ADVERTISEMENT

PV Web Exclusive| ಕೆಪಿಎಸ್ಸಿ: ಅಕ್ರಮ ಸಕ್ರಮಕ್ಕೆ ಗರಡಿ

ರವೀಂದ್ರ ಭಟ್ಟ
Published 19 ಸೆಪ್ಟೆಂಬರ್ 2020, 14:19 IST
Last Updated 19 ಸೆಪ್ಟೆಂಬರ್ 2020, 14:19 IST
ಕೆಪಿಎಸ್‌ಸಿ
ಕೆಪಿಎಸ್‌ಸಿ    

2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಆರೋಪ ಎದುರಿಸುತ್ತಿರುವ ಕರ್ನಾಟಕ ಲೋಕಸೇವಾ ಆಯೋಗದ ಅಂದಿನ ಅಧ್ಯಕ್ಷ ಮತ್ತು ಸದಸ್ಯರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಬೇಕೇ ಬೇಡವೇ ಎನ್ನುವುದರ ಬಗ್ಗೆ ಪರಿಶೀಲನೆ ನಡೆಸಲು ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ. ಇದು ಹಲವಾರು ಅನುಮಾನಕ್ಕೆ ಕಾರಣವಾಗಿದೆ.

ಈ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎನ್ನುವುದನ್ನು ಸಿಐಡಿ ತನಿಖೆ ಸಾಬೀತು ಮಾಡಿದೆ. ಅದನ್ನು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಗಳೂ ಒಪ್ಪಿಕೊಂಡಿವೆ. ಸಿಐಡಿ ತನಿಖಾ ವರದಿಯ ಆಧಾರದಲ್ಲಿ ನೇಮಕಾತಿ ಪಟ್ಟಿಯನ್ನು ರದ್ದು ಮಾಡಲಾಗಿದೆ. ಅಲ್ಲದೆ ಅಂದಿನ ಅಧ್ಯಕ್ಷರು ಮತ್ತು ಸದಸ್ಯರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿ ಒಮ್ಮೆ ರಾಜ್ಯಪಾಲರಿಗೂ ಶಿಫಾರಸು ಮಾಡಲಾಗಿತ್ತು. ಕಾನೂನಿನ ಪ್ರಕಾರ ಇಂತಹ ಶಿಫಾರಸನ್ನು ರಾಷ್ಟ್ರಪತಿ ಅವರಿಗೇ ಮಾಡಬೇಕು. ಅದನ್ನೇ ಅಸ್ತ್ರವಾಗಿಟ್ಟುಕೊಂಡು ಈಗಾಗಲೇ ಎಲ್ಲವೂ ಮುಗಿದು ಹೋಗಿರುವ ಪ್ರಕರಣದಲ್ಲಿ ಎಲ್ಲಿಯಾದರೂ ಜೀವ ಇದೆಯಾ ಎನ್ನುವುದನ್ನು ಹುಡುಕಲು ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ. ಕ್ರಮದಲ್ಲಿ ಭಾಗಿಯಾದವರನ್ನು ಉಳಿಸಲು ಏನಾದರೂ ನೆಪ ಸಿಗಬಹುದೇ ಎನ್ನುವುದನ್ನು ಹುಡುಕುವುದೇ ಸಮಿತಿಯ ಉದ್ದೇಶ ಎಂದು ಯಾರಾದರೂ ಭಾವಿಸಿದರೆ ತಪ್ಪು ಎನ್ನಲಾಗದು. ಅಕ್ರಮ ಪ್ರಕರಣವನ್ನು ಕೈಬಿಡುವ ಮೂಲಕ ಆ ಸಾಲಿನಲ್ಲಿ ಆಯ್ಕೆಯಾದ ಎಲ್ಲರಿಗೂ ನೇಮಕಾತಿ ಆದೇಶ ನೀಡಲು ದಾರಿಗಳನ್ನು ಹುಡುಕಲಾಗುತ್ತಿದೆ ಎಂದೂ ಭಾವಿಸಲಾಗಿದೆ. ಅಕ್ರಮ ಸಕ್ರಮಕ್ಕೆ ಎಷ್ಟೆಲ್ಲಾ ಕಸರತ್ತು!

ಕರ್ನಾಟಕ ಲೋಕಸೇವಾ ಆಯೋಗ ಹಲವು ದಶಕಗಳಿಂದ ವಿವಾದಗಳ ಗೂಡೇ ಆಗಿದೆ. ಅದಕ್ಕೆ ಕಾಯಕಲ್ಪ ನೀಡಲು ಗಂಭೀರ ಪ್ರಯತ್ನವನ್ನು ಯಾರೂ ಮಾಡಿಲ್ಲ. ಪ್ರತಿ ಬಾರಿ ಅಕ್ರಮ ನಡೆದಾಗಲೂ ಅಭ್ಯರ್ಥಿಗಳ ಮೇಲಿನ ಸಹಾನುಭೂತಿಯನ್ನು ವ್ಯಕ್ತಪಡಿಸಿ ನೇಮಕಾತಿ ಆದೇಶ ನೀಡಲಾಗುತ್ತದೆಯೇ ವಿನಾ ವ್ಯವಸ್ಥೆಯನ್ನು ಸುಧಾರಿಸಲು ಆಲೋಚನೆ ಕಾಣಿಸುತ್ತಿಲ್ಲ. ಅಕ್ರಮ ಸಕ್ರಮ ಮಾಡಲು ತೋರಿಸುವ ಕಾಳಜಿ ಸುಧಾರಣೆಗೆ ದಾರಿ ಕಾಣುತ್ತಿಲ್ಲವಲ್ಲ ಯಾಕೆ?

ADVERTISEMENT

2011ನೇ ಸಾಲಿನ ಅಕ್ರಮಗಳ ಬಗ್ಗೆ ತನಿಖೆ ನಡೆಸಿದ್ದ ಸಿಐಡಿ, ಸಾಕ್ಷ್ಯಾಧಾರಗಳ ಸಹಿತ ಸಾವಿರಾರು ಪುಟಗಳ ಕರಡು ದೋಷಾರೋಪ ಪಟ್ಟಿ ಸಿದ್ಧಪಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಕೆಪಿಎಸ್‌ಸಿಯ ಅಂದಿನ ಅಧ್ಯಕ್ಷರು ಮತ್ತು ಸದಸ್ಯರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ 1988ರ 19(1) ಸೆಕ್ಷನ್ ಮತ್ತು ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) 1973ರ ಸೆಕ್ಷನ್197ರ ಅಡಿಯಲ್ಲಿ ಕೇಸು ದಾಖಲಿಸಿಕೊಂಡು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕೇ, ಬೇಡವೇ ಎನ್ನುವುದು ಸಂಪುಟ ಉಪ ಸಮಿತಿ ಮುಂದಿರುವ ಪ್ರಶ್ನೆ.

ಕೆಪಿಎಸ್‌ಸಿ 2014ರ ಮಾರ್ಚ್ 21ರಂದು 362 ಹುದ್ದೆಗಳ ನೇಮಕಾತಿಗೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿತ್ತು. ಅಕ್ರಮ ನಡೆದಿರುವುದು ಸಿಐಡಿ ತನಿಖೆಯಿಂದ ಸಾಬೀತಾಗಿದ್ದರಿಂದ ನೇಮಕಾತಿ ಅಧಿಸೂಚನೆಯನ್ನು ಸರ್ಕಾರ 2014ರ ಆ. 14ರಂದು ರದ್ದುಗೊಳಿಸಿತ್ತು. ಅದನ್ನು ಪ್ರಶ್ನಿಸಿ ಆಯ್ಕೆಯಾಗಿದ್ದ ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿ ಪರಿಗಣಿಸಿ, ಕೆಎಟಿ 2016ರ ಅ. 19ರಂದು ಸರ್ಕಾರದ ಆದೇಶವನ್ನು ವಜಾಗೊಳಿಸಿ, ಆಯ್ಕೆಯಾದವರನ್ನು ನೇಮಕಾತಿ ಮಾಡಿಕೊಳ್ಳುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಹುದ್ದೆ ವಂಚಿದ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌, 2017ರ ಮಾರ್ಚ್ 9ರಂದು ನೇಮಕಾತಿ ರದ್ದುಪಡಿಸಿತ್ತು. ಅಲ್ಲದೆ, ಎಲ್ಲ ಮಧ್ಯಂತರ ಅರ್ಜಿಗಳನ್ನು 2019ರ ಜುಲೈ 13ರಂದು ವಜಾಗೊಳಿಸಿತ್ತು. ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ ಅಗಸ್ಟ್‌ 9ರಂದು ವಜಾಗೊಳಿಸಿತ್ತು. ಅಲ್ಲಿಗೆ ಆ ಪ್ರಕರಣ ಮುಗಿಯಬೇಕಾಗಿತ್ತು. ಆದರೆ ಹಾಗಾಗಲಿಲ್ಲ. ಆಗಾಗ ಈ ಪ್ರಕರಣಕ್ಕೆ ಜೀವ ಕೊಡುವ ಪ್ರಯತ್ನ ನಡೆಯುತ್ತಲೇ ಇರುತ್ತದೆ.

ಕಳೆದ ಮಾರ್ಚ್ ತಿಂಗಳಿನಲ್ಲಿ ನಡೆದ ವಿಧಾನ ಮಂಡಲದ ಅಧಿವೇಶನದಲ್ಲಿ ಸದಸ್ಯರು ಪಕ್ಷಭೇದವಿಲ್ಲದೆ ಈ ವಿಷಯ ಪ್ರಸ್ತಾಪಿಸಿ ನೇಮಕಾತಿ ಆದೇಶ ನೀಡುವಂತೆ ಒತ್ತಾಯಿಸಿದ್ದರು. ಕೆಪಿಎಸ್ಸಿ ಮಾಡಿದ ತಪ್ಪಿಗೆ ಅಭ್ಯರ್ಥಿಗಳು ಬಲಿಯಾಗಬಾರದು ಎಂದೂ ವಾದಿಸಿದ್ದರು. ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ಆದೇಶ ಮಾಡಿದ್ದ ಹಾಗೂ ನೇಮಕಾತಿಯನ್ನು ಪಟ್ಟಿಯನ್ನು ರದ್ದು ಮಾಡಿದ್ದ ಸಿದ್ದರಾಮಯ್ಯ ಕೂಡ ನೇಮಕಾತಿ ಆದೇಶ ನೀಡುವಂತೆ ಒತ್ತಾಯಿಸಿದ್ದರು.

ಆಯ್ಕೆಯಾದ 362 ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ ಎಂದು ನೇಮಕಾತಿ ಆದೇಶ ನೀಡುವ ಬಗ್ಗೆಯೇ ನಮ್ಮ ರಾಜಕಾರಣಿಗಳ ಮನಸ್ಸು ಓಡುತ್ತಿದೆ. ಆದರೆ ಯಾರಿಗೂ ಕೆಪಿಎಸ್ ಸಿ ಸುಧಾರಿಸುವ ಬಗ್ಗೆ ಆಲೋಚನೆಯೇ ಇದ್ದ ಹಾಗೆ ಕಾಣುತ್ತಿಲ್ಲ. ಅಲ್ಲದೆ ಇದು ಕೇವಲ 362 ಅಭ್ಯರ್ಥಿಗಳ ಹಿತದ ಪ್ರಶ್ನೆಯಲ್ಲ. ಪರೀಕ್ಷೆ ಬರೆದ ಲಕ್ಷಾಂತರ ಅಭ್ಯರ್ಥಿಗಳ ಹಿತದ ಪ್ರಶ್ನೆ. 362 ಅಭ್ಯರ್ಥಿಗಳ ಹಿತವನ್ನು ಕಾಯಲು ಹೋಗಿ ಲಕ್ಷಾಂತರ ಅಭ್ಯರ್ಥಿಗಳ ಹಿತಕ್ಕೆ ಕೊಳ್ಳಿ ಇಡುವುದು ಯಾವ ನ್ಯಾಯವೋ ಅರ್ಥವಾಗುವುದಿಲ್ಲ.

ಸಂಪುಟ ಉಪ ಸಮಿತಿ ರಚಿಸುವ ನಿರ್ಧಾರವನ್ನು ಪ್ರಕಟಿಸಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ‘ಈ ಪ್ರಕರಣ ಗಂಭೀರವಾಗಿದ್ದೇನೂ ಅಲ್ಲ. ಹಲವಾರು ಕಾನೂನು ತೊಡಕುಗಳೂ ಇವೆ. ನೇಮಕಾತಿ ಆದೇಶ ನೀಡಿ ಎಂದು ವಿಧಾನ ಮಂಡಲದಲ್ಲಿ ಸದಸ್ಯರು ಒತ್ತಾಯಿಸಿದ್ದರು ಮತ್ತು ಈ ಪ್ರಕರಣದಲ್ಲಿ ಮಹತ್ವದ್ದು ಏನೂ ಇಲ್ಲ ಎಂದೇ ಸಮಿತಿ ರಚಿಸಲಾಗಿದೆ’ ಎಂದು ಹೇಳಿದ್ದರು. ಸಚಿವರ ಹೇಳಿಕೆಯನ್ನು ಗಮನಿಸಿದರೆ ಉಪ ಸಮಿತಿ ಶಿಫಾರಸು ಹೇಗಿರುತ್ತದೆ ಎಂದು ಊಹಿಸುವುದು ಕಷ್ಟ ಅಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.