ADVERTISEMENT

ಕೆಪಿಎಸ್‌ಸಿ ಕಾರ್ಯದರ್ಶಿ ಲತಾಕುಮಾರಿ ವರ್ಗ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2024, 23:30 IST
Last Updated 5 ಮಾರ್ಚ್ 2024, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಫೆ. 7 ರಿಂದ ರಜೆ ಮೇಲೆ ತೆರಳಿರುವ ಕೆಪಿಎಸ್‌ಸಿ ಕಾರ್ಯದರ್ಶಿ ಕೆ.ಎಸ್‌. ಲತಾಕುಮಾರಿ ಅವರನ್ನು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್‌) ಕಾರ್ಯನಿರ್ವಾಹಕ ನಿರ್ದೇಶಕಿಯಾಗಿ ವರ್ಗಾವಣೆ ಮಾಡಲಾಗಿದೆ.

ಲತಾಕುಮಾರಿ ಅವರು ರಜೆಯಲ್ಲಿ ತೆರಳಿದ ಬಳಿಕ ಕಾರ್ಯದರ್ಶಿ ಹುದ್ದೆಯ ಹೊಣೆಯನ್ನು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ಕೆ. ರಾಕೇಶ್‌ ಕುಮಾರ್‌ ಅವರಿಗೆ ವಹಿಸಲಾಗಿತ್ತು. ಲತಾಕುಮಾರಿ ಅವರನ್ನು ವರ್ಗಾವಣೆ ಮಾಡಿರುವುದರಿಂದ ರಾಕೇಶ್‌ ಕುಮಾರ್‌ ಅವರಿಗೇ ಕಾರ್ಯದರ್ಶಿಯ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.

ADVERTISEMENT

ಕೆಪಿಎಸ್‌ಸಿ ಕಾನೂನು ಕೋಶದ ಮುಖ್ಯಸ್ಥ ಹುದ್ದೆಗೆ ನೇಮಕಾತಿ ವಿಷಯದಲ್ಲಿ ಕೆಪಿಎಸ್‌ಸಿ ಅಧ್ಯಕ್ಷರು ಹಾಗೂ ಕೆಲವು ಸದಸ್ಯರು ಮತ್ತು ಲತಾಕುಮಾರಿ ಮಧ್ಯೆ ಸಂಘರ್ಷ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಫೆ. 7 ರಿಂದ 17ರವರೆಗೆ 10 ದಿನಗಳ ಗಳಿಕೆ ರಜೆಯನ್ನು ಲತಾಕುಮಾರಿ ಅವರಿಗೆ ಸರ್ಕಾರ ಮಂಜೂರು ಮಾಡಿತ್ತು.

‘ರಜೆ ಮುಗಿಸಿ ಮತ್ತೆ ಹುದ್ದೆ ವಹಿಸಿಕೊಳ್ಳಲು ಬಂದಾಗಲೂ ಗಳಿಕೆ ರಜೆ ಮುಂದುವರಿಸುವಂತೆ ಸರ್ಕಾರ ಸೂಚನೆ ನೀಡಿತ್ತು. ಹೀಗಾಗಿ, ಒಲ್ಲದ ಮನಸ್ಸಿನಿಂದ ರಜೆ ಮೇಲೆ ತೆರಳಿದ್ದ ಅವರು, ಈ ಕ್ರಮದಿಂದ ಬೇಸತ್ತು ವರ್ಗಾವಣೆ ಕೋರಿ ಫೆ. 19 ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದರು’ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಕೆಪಿಎಸ್‌ಸಿ ಕಾರ್ಯದರ್ಶಿಯಾಗಿ ನೇಮಕಗೊಂಡ ಆರು ತಿಂಗಳ ಒಳಗೆ ಲತಾ ಕುಮಾರಿ ವರ್ಗಾವಣೆಗೊಂಡಂತಾಗಿದೆ. ಅವರಿಗಿಂತಲೂ ಮೊದಲು ಕೆಪಿಎಸ್‌ಸಿ ಕಾರ್ಯದರ್ಶಿಯಾಗಿದ್ದ ಸುರಳ್ಕರ್‌ ವಿಕಾಸ್‌ ಕಿಶೋರ್‌ ಕೇವಲ 14 ತಿಂಗಳಲ್ಲಿ ವರ್ಗಾವಣೆಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.