ADVERTISEMENT

KPSC | ಏಳು ತಿಂಗಳು; ಒಂದೇ ಪರೀಕ್ಷೆ

ಕೆಪಿಎಸ್‌ಸಿ: 11 ತಿಂಗಳಲ್ಲಿ 2,243 ಹುದ್ದೆಗಳ ಭರ್ತಿಗೆ 19 ಅಧಿಸೂಚನೆ

ರಾಜೇಶ್ ರೈ ಚಟ್ಲ
Published 22 ಜುಲೈ 2024, 0:10 IST
Last Updated 22 ಜುಲೈ 2024, 0:10 IST
KPSC
KPSC   

ಬೆಂಗಳೂರು: ಪ್ರಸಕ್ತ ಸಾಲಿನ ಏಳು ತಿಂಗಳ ಅವಧಿಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ವಾಣಿಜ್ಯ ತೆರಿಗೆಗಳ ಪರಿವೀಕ್ಷಕರು (ಸಿಟಿಐ) 245 ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿರುವುದು ಹೊರತುಪಡಿಸಿದರೆ, ನೇಮಕಾತಿ ಅಧಿಸೂಚನೆ ಹೊರಡಿಸಿರುವ ಇತರ ಯಾವುದೇ ಇಲಾಖೆಗಳ ಖಾಲಿ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಪರೀಕ್ಷೆ ನಡೆಸಿಲ್ಲ.

ಅಧಿಸೂಚನೆ ಹೊರಡಿಸಿ ವರ್ಷ ಕಳೆದರೂ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳುತ್ತಿಲ್ಲ. ಕೆಪಿಎಸ್‌ಸಿಯ ಈ ವಿಳಂಬ ನೀತಿ ಸರ್ಕಾರಿ ಹುದ್ದೆಯ ನಿರೀಕ್ಷೆಯಲ್ಲಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಲಕ್ಷಾಂತರ ಉದ್ಯೋಗ ಆಕಾಂಕ್ಷಿಗಳನ್ನು ತೀವ್ರ ಹತಾಶರನ್ನಾಗಿ ಮಾಡಿದೆ.

2023ರ ಆಗಸ್ಟ್‌ನಿಂದ ಈವರೆಗೆ (11 ತಿಂಗಳು) ಅವಧಿಯಲ್ಲಿ ಸಿಟಿಐ, ಗೆಜೆಟೆಡ್‌ ಪ್ರೊಬೇಷನರಿ 384 ಹುದ್ದೆಗಳೂ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ನಾನಾ ವೃಂದಗಳ ಒಟ್ಟು 2,243 ಹುದ್ದೆಗಳ ನೇಮಕಾತಿಗೆ 19 ಅಧಿಸೂಚನೆಗಳನ್ನು ಕೆಪಿಎಸ್‌ಸಿ ಹೊರಡಿಸಿದೆ. ಈ ಪೈಕಿ, ಸಿಟಿಐ ಹುದ್ದೆಗಳಿಗೆ ಮಾತ್ರ ಲಿಖಿತ ಪರೀಕ್ಷೆ ನಡೆಸಿದೆ. ಉಳಿದಂತೆ, 1,070 ಹುದ್ದೆಗಳಿಗೆ ಲಿಖಿತ ಪರೀಕ್ಷೆಗೆ ದಿನಾಂಕ ನಿಗದಿಪಡಿಸಿದೆ. 928 ಹುದ್ದೆಗಳಿಗೆ ಇನ್ನಷ್ಟೆ ದಿನಾಂಕ ನಿಗದಿಪಡಿಸಬೇಕಿದೆ.

ADVERTISEMENT

ಸಿಟಿಐ ಉಳಿಕೆ ವೃಂದದ 230 ಹುದ್ದೆಗಳಿಗೆ 2023ರ ಆಗಸ್ಟ್ 18 ಹಾಗೂ ಹೈಕ ವೃಂದದ 15 ಹುದ್ದೆಗಳಿಗೆ ಆಗಸ್ಟ್‌ 30ರಂದು ಅಧಿಸೂಚನೆ ಹೊರಡಿಸಿದ್ದ ಕೆಪಿಎಸ್‌ಸಿ, ಆರು ತಿಂಗಳ ನಂತರ (ಜ. 20 ಮತ್ತು 21) ಬಹು ಆಯ್ಕೆಯ ಪರೀಕ್ಷೆ ನಡೆಸಿತ್ತು. ಆದರೆ, ಏಳು ತಿಂಗಳು ಕಳೆದರೂ ಫಲಿತಾಂಶ ಪ್ರಕಟಿಸಿಲ್ಲ. ಇನ್ನು ಕೈಗಾರಿಕಾ ಮತ್ತು ಉದ್ಯೋಗ ಇಲಾಖೆಯ ಸಹಾಯಕ ಉದ್ಯೋಗ ಅಧಿಕಾರಿ ಹುದ್ದೆಗೆ ಕಳೆದ ವರ್ಷ ಸೆ. 6ರಂದು ಅಧಿಸೂಚನೆ ಹೊರಡಿಸಿದ್ದರೂ, ಲಿಖಿತ  ಪರೀಕ್ಷೆಗೆ ದಿನಾಂಕವನ್ನೇ ನಿಗದಿಪಡಿಸಿಲ್ಲ. ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯಲ್ಲಿ ಭೂಮಾಪಕರು ಒಟ್ಟು 364 (ಹೈಕ 100) ಹುದ್ದೆಗಳ ನೇಮಕಾತಿಗೆ ಜುಲೈ ತಿಂಗಳಲ್ಲಿ ಪರೀಕ್ಷೆ ನಡೆಸಲು ದಿನ ನಿಗಡಿಸಿಪಡಿಸಿದ್ದ ಕೆಪಿಎಸ್‌ಸಿ, ಬಳಿಕ ಮುಂದೂಡಿದೆ. ಪರಿಷ್ಕೃತ ದಿನಾಂಕವನ್ನು ನಿಗದಿಪಡಿಸಿಲ್ಲ. 

ಬಿಬಿಎಂಪಿ ಸಹಾಯಕ ಎಂಜಿನಿಯರ್‌, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸಹಾಯಕ ನಿರ್ದೇಶಕರು, ಜಲ ಸಂಪನ್ಮೂಲ ಇಲಾಖೆಯ ಸಹಾಯಕ ಎಂಜಿನಿಯರ್‌ ಸೇರಿದಂತೆ ಹಲವು ಇಲಾಖೆಗಳ ಹುದ್ದೆಗಳ ನೇಮಕಾತಿಗೆ ಕಡ್ಡಾಯ ಕನ್ನಡ ಮತ್ತು ಸಾಮಾನ್ಯ ಪರೀಕ್ಷೆಯ ದಿನಾಂಕ ನಿಗದಿಪಡಿಸಿರುವ ಕೆಪಿಎಸ್‌ಸಿ, ನಿರ್ದಿಷ್ಟ ಪತ್ರಿಕೆಯ ಪರೀಕ್ಷೆಯ ದಿನಾಂಕ ನಿರ್ಧರಿಸಿಲ್ಲ.  

‘ನಿಗದಿಪಡಿಸಿದ ದಿನಾಂಕದಂದೇ ಕೆಪಿಎಸ್‌ಸಿ ಪರೀಕ್ಷೆ ನಡೆಸುತ್ತದೆ. ಈಗಾಗಲೇ ನಡೆಸಿದ ಪರೀಕ್ಷೆಯ ಫಲಿತಾಂಶ ಪ್ರಕಟಿಸಿ, ಆಯ್ಕೆ ಪಟ್ಟಿ ಬಿಡುಗಡೆ ಮಾಡುತ್ತದೆ ಎಂಬ ಯಾವ ನಂಬಿಕೆಯೂ ಇಲ್ಲ. ವಯೋಮಿತಿ ಸಡಿಲಿಸಿ ಅವಕಾಶ ನೀಡಿದರೂ, ಪರೀಕ್ಷೆ ಬರೆದು, ಫಲಿತಾಂಶ ಬಂದು, ಪ್ರಕಟಗೊಂಡ ಆಯ್ಕೆ ಪಟ್ಟಿ ಕೋರ್ಟ್‌ಗಳ ಮೆಟ್ಟಿಲೇರಿ ಪರಿಷ್ಕೃತಗೊಂಡು ಬಿಡುಗಡೆಯಾಗುವ ವೇಳೆಗೆ ಅಭ್ಯರ್ಥಿಗೆ ನಿವೃತ್ತಿ ವಯಸ್ಸು ಸಮೀಪಿಸುತ್ತಿದೆ’ ಎಂದು ಸರ್ಕಾರಿ ಹುದ್ದೆ ನಿರೀಕ್ಷೆಯಲ್ಲಿ ಕಳೆದ 10 ವರ್ಷಗಳಿಂದ ಕಾಯುತ್ತಿರುವ ವಿಜಯಪುರದ ಮಹಾಂತೇಶ ಹಿರೇಮಠ ತಿಳಿಸಿದರು.

ನೇಮಕಾತಿ ವಿಳಂಬಕ್ಕೆ ಕೆಪಿಎಸ್‌ಸಿ ಕಾರಣಗಳೇನು?

* ಇಲಾಖೆಗಳಿಂದ ಬರುವ ಪ್ರಸ್ತಾವಗಳಲ್ಲಿ ನ್ಯೂನತೆ

* ಪ್ರಸ್ತಾವಗಳಲ್ಲಿರುವ ನ್ಯೂನತೆಗಳಿಗೆ ಸ್ಪಷ್ಟೀಕರಣ, ಮಾಹಿತಿ ನೀಡಲು ಇಲಾಖೆಗಳು ಕಾಲಾವಕಾಶ ತೆಗೆದುಕೊಳ್ಳುತ್ತಿರುವುದು 

* ಕೆಇಎ ಸೇರಿದಂತೆ ಇತರ ಪ್ರಾಧಿಕಾರಗಳೂ ಶನಿವಾರ, ಭಾನುವಾರದಂದು ಪರೀಕ್ಷೆಗಳನ್ನು ನಡೆಸುತ್ತಿರುವುರಿಂದ, ಆ ದಿನಗಳನ್ನು ಹೊರತುಪಡಿಸಿ ಪರೀಕ್ಷೆಗೆ ದಿನಾಂಕ ನಿಗದಿಪಡಿಸಬೇಕಿದೆ.

* ಹಬ್ಬ ಹರಿದಿನ, ಜಯಂತಿ, ರಾಷ್ಟ್ರೀಯ ದಿನಗಳನ್ನೂ ಹೊರತುಪಡಿಸಿಯೂ ದಿನಾಂಕ ನಿಗದಿಪಡಿಸಬೇಕಿದೆ

* ಆಯ್ಕೆಗೊಂಡ ಅಭ್ಯರ್ಥಿಗಳು ನಿಗದಿತ ಅವಧಿಯಲ್ಲಿ ಮೂಲ ದಾಖಲೆ ಸಲ್ಲಿಸದಿರುವುದು

* ಅಂಗವಿಕಲ ಅಭ್ಯರ್ಥಿಗಳ ವೈದ್ಯಕೀಯ ತಪಾಸಣೆ ವಿಳಂಬ

* ಎಲ್ಲ ನೇಮಕಾತಿ ಪ್ರಕ್ರಿಯೆಗಳಲ್ಲೂ ಅಭ್ಯರ್ಥಿಗಳು ಕೋರ್ಟ್ ಮೆಟ್ಟಿಲೇರುತ್ತಿರುವುದು

* ಸಿಬ್ಬಂದಿ ಕೊರತೆ

ಕೆಪಿಎಸ್‌ಸಿಯಲ್ಲೇ ಹುದ್ದೆ ಖಾಲಿ!

ಕೆಪಿಎಸ್‌ಸಿಗೆ ಒಟ್ಟು 380 ಹುದ್ದೆಗಳು ಮಂಜೂರಾಗಿದೆ. ಸಿಬ್ಬಂದಿಯ ವಯೋನಿವೃತ್ತಿ, ನಿಧನ, ಸ್ವಯಂ ನಿವೃತ್ತಿ, ಸೇವೆಯಿಂದ ಬಿಡುಗಡೆ ಮತ್ತಿತರ ಕಾರಣಗಳಿಂದ ಸದ್ಯ 210 ಹುದ್ದೆಗಳು ತೆರವಾಗಿವೆ. ತೆರವಾದ ಈ ಹುದ್ದೆಗಳ ಪೈಕಿ, 88 ಹುದ್ದೆಗಳಿಗೆ ಹೊರ ಗುತ್ತಿಗೆ ನೌಕರರನ್ನು ಭರ್ತಿ ಮಾಡಿಕೊಳ್ಳಲಾಗಿದೆ. ಇನ್ನೂ 122 ಹುದ್ದೆಗಳು ಖಾಲಿ ಇವೆ. ಅಲ್ಲದೆ, ಫೆಬ್ರುವರಿಯಿಂದ ಕೆಪಿಎಸ್‌ಸಿ ಕಾರ್ಯದರ್ಶಿ ಹುದ್ದೆ ವಹಿಸಿಕೊಂಡಿರುವ ಕೆ. ರಾಕೇಶ್ ಕುಮಾರ್‌ ಅವರು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ಹುದ್ದೆಯನ್ನೂ ನಿಭಾಯಿಸುತ್ತಿದ್ದಾರೆ. ಕಾಯಂ ಕಾರ್ಯದರ್ಶಿ ಇಲ್ಲದಿರುವುದು ಮತ್ತು ಸಿಬ್ಬಂದಿ ಕೊರತೆ ಕೂಡಾ ನೇಮಕಾತಿ ಪ್ರಕ್ರಿಯೆ ವಿಳಂಬವಾಗಲು ಕಾರಣ ಎಂದು ಕೆಪಿಎಸ್‌ಸಿ ಮೂಲಗಳು ಹೇಳಿವೆ.

ಕೆಎಎಸ್‌ ಪರೀಕ್ಷೆ ಮುಂದೂಡಲು ಆಗ್ರಹ

ಗೆಜೆಟೆಡ್‌ ಪ್ರೊಬೇಷನರಿ 384 ಹುದ್ದೆಗಳಿಗೆ ಆಗಸ್ಟ್‌ 25ರಂದು ಪೂರ್ವಭಾವಿ ಪರೀಕ್ಷೆ ನಡೆಸಲು ಕೆಪಿಎಸ್‌ಸಿ ನಿರ್ಧರಿಸಿದೆ. ಆದರೆ, ಅದೇ ದಿನ ವಿವಿಧ ಬ್ಯಾಂಕುಗಳಲ್ಲಿ ಖಾಲಿ ಇರುವ 6,128 ಗುಮಾಸ್ತ ಹುದ್ದೆಗಳಿಗೆ ಬ್ಯಾಂಕಿಂಗ್‌ ಸಿಬ್ಬಂದಿ ನೇಮಕಾತಿ ಸಂಸ್ಥೆಯು (ಐಬಿಪಿಎಸ್‌) ಪರೀಕ್ಷೆ ನಡೆಸಲಿದೆ. ಈ ಪೈಕಿ, 457 ಹುದ್ದೆಗಳು ಕರ್ನಾಟಕದಲ್ಲಿ ಖಾಲಿ ಇವೆ. ಕನ್ನಡದಲ್ಲಿಯೂ ಈ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಅದೇ ದಿನ ಯುಜಿಸಿ ನೆಟ್‌ ಪರೀಕ್ಷೆ ಕೂಡಾ ನಿಗದಿಯಾಗಿದೆ. ಯಾವ ಪರೀಕ್ಷೆಯನ್ನು ಬರೆಯಬೇಕೆಂಬ ಗೊಂದಲ ದಲ್ಲಿರುವ ಅಭ್ಯರ್ಥಿಗಳು, ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡಬೇಕೆಂದು ಆಗ್ರಹಿಸುತ್ತಿದ್ದಾರೆ.

ಅಭ್ಯರ್ಥಿಗಳ ಜೊತೆ ದನಿಗೂಡಿಸಿರುವ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶ್ರೇಯಸ್‌ ಎಂ. ಪಟೇಲ್‌, ಶಾಸಕ ವಿಠಲ ಎಸ್. ಹಲಗೇಕರ, ವಿಧಾನ ಪರಿಷತ್‌ ಸದಸ್ಯ ಡಾ. ಧನಂಜಯ ಸರ್ಜಿ ಅವರು ಪರೀಕ್ಷೆ ಮುಂದೂಡುವಂತೆ ಕೆಪಿಎಸ್‌ಸಿ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ವಿಧಾನ ಪರಿಷತ್‌ನಲ್ಲಿ ಶೂನ್ಯವೇಳೆ ಯಲ್ಲಿಯೂ ಸರ್ಜಿ ಈ ವಿಷಯ ಪ್ರಸ್ತಾಪಿಸಿದ್ದಾರೆ.

ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ ಆಗಸ್ಟ್ 25ರಂದು ಪೂರ್ವಭಾವಿ ಪರೀಕ್ಷೆ ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ. ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲ
ಕೆ. ರಾಕೇಶ್ ಕುಮಾರ್‌, ಕಾರ್ಯದರ್ಶಿ, ಕೆಪಿಎಸ್‌ಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.