ADVERTISEMENT

ಗೆಜೆಟೆಡ್‌ ಪ್ರೊಬೇಷನರಿ: 2017–18ನೇ ಸಾಲಿನ ಅಭ್ಯರ್ಥಿಗಳಿಗಿಲ್ಲ ವಯೋಮಿತಿ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 16:06 IST
Last Updated 21 ಜೂನ್ 2024, 16:06 IST
   

ಬೆಂಗಳೂರು: 2017–18ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಗ್ರೂಪ್‌ ‘ಎ’ ಮತ್ತು ಗ್ರೂಪ್‌ ‘ಬಿ’ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಿದ್ದ ಎಲ್ಲ ಅಭ್ಯರ್ಥಿಗಳಿಗೂ ಇದೇ ಫೆಬ್ರುವರಿಯಲ್ಲಿ ಅಧಿಸೂಚನೆ ಹೊರಡಿಸಿದ್ದ 384 ಹುದ್ದೆಗಳ ನೇಮಕಾತಿಗೆ ವಯೋಮಿತಿಯ ನಿರ್ಬಂಧವಿಲ್ಲದೆ ಅರ್ಜಿ ಸಲ್ಲಿಸಲು ಅವಕಾಶ ನೀಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.

ಕೋವಿಡ್ ಮತ್ತು ಇತರ ಕಾರಣಗಳಿಂದ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ 2021ನೇ ಸಾಲಿನಿಂದ ಪರೀಕ್ಷೆಗಳನ್ನು ನಡೆಸಿಲ್ಲ. ಹೀಗಾಗಿ, ನೇಮಕಾತಿಗೆ ನಿಗದಿಪಡಿಸಿರುವ ಗರಿಷ್ಠ ವಯೋಮಿತಿ ಮೀರಿ ಉದ್ಯೋಗ ವಂಚಿತರಾಗುವುದರಿಂದ, ವಯೋಮಿತಿ ಸಡಿಲಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ಹುದ್ದೆ ಆಕಾಂಕ್ಷಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.

ಈ ಕುರಿತು ಸಂಪುಟ ಸಭೆಯ ತೀರ್ಮಾನದಂತೆ, ಅರ್ಹ ಎಲ್ಲ ಅಭ್ಯರ್ಥಿಗಳಿಗೆ ಮೂರು ವರ್ಷ ವಯೋಮಿತಿ ಸಡಿಲಿಸಿ ಸಿಬ್ಬಂದಿ ಮತ್ತು ಆಢಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿತ್ತು. ಆದರೆ, ಈ ಸಡಿಲಿಕೆ ಕೆಲವರಿಗಷ್ಟೇ ಅನುಕೂಲವಾಗಿದೆ. ಬಹುತೇಕರು ವಯೋಮಿತಿ ದಾಟಿದ್ದಾರೆ ಎಂದು ಹುದ್ದೆ ಆಕಾಂಕ್ಷಿಗಳು ಮುಖ್ಯಮಂತ್ರಿಗೆ ಮತ್ತೆ ಮನವಿ ಮಾಡಿದ್ದರು.

ADVERTISEMENT

ವಯೋಮಿತಿ ಸಡಿಲಿಕೆ ಅವಕಾಶ ಒಂದು ಬಾರಿಗೆ ಮಾತ್ರ ಸೀಮಿತವಾಗಿದ್ದು, 2017–18ನೇ ಸಾಲಿನ ನೇಮಕಾತಿಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ ಈ ಬಾರಿ ಅರ್ಜಿ ಸಲ್ಲಿಸಲು ಹೊಸದಾಗಿ 15 ದಿನಗಳ ಅವಕಾಶ ನೀಡುವಂತೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.