ನವದೆಹಲಿ: 2021ರಲ್ಲಿ ಪ್ರಕಟಿಸಿದ್ದ ಕಿರಿಯ ತರಬೇತಿ ಅಧಿಕಾರಿಗಳ(ಜೆಟಿಒ) ಆಯ್ಕೆ ಪಟ್ಟಿಯನ್ನು ಪರಿಷ್ಕರಿಸುವಂತೆ ಕರ್ನಾಟಕ ಲೋಕ ಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ನಿರ್ದೇಶನ ನೀಡಿದ್ದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನು ಒಳಗೊಂಡ ಪೀಠವು ಈ ಸಂಬಂಧ ಕರ್ನಾಟಕ ಸರ್ಕಾರ ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿದೆ.
ಚೇತನ್ ಬೋಗರ್ ಮತ್ತು ಹಿರಿಯ ವಕೀಲ ಸಂಜಯ್ ಎಂ.ನುಲಿ ಅವರ ನೇತೃತ್ವದಲ್ಲಿ 44 ಮಂದಿ 2024ರ ಮಾ.20 ಮತ್ತು ಜೂನ್ 21ರ ಹೈಕೋರ್ಟ್ ಆದೇಶದ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಪತ್ರಿವಾದಿಗಳ ಪರ ಹಾಜರಿದ್ದ ಹಿರಿಯ ವಕೀಲ ಪಿ.ವಿಶ್ವನಾಥ ಶೆಟ್ಟಿ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಗೆ ವಿರೋಧ ವ್ಯಕ್ತಪಡಿಸಿದರು.
‘ಅರ್ಹತೆ ಆಧಾರದ ಮೇಲೆ ನಮಗೆ ನೇಮಕಾತಿ ಆದೇಶ ನೀಡಲಾಗಿದ್ದು, ಒಂದೂವರೆ ವರ್ಷದಿಂದ ಸೇವೆ ಸಲ್ಲಿಸಿದ್ದೇವೆ’ ಎಂದು ಪ್ರತಿವಾದಿಗಳು ವಾದ ಮಂಡಿಸಿದರು.
ಮೂಲ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟು ನಮಗೆ ನೇಮಕಾತಿ ಆದೇಶ ನೀಡಲಾಗಿದೆ. ಆದರೆ ಈಗ ಅರ್ಜಿ ಕುರಿತು ನೀಡಿರುವ ಮಧ್ಯಂತರ ಆದೇಶದಿಂದಾಗಿ ನಾವು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದೇವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
2018ರಲ್ಲಿ ಹೊರಡಿಸಲಾದ ನೇಮಕಾತಿ ಅಧಿಸೂಚನೆ ಅನ್ವಯ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು. ಪ್ರಕ್ರಿಯೆಗಳು ಪೂರ್ಣಗೊಂಡ ನಂತರ 2021ರ ಜುಲೈ 23ರಂದು ಕೆಪಿಎಸ್‌ಸಿ 1,367 ಅಭ್ಯರ್ಥಿಗಳನ್ನು ಒಳಗೊಂಡ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿತ್ತು.
2021ರ ಜನವರಿ 20ರಿಂದ 2022ರ ಮೇ 25ರ ಒಳಗಾಗಿ 945 ಅಭ್ಯರ್ಥಿಗಳನ್ನು ಒಳಗೊಂಡ ಅಂತಿಮ ಪಟ್ಟಿ ಬಿಡುಗಡೆ ಮಾಡಿತ್ತು. 2022ರ ಸೆಪ್ಟೆಂಬರ್ 9ರಿಂದ 2022ರ ನವೆಂಬರ್ 17ರವರೆಗೆ 399 ಮಂದಿಗೆ ನೇಮಕಾತಿ ಪತ್ರ ನೀಡಲಾಗಿದೆ. ಇನ್ನೂ 546 ಮಂದಿ ನೇಮಕಾತಿ ಪತ್ರಕ್ಕೆ ಕಾಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.