ADVERTISEMENT

ಕೆಪಿಎಸ್‌ಸಿ: ಲಘು ಲಾಠಿ ಪ್ರಹಾರ

ನೇಮಕಾತಿಗೆ ನಡೆಸಿದ ಪರೀಕ್ಷೆಯ ಫಲಿತಾಂಶ ತಕ್ಷಣ ಪ್ರಕಟಿಸುವಂತೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2022, 19:42 IST
Last Updated 25 ಜುಲೈ 2022, 19:42 IST
ಕೆಪಿಎಸ್‌ಸಿ ಪ್ರವೇಶದ್ವಾರದ ಬಳಿ ಪ್ರತಿಭಟನೆ ನಡೆಸಿದ ಭವ್ಯಾ ನರಸಿಂಹಮೂರ್ತಿ ಮತ್ತು ಉದ್ಯೋಗಾಕಾಂಕ್ಷಿಗಳನ್ನು ಪೊಲೀಸರು ವಶಕ್ಕೆ ಪಡೆದರು –ಪ್ರಜಾವಾಣಿ ಚಿತ್ರ
ಕೆಪಿಎಸ್‌ಸಿ ಪ್ರವೇಶದ್ವಾರದ ಬಳಿ ಪ್ರತಿಭಟನೆ ನಡೆಸಿದ ಭವ್ಯಾ ನರಸಿಂಹಮೂರ್ತಿ ಮತ್ತು ಉದ್ಯೋಗಾಕಾಂಕ್ಷಿಗಳನ್ನು ಪೊಲೀಸರು ವಶಕ್ಕೆ ಪಡೆದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಪರೀಕ್ಷೆ ನಡೆಸಿ ಹಲವು ತಿಂಗಳು ಕಳೆದರೂ ಫಲಿತಾಂಶ ಪ್ರಕಟಿಸಿಲ್ಲವೆಂದು ರೊಚ್ಚಿಗೆದ್ದು, ಕೆಪಿಎಸ್‌ಸಿ ಪ್ರವೇಶದ್ವಾರ ಎದುರು ಸೋಮವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿದ 500ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳ ಭವಿಷ್ಯದ ಜೊತೆ ಕೆಪಿಎಸ್‌ಸಿ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಯುವ ನಾಯಕಿ ಭವ್ಯಾ ನರಸಿಂಹಮೂರ್ತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಭಿತ್ತಿಪತ್ರಗಳನ್ನು
ಹಿಡಿದು ಅಭ್ಯರ್ಥಿಗಳು ಕೆಪಿಎಸ್‌ಸಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಕೆಪಿಎಸ್‌ಸಿ ಅಧಿಕಾರಿಯೊಬ್ಬರು ಸ್ಥಳಕ್ಕೆ ಬಂದು ಫಲಿತಾಂಶ ಪ್ರಕಟಿಸಲು ಒಂದು ವಾರ ಸಮಯಾವಕಾಶ ಕೋರಿದರೂ ಸಮಾಧಾನಗೊಳ್ಳದ ಪ್ರತಿಭನಾಕಾರರು, ತಕ್ಷಣ ಫಲಿತಾಂಶ ಪ್ರಕಟಿಸುವಂತೆ ಒತ್ತಾಯಿಸಿದರು. ಅಲ್ಲದೆ, ಕೆಪಿಎಸ್‌ಸಿ ಕಾರ್ಯದರ್ಶಿ ವಿಕಾಸ್‌ ಕಿಶೋರ್ ಸುರಾಳ್ಕರ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು.

ADVERTISEMENT

ಆ ಬಳಿಕ ಸ್ಥಳಕ್ಕೆ ಬಂದ ವಿಕಾಸ್ ಕಿಶೋರ್, ‘ಕಳೆದ ವಾರವಷ್ಟೆ ನಾನು ಅಧಿಕಾರ ವಹಿಸಿಕೊಂಡಿದ್ದೇನೆ. ಫಲಿತಾಂಶ ಪ್ರಕಟಿಸುವ ‍ಪ್ರಕ್ರಿಯೆಯತ್ತ ಕಾರ್ಯೋನ್ಮುಖರಾಗಿದ್ದೇವೆ‌. ಸೋಮವಾರದ ಒಳಗೆ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ ನಡೆದ ಮುಖ್ಯ ಪರೀಕ್ಷೆಯ ಫಲಿತಾಂಶ ಕೊಡುತ್ತೇವೆ. ಅಲ್ಲದೆ, ಉಳಿದ ಫಲಿತಾಂಶ ಪ್ರಕಟಣೆಗೆ ಸಂಬಂಧಿಸಿದಂತೆ ಮಾಹಿತಿ ನೀಡುತ್ತೇವೆ’ ಎಂದು ಭರವಸೆ ನೀಡಿದರು.

ಕಾರ್ಯದರ್ಶಿಯ ಭರವಸೆಯ ನಂತರವೂ ಪ್ರತಿಭಟನೆ ಮುಂದುವರಿದಾಗ ಸ್ಥಳಕ್ಕೆ ಬಂದ ಪೊಲೀಸರು, ಇಲ್ಲಿ ಪ್ರತಿಭಟನೆಗೆ ಅವಕಾಶ ಇಲ್ಲ. ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುವಂತೆ ಎಚ್ಚರಿಕೆ ನೀಡಿದರು. ಅದನ್ನು ಲೆಕ್ಕಿಸದೆ ಪ್ರತಿಭಟನಕಾರರು ಘೋಷಣೆ ಕೂಗಿದಾಗ, ಗುಂಪು ಚದುರಿಸಲು ಪೊಲೀಸರು ಮುಂದಾದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ಮಾತಿನ ಚಕಮಕಿ, ತಳ್ಳಾಟ, ನೂಕಾಟ ನಡೆಯಿತು.ಪ್ರತಿಭಟನಾಕಾರರ ಕೆನ್ನೆಗೆ ಪೊಲೀಸರು ಬಾರಿಸಿದ್ದು ಸಂಘರ್ಷಕ್ಕೆ ಕಾರಣವಾಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಬೀಸಿದರು. ಅಲ್ಲದೆ, ಭವ್ಯಾ ನರಸಿಂಹಮೂರ್ತಿ ಮತ್ತು ಕೆಲವು ಪ್ರತಿಭಟನಕಾರರನ್ನು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದರು.

ಬೆಂಗಳೂರು, ಮೈಸೂರು, ಬೀದರ್‌, ರಾಯಚೂರು, ಹೊಸಪೇಟೆ, ತುಮಕೂರು, ಕೋಲಾರ, ಚಿಕ್ಕಮಗಳೂರು ಮುಂತಾದ ಕಡೆಗ ಳಿಂದಲೂ ಅಭ್ಯರ್ಥಿಗಳು ಬಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.