ADVERTISEMENT

384 KAS ಹುದ್ದೆಗಳಿಗೆ ಶೀಘ್ರ ಅಧಿಸೂಚನೆ:ಶೇ 50 KPSC ಸದಸ್ಯರ ಹಾಜರಾತಿ ಸಭೆ ಅಸ್ತು

ಶೇ 50 ಸದಸ್ಯರ ಹಾಜರಾತಿಯಲ್ಲಿ ಕೆಪಿಎಸ್‌ಸಿ ಸಭೆ * ಅಧ್ಯಕ್ಷ, ಐವರು ಸದಸ್ಯರು ಗೈರು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2024, 3:28 IST
Last Updated 7 ಫೆಬ್ರುವರಿ 2024, 3:28 IST
<div class="paragraphs"><p>ಉದ್ಯೋಗ ಸೌಧ( ಸಾಂದರ್ಭಿಕ ಚಿತ್ರ)</p></div>

ಉದ್ಯೋಗ ಸೌಧ( ಸಾಂದರ್ಭಿಕ ಚಿತ್ರ)

   

ಬೆಂಗಳೂರು: ಅಧ್ಯಕ್ಷರು ಮತ್ತು ಐವರು ಸದಸ್ಯರ ಅನುಪಸ್ಥಿತಿಯಲ್ಲಿ ಕೆಪಿಎಸ್‌ಸಿ ಸಭೆ ಮಂಗಳವಾರ (ಫೆ. 6) ಮತ್ತೊಮ್ಮೆ ನಡೆದಿದೆ. ಈ ಸಭೆಯಲ್ಲಿ ಗೆಜೆಟೆಡ್‌ ಪ್ರೊಬೇಷನರಿ 384 ಹುದ್ದೆಗಳು ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ತಕ್ಷಣವೇ ಅಧಿಸೂಚನೆ ಹೊರಡಿಸಲು ತೀರ್ಮಾನಿಸಲಾಗಿದೆ.

‘ಅಧ್ಯಕ್ಷ ಶಿವಶಂಕರಪ್ಪ ಎಸ್‌. ಸಾಹುಕಾರ್‌ ಅವರ ಬರುವಿಕೆಗಾಗಿ ಸುಮಾರು 2 ಗಂಟೆ ಕಾಯಲಾಗಿತ್ತು. ನಂತರ ಹಿರಿಯ ಸದಸ್ಯ ರೊನಾಲ್ಡ್‌ ಅನಿಲ್‌ ಫರ್ನಾಂಡಿಸ್‌ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸದಸ್ಯರಾದ ಆರ್‌. ಗಿರೀಶ್‌, ಡಾ. ಬಿ. ಪ್ರಭುದೇವ, ಡಾ. ಶಾಂತಾ ಹೊಸಮನಿ, ಶಕುಂತಲಾ ಎಸ್‌. ದುಂಡಿಗೌಡರ್‌ ಮತ್ತು ಕಾರ್ಯದರ್ಶಿ ಕೆ.ಎಸ್‌. ಲತಾಕುಮಾರಿ ಇದ್ದರು’ ಎಂದು ಕೆಪಿಎಸ್‌ಸಿ ಮೂಲಗಳು ತಿಳಿಸಿವೆ.

ADVERTISEMENT

ಆಯೋಗದ ಕಾನೂನು ಕೋಶದ ಮುಖ್ಯಸ್ಥರ ನೇಮಕ ಆದೇಶ ಹೊರಡಿಸುವರೆಗೆ ಆಯೋಗದ ಸಭೆಗಳಿಗೆ ಹಾಜರಾಗುವುದಿಲ್ಲವೆಂದು ಪತ್ರ ನೀಡಿದ್ದ ಸದಸ್ಯರಾದ ವಿಜಯಕುಮಾರ್‌ ಡಿ. ಕುಚನೂರೆ, ಎಂ.ಬಿ. ಹೆಗ್ಗಣ್ಣವರ, ಡಾ. ಎಚ್‌.ಎಸ್‌. ನರೇಂದ್ರ, ಬಿ.ವಿ. ಗೀತಾ ಮತ್ತು ಮುಸ್ತಫಾ ಹುಸೇನ್‌ ಸಯ್ಯದ್‌ ಅಝೀಜ್‌ ಗೈರಾದರು.

2023-24ನೇ ಸಾಲಿನ ಗ್ರೂಪ್‌ ‘ಎ’ ಮತ್ತು ‘ಬಿ’ ವೃಂದದ ಗೆಜೆಟೆಡ್‌ ಪ್ರೊಬೇಷನರಿ ಒಟ್ಟು 384 ಹುದ್ದೆಗಳಿಗೆ ಸಂಬಂಧಿಸಿದಂತೆ ನೇಮಕಾತಿ ಅಧಿಸೂಚನೆ ಹೊರಡಿಸಲು ಮತ್ತು ಈ ನೇಮಕಾತಿ ಪ್ರಕ್ರಿಯೆಗಳಿಗೆ ಕಾರ್ಯದರ್ಶಿ ಸಿದ್ಧಪಡಿಸಿರುವ ತಾತ್ಕಾಲಿಕ ವೇಳಾಪಟ್ಟಿಗೂ ಅನುಮೋದನೆ ನೀಡಲಾಗಿದ್ದು, ಅದರಂತೆ ಕ್ರಮ ವಹಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದ ವಿವಿಧ ಇಲಾಖೆಗಳಿಂದ ಗ್ರೂಪ್‌ ‘ಎ’, ‘ಬಿ’, ‘ಸಿ’ ವೃಂದದ ಹುದ್ದೆಗಳ ಭರ್ತಿಗೆ ಬಂದ ಪ್ರಸ್ತಾವನೆಗಳಲ್ಲಿ ಕ್ರಮಬದ್ಧವಾದವುಗಳಿಗೆ ಕೂಡಲೇ ಅಧಿಸೂಚನೆ ಹೊರಡಿಸಲು ಅನುಮೋದನೆ ನೀಡಲಾಗಿದೆ. ಪೌರಾಡಳಿತ ನಿರ್ದೇಶನಾಲಯದಲ್ಲಿನ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಪ್ರಥಮ ದರ್ಜೆ ಕಂದಾಯ ನಿರೀಕ್ಷಕರ 37 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಪಟ್ಟಿ ಮತ್ತು ಅಲ್ಪಸಂಖ್ಯಾತ ನಿರ್ದೇಶನಾಲಯದಲ್ಲಿ ಮೊರಾರ್ಜಿ ವಸತಿ ಶಾಲೆಗಳಲ್ಲಿನ ವಿದ್ಯಾರ್ಥಿನಿಲಯಗಳ ನಿಲಯ ಪಾಲಕರು 50 ಹುದ್ದೆಗಳ ನೇಮಕಾತಿಗೆ ಹೆಚ್ಚುವರಿ ಆಯ್ಕೆ ಪಟ್ಟಿ ಸಿದ್ಧಪಡಿಸಿ ಪ್ರಕಟಿಸಲು ಅನುಮೋದನೆ ನೀಡಲಾಗಿದೆ. ಅಲ್ಲದೆ, ಜ. 31ರಂದು ನಡೆದಿದ್ದ ಆಯೋಗದ ಸಭೆಯಲ್ಲಿ ವಿವಿಧ ಒಂಬತ್ತು ನೇಮಕಾತಿ ಅಧಿಸೂಚನೆಗಳ ಅಂತಿಮ ಆಯ್ಕೆ ಪಟ್ಟಿಗೆ ಅನುಮೋದನೆ ನೀಡಿ, ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿತ್ತು. ಆ ಸಭೆಯ ನಡಾವಳಿಯನ್ನೂ ಸ್ಥಿರೀಕರಿಸಲಾಯಿತು ಎಂದು ಗೊತ್ತಾಗಿದೆ. 

‘ಆಯೋಗದ ಕಾನೂನು ಕೋಶದ ಮುಖ್ಯಸ್ಥ ಹುದ್ದೆಯ ಭರ್ತಿಗೆ ನ. 15ರಂದು ಹೊರಡಿಸಿದ್ದ ಅಧಿಸೂಚನೆ ಹಿಂಪಡೆದು ಜ. 9ರಂದು ಹೊಸದಾಗಿ ಹೊರಡಿಸಲಾಗಿತ್ತು. ಈ ಕುರಿತು ಚರ್ಚೆ ನಡೆದಿದ್ದು, ಹೊಸ ಅಧಿಸೂಚನೆಯಂತೆ ಆಯ್ಕೆ ಪ್ರಕ್ರಿಯೆ ಕೈಗೊಳ್ಳಲು ತೀರ್ಮಾನಿಸಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.