ADVERTISEMENT

ಕೆಪಿಎಸ್‌ಸಿ ಪರೀಕ್ಷೆ | ಎಡವಟ್ಟು ಮತ್ತಷ್ಟು ಬಯಲು; ಪ್ರಶ್ನೆಗಳೇ ತದ್ವಿರುದ್ಧ

ಅಭ್ಯರ್ಥಿಗಳ ಆಕ್ರೋಶ; ಮರು ಪರೀಕ್ಷೆಗೆ ಆಗ್ರಹ

ಸೂರ್ಯನಾರಾಯಣ ವಿ.
Published 28 ಆಗಸ್ಟ್ 2024, 23:30 IST
Last Updated 28 ಆಗಸ್ಟ್ 2024, 23:30 IST
ಪ್ರಶ್ನೆಯೊಂದರಲ್ಲಿ state assembly ಅನ್ನು ರಾಜ್ಯ ಸಭೆ ಎಂದು ಅನುವಾದ ಮಾಡಿರುವುದು
ಪ್ರಶ್ನೆಯೊಂದರಲ್ಲಿ state assembly ಅನ್ನು ರಾಜ್ಯ ಸಭೆ ಎಂದು ಅನುವಾದ ಮಾಡಿರುವುದು   

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು 384 ಗೆಜೆಟೆಡ್‌ ‍ಪ್ರೊಬೇಷನರಿ ಹುದ್ದೆಗಳ ನೇಮಕಾತಿಗಾಗಿ ಮಂಗಳವಾರ ನಡೆಸಿದ್ದ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಪತ್ರಿಕೆಯ ಪ್ರಶ್ನೆಗಳನ್ನು ಕನ್ನಡಕ್ಕೆ ಅನುವಾದ ಮಾಡುವಾಗ ಆಗಿರುವ ಮತ್ತಷ್ಟು ಎಡವಟ್ಟುಗಳು ಬಯಲಾಗಿವೆ. 

ಎರಡೂ ಪ್ರಶ್ನೆ ಪತ್ರಿಕೆಗಳಲ್ಲೂ ಹಲವಾರು ತಪ್ಪುಗಳು ನುಸುಳಿದ್ದು, ಕೆಲವು ಪ್ರಶ್ನೆಗಳು ಮತ್ತು ಉತ್ತರದ ಆಯ್ಕೆಗಳು ಇಂಗ್ಲಿಷ್‌ ಮತ್ತು ಕನ್ನಡದಲ್ಲಿ ತದ್ವಿರುದ್ಧವಾಗಿವೆ. ಇನ್ನೂ ಕೆಲವು ಪ್ರಶ್ನೆಗಳು, ಉತ್ತರದ ಆಯ್ಕೆಗಳು ಅರ್ಥವೇ ಆಗದಂತಿವೆ. 

ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ಪ್ರಶ್ನೆಪತ್ರಿಕೆಗಳಲ್ಲಿನ ತಪ್ಪುಗಳನ್ನು ಉಲ್ಲೇಖಿಸಿ ವಾಟ್ಸ್ಆ್ಯಪ್‌ ಗ್ರೂಪ್‌ಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಮಾಡಿ  ಕೆಪಿಎಸ್‌ಸಿ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.  ತಪ್ಪಾಗಿರುವ ಪ್ರಶ್ನೆಗಳನ್ನು ಗುರುತು ಮಾಡಿ ಪ್ರಶ್ನೆಪತ್ರಿಕೆಗಳ ಪುಟಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ADVERTISEMENT

ಉದಾ–1 (ಪ್ರಶ್ನೆ ಪತ್ರಿಕೆ–2)

ಇಂಗ್ಲಿಷ್ ಪ್ರಶ್ನೆ: Which of the following statements are ‘incorrect’ about the state Finance Commission?

ಕನ್ನಡದಲ್ಲಿ ಪ್ರಶ್ನೆ: ‘ರಾಜ್ಯ ಹಣಕಾಸು ಆಯೋಗಕ್ಕೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ‘ಸರಿ‘ಯಾಗಿದೆ/ವೆ?’

(ಇಂಗ್ಲಿಷ್‌ನಲ್ಲಿ ತಪ್ಪು ಹೇಳಿಕೆಗಳು ಯಾವುವು ಎಂದು ಕೇಳಿದ್ದರೆ, ಕನ್ನಡದಲ್ಲಿ ಸರಿ ಹೇಳಿಕೆಗಳು ಯಾವುವು ಎಂದು ಕೇಳಲಾಗಿದೆ)

ಉದಾ–2 (ಪ್ರಶ್ನೆ ಪತ್ರಿಕೆ–2) 

ಪ್ರಶ್ನೆ: ‘ದೊಡ್ಡ ಗಾತ್ರದ ಹೆಬ್ಬಕಕ್ಕೆ (GIB) ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?’ 

ಉತ್ತರದ ಮೊದಲ (ಎ) ಆಯ್ಕೆ ಕನ್ನಡ:  ‌‘ಇದು ಅತ್ಯಂತ ವೇಗವಾಗಿ ಹಾರಾಡುವ ಪಕ್ಷಿಗಳಲ್ಲಿ ಒಂದಾಗಿದೆ‘ 

ಇಂಗ್ಲಿಷ್‌: It is one of the heaviest flying birds

(ಇಂಗ್ಲಿಷ್‌ನಲ್ಲಿ ಅತ್ಯಂತ ಭಾರದ ಪಕ್ಷಿಗಳಲ್ಲಿ ಒಂದು ಎಂದು ಹೇಳಿದ್ದರೆ, ಕನ್ನಡಕ್ಕೆ ಅನುವಾದ ಮಾಡುವಾಗ ವೇಗವಾಗಿ ಹಾರಾಡುವ ಪಕ್ಷಿ ಎಂದು ಉಲ್ಲೇಖಿಸಲಾಗಿದೆ)

ಉದಾ–3 (ಪ್ರಶ್ನೆ ಪತ್ರಿಕೆ–1)

ಇಂಗ್ಲಿಷ್‌ ಪ್ರಶ್ನೆ: Consider the scenario of a State assembly with a total seat of 100.

Year of General Election to state assembly

ಕನ್ನಡ ಪ್ರಶ್ನೆ: ಒಟ್ಟು 100 ಸ್ಥಾನವನ್ನು ಹೊಂದಿರುವ ಒಂದು ರಾಜ್ಯಸಭೆಯ ಸವಿವರವಾದ ವರ್ಣನೆಯನ್ನು ಪರಿಗಣಿಸಿ.

ರಾಜ್ಯಸಭೆಯ ಸಾರ್ವತ್ರಿಕ ಚುನಾವಣೆಯ ವರ್ಷ

(ಇಲ್ಲಿ state assembly ಪದಗಳನ್ನು ರಾಜ್ಯಸಭೆ ಎಂದು ಕನ್ನಡದಲ್ಲಿ ಬರೆಯಲಾಗಿದೆ)

ಉದಾ –4 (ಪ್ರಶ್ನೆ ಪತ್ರಿಕೆ–1)

ಇಂಗ್ಲಿಷ್‌ ‍ಪ್ರಶ್ನೆ: Which of the following statements is/are correct with reference to the Permanent Lok Adalat?

A.  The Permanent Lok Adalat were set up after the Lok Adalat Act 2002

ಕನ್ನಡದಲ್ಲಿ ಇದೇ ಪ್ರಶ್ನೆಯ (ಎ) ಆಯ್ಕೆ: ಲೋಕ್‌ ಅದಾಲತ್‌ ಅಧಿನಿಯಮ 2022ರ ನಂತರ ಖಾಯಂ ಲೋಕ್‌ ಅದಾಲತ್‌ ಸ್ಥಾಪಿಸಲಾಯಿತು. 

(ಇಂಗ್ಲಿಷ್‌ನಲ್ಲಿ 2002 ಎಂದಿದ್ದರೆ ಕನ್ನಡದಲ್ಲಿ 2022 ಎಂದಿದೆ)

ಉದಾ–5 (ಪ್ರಶ್ನೆ ಪತ್ರಿಕೆ–2)

ಇಂಗ್ಲಿಷ್‌ ಪ್ರಶ್ನೆ: Consider the following statements about National Family Health Survey-5 (NFHS)

ಆಯ್ಕೆ C. In Karnataka nearly 30% of men and women (between 15-49 years of age) are overweight or obese

ಕನ್ನಡ ಪ್ರಶ್ನೆ: ಆಯ್ಕೆ ಸಿ. ಕರ್ನಾಟಕದಲ್ಲಿ ಸರಿ ಸುಮಾರು ಪುರುಷ ಮತ್ತು ಮಹಿಳೆಯರು (15–49 ವರ್ಷಗಳ ವಯಸ್ಸಿನ ನಡುವೆ ಇರುವ) ಶೇ 30ರಷ್ಟಿದ್ದಾರೆ

(ಇಲ್ಲಿ  overweight (ಅತಿತೂಕ) or obese (ಸ್ಥೂಲಕಾಯರಾಗಿದ್ದಾರೆ) ಎಂಬ ಪದಗಳನ್ನು ಕನ್ನಡಕ್ಕೆ ಅನುವಾದ ಮಾಡಿಲ್ಲ) 

ಉದಾ–6 (ಪ್ರಶ್ನೆ ಪತ್ರಿಕೆ–2)

ಪ್ರಶ್ನೆಯೊಂದರ ಪ್ಯಾರಾ ಇಂಗ್ಲಿಷ್‌ನಲ್ಲಿ ಈ ರೀತಿ ಇದೆ: What delight is there like the revelation of books for the sudden impact of a master spirit, the sense of window flung wide open to the universe? It is the adventures of mind, the joy of which does not pass away, that give the adventure of life itself, beauty and frangrance.

ಕನ್ನಡದಲ್ಲಿ ಈ ಪ್ಯಾರಾದ ಅನುವಾದ ಇಂತಿದೆ: ಮಾಸ್ಟರ್‌ ಸ್ಪಿರಿಟ್‌ (ಪ್ರಭಾವಯುತ ಚೇತನ), ಬ್ರಹ್ಮಾಂಡಕ್ಕೆ ವಿಶಾಲವಾಗಿ ತೆರೆದಿರುವ ಜ್ಞಾನದ ಕಿಟಕಿಯಿಂದ ಹೊರಟಿದ ಪ್ರಜ್ಞೆಯ ಹಠಾತ್‌ ಪ್ರಭಾವಕ್ಕಾಗಿ ಪ್ರಸ್ತಕಗಳ ಜ್ಞಾನಪ್ರಕಾಶದಂತೆ ಯಾವುದು ನಿಮಗೆ ಹೆಚ್ಚು ಸಂತೋಷದಾಯಕವಾಗಿದೆ? ಅದು ಮನಸ್ಸಿನ ಸಾಹಸಗಳು, ಸ್ವತಃ ಜೀವನಕ್ಕೆ ಸಾಹಸವನ್ನು ಸೌಂದರ್ಯವನ್ನು ಮತ್ತು ಪರಿಮಳವನ್ನು ನೀಡುವ, ಹಾದುಹೋಗದಂಥ ಅದರ ಸಂತೋಷವಾಗಿದೆ.

ಇವು ಕೆಲವು ಉದಾಹರಣೆಗಳಷ್ಟೇ, ಪ್ರಶ್ನೆ ಪತ್ರಿಕೆಗಳನ್ನು ಓದುತ್ತಾ ಹೋದಂತೆ ಇಂತಹ ಹಲವು ಎಡವಟ್ಟುಗಳು ಕಾಣಸಿಗುತ್ತವೆ. 

ಈ ಪ್ರಶ್ನೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್‌ ಪ್ರಶ್ನೆಗಳು ತದ್ವಿರುದ್ಧವಾಗಿದೆ
ಲೋಕ ಅದಾಲತ್‌ಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಯ ಉತ್ತರದ ಆಯ್ಕೆಯಲ್ಲಿನ ಇಸವಿ ಕನ್ನಡದಲ್ಲಿ 2022 ಇದ್ದರೆ ಇಂಗ್ಲಿಷ್‌ನಲ್ಲಿ 2002 ಎಂದಿದೆ
ಕುಟುಂಬ ಆರೋಗ್ಯ ಸಮೀಕ್ಷೆಗೆ ಸಂಬಂಧಿಸಿದ ಪ್ರಶ್ನೆಯ ಉತ್ತರದ ಆಯ್ಕೆಯೊಂದರ ಭಾಷಾಂತರದಲ್ಲಿ ತಪ್ಪಾಗಿರುವುದು
ಪುರುಷೋತ್ತಮ ಬಿಳಿಮಲೆ

ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಕೆಪಿಎಸ್‌ಸಿ ಧೋರಣೆಗೆ ಖಂಡನೆ ವಿವರಣೆ ಕೇಳಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ 

ಮರುಪರೀಕ್ಷೆಗೆ ಆಗ್ರಹ ಕನ್ನಡದಲ್ಲಿ ಪೂರ್ವಭಾವಿ ಪರೀಕ್ಷೆ ಬರೆದಿರುವ ಹಲವು ಅಭ್ಯರ್ಥಿಗಳು ಮತ್ತೆ ಪರೀಕ್ಷೆ ನಡೆಸುವಂತೆ ಆಗ್ರಹಿಸಿದ್ದಾರೆ.  ‘ನಾನು ಗ್ರಾಮೀಣ ಪ್ರದೇಶದಿಂದ ಬಂದವಳು. ಕನ್ನಡ ಮಾಧ್ಯಮದಲ್ಲಿ ಓದಿದ್ದೇನೆ. ತುಂಬಾ ನಿರೀಕ್ಷೆ ಇಟ್ಟುಕೊಂಡು ಈ ಬಾರಿ ಕೆಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದೆ. ಆದರೆ ಪರೀಕ್ಷೆಯಲ್ಲಿ ಕೊಟ್ಟ ಪ್ರಶ್ನೆಪತ್ರಿಕೆಗಳಲ್ಲಿದ್ದ ಕನ್ನಡವನ್ನು ಓದಲು ಸಾಧ್ಯವಾಗದೇ ಅತ್ತ ಇಂಗ್ಲಿಷ್‌ ಗೊತ್ತಿಲ್ಲದೇ ಪರದಾಡಿದೆ. ಕೆಲವು ಪ್ರಶ್ನೆಗಳು ಇಂಗ್ಲಿಷ್‌ನಲ್ಲಿ ಒಂದು ರೀತಿ ಇದ್ದರೆ ಕನ್ನಡದಲ್ಲಿ ವಿರುದ್ಧವಾಗಿತ್ತು. ಕೆಪಿಸಿಎಸ್‌ಸಿಯು ತನ್ನ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸಿ ನನ್ನಂತಹ ಹಲವರ ಭವಿಷ್ಯವನ್ನೇ ಮಂಕಾಗಿಸಿದೆ. ತಾವು ಹೇಳಿದಂತೆಯೇ ನಡೆಯಬೇಕು ಎಂದುಕೊಳ್ಳುವ ಅಧಿಕಾರಿಗಳು ನೂರಾರು ಬಡ ಮಕ್ಕಳ ಭವಿಷ್ಯಕ್ಕೆ ಕಲ್ಲುಹಾಕಿದ್ದಾರೆ. ಮತ್ತೆ ಪರೀಕ್ಷೆ ನಡೆಸಿ ನಮಗೆ ನ್ಯಾಯ ಕೊಡಿಸಬೇಕು’ ಎಂದು ಪರೀಕ್ಷೆ ಬರೆದಿರುವ ಮೈಸೂರಿನ ಅಭ್ಯರ್ಥಿ ಶಶಿ ‘ಪ್ರಜಾವಾಣಿ’ಗೆ ತಿಳಿಸಿದರು.  ‘ಪ್ರಶ್ನೆ ಪತ್ರಿಕೆಗಳಲ್ಲಿ ತಪ್ಪು ಒಂದೆಡೆಯಾದರೆ ನಾವು ಪರೀಕ್ಷೆ ಬರೆದ ಕೇಂದ್ರದಲ್ಲಿ ಪ್ರಶ್ನೆ ಪತ್ರಿಕೆಯನ್ನು 15 ನಿಮಿಷ ತಡವಾಗಿ ನೀಡಿದರು. ಪರೀಕ್ಷಾ ಕೊಠಡಿಯೊಳಕ್ಕೆ ತರುವುದರ ಮುನ್ನವೇ ಪ್ರಶ್ನೆ ಪತ್ರಿಕೆ ಕಟ್ಟನ್ನು ಬಿಚ್ಚಲಾಗಿತ್ತು. ಪರೀಕ್ಷೆ ನಿಯಮಬದ್ಧವಾಗಿ ನಡೆದಿಲ್ಲ. ಗ್ರಾಮೀಣ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಮತ್ತೊಮ್ಮೆ ಪರೀಕ್ಷೆ ನಡೆಸಬೇಕು’ ಎಂದು ಚಿಕ್ಕಬಳ್ಳಾಪುರದ ಅಭ್ಯರ್ಥಿ ಪ್ರವೀಣ್‌ ಒತ್ತಾಯಿಸಿದರು. 

‘ತಪ್ಪು ಅಕ್ಷಮ್ಯ ವರದಿ ಕೇಳಿದ್ದೇನೆ’ ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ‘ಸರ್ಕಾರದ ಅಂಗಸಂಸ್ಥೆಯೊಂದರಿಂದಲೇ ಆಗಿರುವ ಈ ತಪ್ಪು ಅಕ್ಷಮ್ಯ. ಇದನ್ನು ಖಂಡಿಸಿ ನಾನು ಕೆಪಿಎಸ್‌ಸಿ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದು ಪ್ರಶ್ನೆ ಪತ್ರಿಕೆಗಳ ಕನ್ನಡದ ಪ್ರಶ್ನೆಗಳಲ್ಲಿ ಅಷ್ಟೊಂದು ತಪ್ಪು ಹೇಗಾಯಿತು? ಅದನ್ನು ಸರಿಪಡಿಸಲು ಕ್ರಮ ಕೈಗೊಂಡಿರುವುದರ ಬಗ್ಗೆ ಮೂರು ದಿನಗಳ ಒಳಗೆ ವರದಿ ನೀಡುವಂತೆ ಕೇಳಿದ್ದೇನೆ’ ಎಂದರು.  ‘ಕೆಪಿಎಸ್‌ಸಿ ರಾಜ್ಯದ್ದೇ ಸಂಸ್ಥೆ. ಇಲ್ಲಿ ಕನ್ನಡ ಆಡಳಿತ ಭಾಷೆ. ಹೀಗಿರುವಾಗ ಪ್ರಶ್ನೆಪತ್ರಿಕೆಗಳನ್ನು ಮೊದಲು ಕನ್ನಡದಲ್ಲಿ ಸಿದ್ಧಪಡಿಸಿ ನಂತರ ಇಂಗ್ಲಿಷ್‌ಗೆ ಅನುವಾದಿಸಬೇಕಿತ್ತು. ನಮ್ಮಲ್ಲಿ ತಜ್ಞ ಅನುವಾದಕರು ಭಾಷಾ ತಜ್ಞರ ಕೊರತೆ ಏನಿಲ್ಲ. ಕೆಪಿಎಸ್‌ಸಿಯು ಅನುವಾದಕ್ಕೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಗೂಗಲ್‌ ಟ್ರಾನ್ಸ್‌ಲೇಟ್‌ ಅನ್ನು ಬಳಸಿದೆ ಎಂದು ತಿಳಿದು ಬಂದಿದೆ. ಕೆಪಿಎಸ್‌ಸಿಯ ಈ ಧೋರಣೆಯು ಇಂಗ್ಲಿಷ್‌ ಕಲಿತ ನಗರದ ಜನರನ್ನು ಕೇಂದ್ರೀಕರಿಸಿದಂತೆ ಇದೆ. ಕನ್ನಡದಲ್ಲಿ ಓದಿರುವ ಗ್ರಾಮೀಣ ಅಭ್ಯರ್ಥಿಗಳು ಕೆಎಎಸ್‌ ಅಧಿಕಾರಿಗಳಾಗುವುದು ಅದಕ್ಕೆ ಬೇಡ ಎಂದೆನಿಸುತ್ತದೆ. ಇದು ಖಂಡನೀಯ’ ಎಂದು ಹೇಳಿದರು. ಕೆಪಿಎಸ್‌ಸಿ ಕಾರ್ಯದರ್ಶಿಯವರಿಗೆ ಬರೆದ ಪತ್ರದಲ್ಲಿ ಅವರು ‘ಪ್ರಜಾವಾಣಿ’ಯ ಬುಧವಾರದ ಸಂಚಿಕೆಯಲ್ಲಿ ಪ್ರಕಟವಾಗಿರುವ ವರದಿಯನ್ನು ಲಗತ್ತಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.