ADVERTISEMENT

ಕೆಎಎಸ್‌, ಗೆಜೆಟೆಡ್‌ ಪ್ರೊಬೇಷನರಿ: ರದ್ದಾದ ಪರೀಕ್ಷೆ ವೆಚ್ಚ ₹13.40 ಕೋಟಿ

ಗೆಜೆಟೆಡ್‌ ಪ್ರೊಬೇಷನರಿ ಪೂರ್ವಭಾವಿ ಪರೀಕ್ಷೆ: ನಷ್ಟಕ್ಕೆ ಕಾರಣರಾದವರ ಮೇಲೆ ಇನ್ನೂ ಕ್ರಮ ಇಲ್ಲ

ರಾಜೇಶ್ ರೈ ಚಟ್ಲ
Published 21 ಅಕ್ಟೋಬರ್ 2024, 0:30 IST
Last Updated 21 ಅಕ್ಟೋಬರ್ 2024, 0:30 IST
<div class="paragraphs"><p>ಕರ್ನಾಟಕ ಲೋಕಸೇವಾ ಆಯೋಗ</p></div>

ಕರ್ನಾಟಕ ಲೋಕಸೇವಾ ಆಯೋಗ

   

ಬೆಂಗಳೂರು: ಕೆಎಎಸ್‌ 40 ಹುದ್ದೆಗಳೂ ಸೇರಿ ಗೆಜೆಟೆಡ್‌ ಪ್ರೊಬೇಷನರಿಯ ಒಟ್ಟು 384 ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಆಗಸ್ಟ್‌ 27ರಂದು ನಡೆಸಿದ್ದ ಪೂರ್ವಭಾವಿ ಪರೀಕ್ಷೆಗೆ ₹13.40 ಕೋಟಿ ವೆಚ್ಚವಾಗಿದೆ.

ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರಿಸಿದ ಪ್ರಶ್ನೆ– ಉತ್ತರಗಳಲ್ಲಿ ತಪ್ಪುಗಳು ಕಾಣಿಸಿಕೊಂಡ ಕಾರಣಕ್ಕೆ ಈ ಪರೀಕ್ಷೆಯನ್ನು ರದ್ದುಪಡಿಸಿರುವ ಕೆಪಿಎಸ್‌ಸಿ, ಡಿ. 29ರಂದು ಮರು ಪರೀಕ್ಷೆ ನಡೆಸಲಿದೆ.‌ ಭಾಷಾಂತರದಲ್ಲಿ ಲೋಪ ಉಂಟಾಗಲು ಕಾರಣರಾಗಿ ಭಾರಿ ಮೊತ್ತ ನಷ್ಟವಾಗಲು ಕಾರಣರಾದ ಯಾವುದೇ ಅಧಿಕಾರಿ, ನೌಕರರ ಮೇಲೆ ಕೆಪಿಎಸ್‌ಸಿಯಾಗಲಿ ರಾಜ್ಯ ಸರ್ಕಾರವಾಗಲಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ADVERTISEMENT

ಪರೀಕ್ಷೆ ನಡೆಸಲು ತಗುಲಿದ ವೆಚ್ಚದ ವಿವರವಾದ ಮಾಹಿತಿಯನ್ನು ‌ಕೆಪಿಎಸ್‌ಸಿ ಕಾರ್ಯದರ್ಶಿ ಕೆ. ರಾಕೇಶ್‌ ಕುಮಾರ್‌ ಅವರು ಆಯೋಗದ ಸಭೆಗೆ ಮಂಡಿಸಿದ್ದಾರೆ. ಅವರು ನೀಡಿರುವ ಮಾಹಿತಿ ಪ್ರಕಾರ ಪೂರ್ವಭಾವಿ ಪರೀಕ್ಷೆಯ ಗೌಪ್ಯ ಕಾರ್ಯಗಳಿಗೆ ಮಾತ್ರ ₹5.35 ಕೋಟಿ ವೆಚ್ಚವಾಗಿದೆ. ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ ವಿಷಯ ತಜ್ಞರು, ಪ್ರಶ್ನೆಪತ್ರಿಕೆಯನ್ನು ಭಾಷಾಂತರಿಸಿದ ಭಾಷಾಂತರಕಾರರು ಹಾಗೂ ಪ್ರಶ್ನೆಪತ್ರಿಕೆಗಳು, ನಾಮಿನಲ್‌ ರೋಲ್‌ಗಳು ಮತ್ತು ಒಎಂಆರ್‌ ಶೀಟು ಸರಬರಾಜು ಮಾಡಿದ ಮುದ್ರಕರಿಗೆ ಪಾವತಿಸಿದ ಒಟ್ಟು ಮೊತ್ತವಿದು. 

‘ಪರೀಕ್ಷೆ ನಡೆಸಲು ಇಷ್ಟು ದೊಡ್ಡ ಮೊತ್ತ ವೆಚ್ಚ ಆಗಿರುವುದಕ್ಕೆ ಆಯೋಗದ  ಸದಸ್ಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇಷ್ಟು ಮೊತ್ತ ಆಗಿದೆಯೇ ಎಂದು ಕೆಲವು ಸದಸ್ಯರು ಆಯೋಗದ ಸಭೆಯಲ್ಲಿ ಪ್ರಶ್ನೆ ಎತ್ತಿದ್ದಾರೆ. ಭಾಷಾಂತರ ಲೋಪಕ್ಕೆ ಕಾರಣರಾಗಿ ₹13.40 ಕೋಟಿ ನಷ್ಟವಾಗಲು ಕಾರಣರಾದವರನ್ನು ಗುರುತಿಸಲು ಆಂತರಿಕ ಸಮಿತಿ ರಚಿಸಬೇಕೆಂದು ಕೆಲವರು ಒತ್ತಾಯಿಸಿದ್ದಾರೆ. ಆದರೆ, ಆಯೋಗದ ಸಭೆಯಲ್ಲಿ ಈ ಕುರಿತು ಯಾವುದೇ ತೀರ್ಮಾನ ಆಗಿಲ್ಲ’ ಎಂದು ಕೆಪಿಎಸ್‌ಸಿ ಮೂಲಗಳು ತಿಳಿಸಿವೆ.

ಪ್ರಶ್ನೆಪತ್ರಿಕೆಯಲ್ಲಿನ ಕನ್ನಡ ಅನುವಾದದ ದೋಷಗಳಿಗೆ ಪರೀಕ್ಷಾರ್ಥಿಗಳು ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರವೂ ಸೇರಿದಂತೆ ಕನ್ನಡ ಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಹಾಗಾಗಿ, ಮುಂದಿನ ಎರಡು ತಿಂಗಳುಗಳ ಒಳಗೆ ಮರುಪರೀಕ್ಷೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆ. 2ರಂದೇ ಕೆಪಿಎಸ್‌ಸಿಗೆ ಸೂಚನೆ ನೀಡಿದ್ದರು. ಅಲ್ಲದೆ, ಈ ಲೋಪಗಳಿಗೆ ಕಾರಣರಾದ ಅಧಿಕಾರಿಗಳನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗುವುದು ಎಂದೂ ಹೇಳಿದ್ದರು.

ಪೂರ್ವಭಾವಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳು, ಪ್ರಶ್ನೆಪತ್ರಿಕೆ 1ರಲ್ಲಿ 28 ಮತ್ತು ಪ್ರಶ್ನೆಪತ್ರಿಕೆ 2ರಲ್ಲಿ 29 ಸೇರಿ ಒಟ್ಟು 57 ಪ್ರಶ್ನೆಗಳಲ್ಲಿ ಲೋಪದೋಷಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ, ಈ ಕುರಿತು ಅಭಿಪ್ರಾಯ ಪಡೆಯಲು ಮೂವರು ವಿಷಯ ತಜ್ಞರ ಸಮಿತಿಯನ್ನು ಕೆಪಿಎಸ್‌ಸಿ ನೇಮಿಸಿತ್ತು. ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದಿಸಿದ ಪ್ರಶ್ನೆಗಳ ಪೈಕಿ ಒಟ್ಟು 33ರಲ್ಲಿ ಭಾಷಾಂತರದಲ್ಲಿ ವ್ಯತ್ಯಾಸವಿತ್ತು. ಆದರೂ 23 ಪ್ರಶ್ನೆಗಳ ಸರಿ ಉತ್ತರದಲ್ಲಿ (ಕೀ ಉತ್ತರ) ಯಾವುದೇ ಬದಲಾವಣೆಯ ಅವಶ್ಯಕತೆ ಇಲ್ಲ ಮತ್ತು 10 ಪ್ರಶ್ನೆಗಳ ಕೀ ಉತ್ತರಗಳನ್ನು ಪರಿಷ್ಕರಿಸಬೇಕು ಎಂದು ಈ ಸಮಿತಿ ವರದಿ ನೀಡಿತ್ತು. ಈ ವರದಿಯನ್ನು ಸೆ. 20ರಂದು ರಾಜ್ಯ ಸರ್ಕಾರಕ್ಕೆ ಕೆಪಿಎಸ್‌ಸಿ ಸಲ್ಲಿಸಿತ್ತು.

ಒಟ್ಟು 2,10,910 ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಅರ್ಜಿ ಸಲ್ಲಿಸಿದ್ದರು. ಈ ಪೈಕಿ, 1,31,885 (ಶೇ 62.52) ಅಭ್ಯರ್ಥಿಗಳಷ್ಟೆ ಪೂರ್ವಭಾವಿ ಪರೀಕ್ಷೆಗೆ ಹಾಜರಾಗಿದ್ದರು.

‘ಮರುಪರೀಕ್ಷೆಗೆ ಬೇಕು ₹15 ಕೋಟಿ’

ಕೆಪಿಎಸ್‌ಸಿಗೆ 2024–25ನೇ ಸಾಲಿನಲ್ಲಿ ರಾಜ್ಯ ಸರ್ಕಾರವು ವಿವಿಧ ಉಪ ಲೆಕ್ಕ ಶೀರ್ಷಿಕೆಯಡಿ ಒಟ್ಟು ₹35.87 ಕೋಟಿ ಅನುದಾನ ಹಂಚಿಕೆ ಮಾಡಿದೆ. ಅದರಲ್ಲಿ ಈವರೆಗೆ ₹27.54 ಕೋಟಿ ಬಿಡುಗಡೆ ಮಾಡಿದೆ. ಈವರೆಗೆ ಆಯೋಗ ₹18.48 ಕೋಟಿ ವೆಚ್ಚ ಮಾಡಿದೆ. ಆಯೋಗದ ಬಳಿ ಈಗ ₹9.06 ಕೋಟಿ ಅನುದಾನ ಲಭ್ಯವಿದೆ. ಗೆಜೆಟೆಡ್‌ ಪ್ರೊಬೇಷನರಿ ಪೂರ್ವಭಾವಿ ಪರೀಕ್ಷೆ ನಡೆಸಲು ₹4 ಕೋಟಿಯಿಂದ ₹5 ಕೋಟಿಯಷ್ಟು ವೆಚ್ಚವಾಗಲಿದೆ ಎಂದು ಪರೀಕ್ಷೆಗೂ ಮೊದಲು ಅಂದಾಜು ಮಾಡಲಾಗಿತ್ತು. ಆದರೆ, ಅದರ ಮೂರು ಪಟ್ಟು ವೆಚ್ಚವಾಗಿದೆ. ಮರು ಪರೀಕ್ಷೆ ನಡೆಸಲು ಅಂದಾಜು ₹15 ಕೋಟಿ ವೆಚ್ಚ ಆಗಬಹುದೆಂದು ಅಂದಾಜಿಸಲಾಗಿದೆ ಎಂದು ಕೆಪಿಎಎಸ್‌ಸಿ ಮೂಲಗಳು ಹೇಳಿವೆ.

ಆಯೋಗದ ನಿಯೋಗವು ಸೆ. 30ರಂದು ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಿದೆ. ಈ ವೇಳೆ, ಮರುಪರೀಕ್ಷೆ ನಡೆಸಲು ಅವಶ್ಯವಿರುವ ಆರ್ಥಿಕ ಅನುಮೋದನೆಯನ್ನು ನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಅಲ್ಲದೆ, ಕನ್ನಡ ಅಭ್ಯರ್ಥಿಗಳಿಗೆ ಅನ್ಯಾಯ ಆಗದಂತೆ ಮರುಪರೀಕ್ಷೆ ನಡೆಸಲು ಆಯೋಗದ ಹಂತದಲ್ಲಿ ಕ್ರಮ ತೆಗೆದುಕೊಳ್ಳುವಂತೆ ಕೂಡಾ ನಿರ್ದೇಶನ ನೀಡಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ಜಾಮರ್, ಫ್ರಿಸ್ಕಿಂಗ್, ಫೇಸ್‌ ರೆಕಗ್ನಿಷನ್‌, ಸಿ.ಸಿ.ಟಿ.ವಿ ಕ್ಯಾಮೆರಾ ವೆಚ್ಚ

ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್‌ಗಳನ್ನು ಅಳವಡಿಸುವ ಕಾರ್ಯನಿರ್ವಹಣೆ, ಫ್ರಿಸ್ಕಿಂಗ್‌ (ಅಭ್ಯರ್ಥಿಗಳ ತಪಾಸಣೆ), ಫೇಸ್‌ ರೆಕಗ್ನಿಷನ್‌, ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆಗೂ ಭಾರಿ ಮೊತ್ತ ವ್ಯಯ ಆಗಿದೆ. ಅತಿ ಸೂಕ್ಷ್ಮವೆಂದು ಗುರುತಿಸಿದ ಕೇಂದ್ರಗಳಲ್ಲಿ 46,048 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, ಈ ಕೇಂದ್ರಗಳಲ್ಲಿ ಜಾಮರ್‌ಗಳನ್ನು ಅಳವಡಿಸಲು ತೆರಿಗೆ ಸೇರಿ ₹22,82,139 ವೆಚ್ಚವಾಗಿದೆ. ಎಲ್ಲ 2,10,910 ಅಭ್ಯರ್ಥಿಗಳ ಫ್ರಿಸ್ಕಿಂಗ್‌ಗೆ (ಪ್ರತಿ ಅಭ್ಯರ್ಥಿಗೆ, ಬೆಳಗ್ಗಿನ ಮತ್ತು ಮಧ್ಯಾಹ್ನದ ಪರೀಕ್ಷೆಗೆ) ₹52,72,750, ಫೇಸ್‌ ರೆಕಗ್ನಿಷನ್‌ಗೆ ₹48,50,930, ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲು (ಪ್ರತಿ 24 ಅಭ್ಯರ್ಥಿಗಳಿಗೆ ಒಂದು ಕ್ಯಾಮೆರಾ) ₹1,58,880 ವೆಚ್ಚವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.