ಈಗ ಎಲ್ಲಿದ್ದಾರೆ’ ಎಂದು ಪ್ರಶ್ನಿಸಿದರು.

ADVERTISEMENT

‘ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡಲಾಗುತ್ತಿದೆ. ಸ್ವಾಯತ್ತ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಏಕ ಚಕ್ರಾಧಿಪತ್ಯ ನಡೆಸುತ್ತಿದೆ. ಸಂಸತ್ತನ್ನು ನಿಷ್ಕ್ರಿಯ ಮಾಡಿ ಜನಪ್ರತಿನಿಧಿಗಳ ಪ್ರಶ್ನೆ ಹತ್ತಿಕ್ಕುವ ಕೆಲಸ ಆಗುತ್ತಿದೆ’ ಎಂದು ಕಾಂಗ್ರೆಸ್‌ ಮುಖಂಡ ಎಚ್.ಎಂ. ರೇವಣ್ಣ ಹೇಳಿದರು.

‘ಸಂಸತ್ತಿನಲ್ಲಿ ನಡೆದ ದಾಳಿಯ ಹೊಣೆಯನ್ನು ಪ್ರಧಾನ ಮಂತ್ರಿ, ಗೃಹಸಚಿವರು ಮತ್ತು ಸ್ಪೀಕರ್ ಹೊರಬೇಕಾಗುತ್ತದೆ. ಇದಕ್ಕೆ ಮೂಲವಾಗಿರುವ ಮೈಸೂರಿನ ಸಂಸದ ಪ್ರತಾಪ ಸಿಂಹ ಯಾವುದೇ ಹೇಳಿಕೆ ನೀಡದೆ ತಲೆಮರೆಸಿಕೊಂಡಿದ್ದಾರೆ’ ಎಂದು ಮತ್ತೊಬ್ಬ ಮುಖಂಡ ವಿ.ಎಸ್. ಉಗ್ರಪ್ಪ ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.