ಬೆಂಗಳೂರು: ಕೈಗಾರಿಕಾ ತರಬೇತಿ ಹಾಗೂ ಉದ್ಯೋಗ ಇಲಾಖೆ ಅಡಿಯಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ (ಐಟಿಐ) ಖಾಲಿ ಇರುವ 1,520 ಕಿರಿಯ ತರಬೇತಿ ಅಧಿಕಾರಿಗಳ (ಜೆಟಿಒ) ಹುದ್ದೆಗೆ 2019ರಲ್ಲಿ ಪ್ರಕಟಿಸಿದ್ದ ಅಂತಿಮ ಆಯ್ಕೆ ಪಟ್ಟಿಯನ್ನು ಹೈಕೋರ್ಟ್ ನಿರ್ದೇಶನದಂತೆ ಕೆಪಿಎಸ್‌ಸಿ ಪರಿಷ್ಕರಿಸಿದೆ. ಸದ್ಯ ಹುದ್ದೆಯಲ್ಲಿರುವ 177 ಅಭ್ಯರ್ಥಿಗಳು ಹೊಸ ಪಟ್ಟಿಯಿಂದ ಹೊರಗುಳಿದಿದ್ದಾರೆ.
ರಾಜ್ಯದ ವಿವಿಧೆಡೆಗಳಲ್ಲಿರುವ ಐಟಿಐ ಕಾಲೇಜುಗಳಲ್ಲಿ ಕಳೆದ ಒಂದೂವರೆ ವರ್ಷದಿಂದ ಕೆಲಸ ಮಾಡುತ್ತಿರುವ ಈ ಜೆಟಿಒಗಳು ಕೆಲಸ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ.
2019ರ ಆಯ್ಕೆ ಪಟ್ಟಿ ಮತ್ತು ಪರಿಷ್ಕೃತ ಆಯ್ಕೆ ಪಟ್ಟಿ ಎರಡರಲ್ಲೂ 463 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಈ ಪೈಕಿ 399 ಮಂದಿ (2019ರ ಪಟ್ಟಿಯ ಅನ್ವಯ) ನೇಮಕಾತಿ ಆದೇಶ ಪಡೆದು ಕೆಲಸ ಮಾಡುತ್ತಿದ್ದಾರೆ. ಪರಿಷ್ಕೃತ ಪಟ್ಟಿಯಲ್ಲಿ ಈ 399ರಲ್ಲಿ 177 ಮಂದಿಯ ಹೆಸರು ಇಲ್ಲ. ಕೇವಲ 222 ಮಂದಿಯ ಹೆಸರಿದೆ.
ಪರಿಷ್ಕೃತ ಪಟ್ಟಿಯಲ್ಲಿರುವ 450 ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ವೃತ್ತಿಗಳಿಗೆ (ಟ್ರೇಡ್) ಆಯ್ಕೆಯಾಗಿದ್ದಾರೆ. ಎಲ್ಲರೂ ಒಂದು ಟ್ರೇಡ್‌ನ್ನು ಆಯ್ಕೆ ಮಾಡಿಕೊಂಡರೆ, ಹಳೆ ಆಯ್ಕೆ ಪಟ್ಟಿಯಲ್ಲಿರುವ ಕೆಲವರ ಹೆಸರು ಪರಿಷ್ಕೃತ ಪಟ್ಟಿಯ ಒಳಗೆ ಬರುವ ಸಾಧ್ಯತೆಯಿದೆ.
ಐಟಿಐಗಳಲ್ಲಿ 23 ವಿವಿಧ ವೃಂದಗಳಲ್ಲಿ ಖಾಲಿ ಇರುವ ಜೆಟಿಒಗಳ ನೇಮಕಾತಿಗೆ 2018 ಫೆ. 19 ರಂದು ಕೆಪಿಎಸ್‍ಸಿ ಅಧಿಸೂಚನೆ ಹೊರಡಿಸಿತ್ತು. ಅರ್ಜಿ ಸಲ್ಲಿಸಿದ್ದ 50 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ 2018 ಡಿ. 27 ರಿಂದ 2019 ಜ. 3ರವರೆಗೆ ಪರೀಕ್ಷೆ ನಡೆದಿತ್ತು. ದಾಖಲೆಗಳ ಪರಿಶೀಲನೆ ಬಳಿಕ ವಿವಿಧ ವೃತ್ತಿಗಳಲ್ಲಿ 1,367 ಅಭ್ಯರ್ಥಿಗಳ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು. ಕೆಲವು ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಹುದ್ದೆಗೆ ಆಯ್ಕೆಯಾಗಿದ್ದರು. ಒಬ್ಬರಿಗೆ ಒಂದು ಹುದ್ದೆ ಎಂದು ಪರಿಗಣಿಸಿದಾಗ ಒಟ್ಟು 945 ಅಭ್ಯರ್ಥಿಗಳು ಆಯ್ಕೆಯಾಗಿದ್ದು, 399 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲಾಗಿತ್ತು. ಇನ್ನೂ 546 ಅಭ್ಯರ್ಥಿಗಳು ನೇಮಕಾತಿ ಆದೇಶಕ್ಕಾಗಿ ಕಾಯುತ್ತಿದ್ದಾರೆ.
ನೇಮಕಾತಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು, ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ ಎಲ್ಲವೂ ಸರಿಯಾಗಿವೆ ಎಂದು ಪ್ರಮಾಣೀಕರಿಸಿದ್ದರೂ, ಸೇವಾನುಭವ ಪ್ರಮಾಣಪತ್ರದಲ್ಲಿ ‘ನಿರ್ದಿಷ್ಟ ಕಾರ್ಯಕ್ಷೇತ್ರದ ಕಾರ್ಯಾನುಭವದಲ್ಲಿ ಸ್ಪಷ್ಟತೆ ಇಲ್ಲ’ ಎಂದು ಕಾರಣ ನೀಡಿ ಹಲವು ಅಭ್ಯರ್ಥಿಗಳನ್ನು ಕೆಪಿಎಸ್‌ಸಿ ತಿರಸ್ಕರಿಸಿತ್ತು. ಕೆಪಿಎಸ್‌ಸಿಯ ಈ ನಡೆಯನ್ನು ಪ್ರಶ್ನಿಸಿ ಹುದ್ದೆಗೆ ಆಯ್ಕೆಯಾಗದ ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.
‘ಹುದ್ದೆಗಳಿಗೆ ಆಯ್ಕೆಯಾದವರಿಗೆ ‘ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟು’ ಎಂಬ ಷರತ್ತು ವಿಧಿಸಿ ನೇಮಕಾತಿ ಆದೇಶ ನೀಡಲಾಗಿದೆ. ಹೀಗಾಗಿ, ಪಟ್ಟಿಯಿಂದ ಹೊರಗುಳಿಯುವವರು ಈ ಷರತ್ತಿಗೆ ಬದ್ಧರಾಗಿರಬೇಕಾಗಿದೆ’ ಎಂದು ಕೈಗಾರಿಕಾ ತರಬೇತಿ ಹಾಗೂ ಉದ್ಯೋಗ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.