ADVERTISEMENT

ಕೆಪಿಎಸ್‌ಸಿ ಪರೀಕ್ಷೆ ಎಡವಟ್ಟು: ಕಾರ್ಯದರ್ಶಿ ರಾಕೇಶ್‌ ಕುಮಾರ್ ವರ್ಗ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 16:01 IST
Last Updated 23 ಅಕ್ಟೋಬರ್ 2024, 16:01 IST
<div class="paragraphs"><p>ವರ್ಗಾವಣೆ</p></div>

ವರ್ಗಾವಣೆ

   

ಬೆಂಗಳೂರು: ಗೆಜೆಟೆಡ್‌ ಪ್ರೊಬೇಷನರಿ 384 ಹುದ್ದೆಗಳ ನೇಮಕಾತಿಗೆ ಆಗಸ್ಟ್‌ 27ರಂದು ನಡೆದ ಪೂರ್ವಭಾವಿ ಪರೀಕ್ಷೆಯ ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರಿಸಿದ ಪ್ರಶ್ನೆ– ಉತ್ತರಗಳಲ್ಲಿ ತಪ್ಪುಗಳು ಕಾಣಿಸಿಕೊಂಡ ಕಾರಣಕ್ಕೆ ಸುದ್ದಿಯಲ್ಲಿದ್ದ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಕಾರ್ಯದರ್ಶಿ ಕೆ. ರಾಕೇಶ್‌ ಕುಮಾರ್‌ ಅವರನ್ನು ಹೊಣೆಯಿಂದ ಮುಕ್ತಗೊಳಿಸಲಾಗಿದೆ.

ಸ್ಥಳ ನಿರೀಕ್ಷೆಯಲ್ಲಿದ್ದ ಐಎಎಸ್‌ ಅಧಿಕಾರಿ ರಮಣದೀಪ್‌ ಚೌಧರಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಾರ್ಯದರ್ಶಿಯಾಗಿ ನೇಮಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ. ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ಹುದ್ದೆಯ ಜೊತೆಗೆ ಕೆಪಿಎಸ್‌ಸಿ ಹೊಣೆಯನ್ನೂ ರಾಕೇಶ್‌ ಕುಮಾರ್‌ ಅವರಿಗೆ ನೀಡಲಾಗಿತ್ತು.

ADVERTISEMENT

ಅಲ್ಲದೆ, ಖಾಲಿ ಇದ್ದ ಕೆಪಿಎಸ್‌ಸಿ ಜಂಟಿ ಪರೀಕ್ಷಾ ನಿಯಂತ್ರಕ ಹುದ್ದೆಯನ್ನು ಲೋಖಂಡೆ ಸ್ನೇಹಲ್‌ ಸುಧಾಕರ್ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ. 

ಭಾಷಾಂತರ ಲೋಪದ ಕಾರಣಕ್ಕೆ ಆಗಸ್ಟ್‌ 27ರ ಪರೀಕ್ಷೆಯನ್ನು ರದ್ದುಪಡಿಸಿರುವ ಕೆಪಿಎಸ್‌ಸಿ, ಡಿ. 29ರಂದು ಮರು ಪರೀಕ್ಷೆ ನಡೆಸಲಿದೆ. ರದ್ದುಪಡಿಸಿದ ಪರೀಕ್ಷೆಗೆ ₹13.40 ಕೋಟಿ ವೆಚ್ಚವಾಗಿದೆ ಎಂದು ಕೆಪಿಎಸ್‌ಸಿ ಸಭೆಗೆ ಕಾರ್ಯದರ್ಶಿ ಮಾಹಿತಿ ನೀಡಿದ್ದರು. ಈ ನಷ್ಟಕ್ಕೆ ಕಾರಣರಾದ ಯಾವುದೇ ಅಧಿಕಾರಿ, ನೌಕರರ ಮೇಲೆ ಕೆಪಿಎಸ್‌ಸಿಯಾಗಲಿ ರಾಜ್ಯ ಸರ್ಕಾರವಾಗಲಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಅ. 21ರ ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು.

ಉಳಿದಂತೆ ವರ್ಗಾವಣೆ: ಮನೋಜ್‌ ಜೈನ್‌–  ಮುಖ್ಯ ಮೌಲ್ಯಮಾಪನ ಅಧಿಕಾರಿ, ಕೆಎಂಇಎ (ಹೆಚ್ಚವರಿ ಹೊಣೆ), ಸುಷ್ಮಾ ಗೋಡ್ಬೋಲೆ– ಕಾರ್ಯದರ್ಶಿ, ಕರ್ನಾಟಕ ಮಾಹಿತಿ ಆಯೋಗ. ನಿತೇಶ್‌ ಪಾಟೀಲ್– ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಹೆಚ್ಚವರಿ ಹೊಣೆ). ಎಚ್‌. ಬಸವರಾಜೇಂದ್ರ– ಅಧ್ಯಕ್ಷ, ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.