ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ (ಕೆಪಿಟಿಸಿಎಲ್) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಕೋರ್ಟ್ ಮೊರೆ ಹೋದ ಅಭ್ಯರ್ಥಿಗಳ ತಿರಸ್ಕೃತಗೊಂಡ ಅರ್ಜಿಗಳನ್ನಷ್ಟೆ ಪುರಸ್ಕರಿಸಿರುವುದಕ್ಕೆ ಇತರ ಅಭ್ಯರ್ಥಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಕೆಪಿಟಿಸಿಎಲ್ ಜೆಇ ಮತ್ತು ಎಇ ಹುದ್ದೆಗಳ ಆಯ್ಕೆಗಾಗಿ ಜುಲೈ 23, 24ರಂದು ನಡೆದಿದ್ದ ನೇಮಕಾತಿ ಪರೀಕ್ಷಾ ಪ್ರಕ್ರಿಯೆಯಲ್ಲಿ 30,933 ಅರ್ಜಿಗಳು ತಿರಸ್ಕೃತಗೊಂಡಿದ್ದವು. ತಾಂತ್ರಿಕ ದೋಷದಿಂದ ಅರ್ಜಿಗಳು ತಿರಸ್ಕೃತಗೊಂಡಿದ್ದು, ಅವುಗಳನ್ನು ಪುರಸ್ಕರಿಸುವಂತೆ ಎಂಟು ಅಭ್ಯರ್ಥಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅವರ ಮನವಿಯನ್ನು ಮಾನ್ಯ ಮಾಡಿದ್ದ ಕೋರ್ಟ್, ತಿರಸ್ಕೃತ ಅರ್ಜಿಗಳನ್ನು ಪರಿಗಣಿಸುವಂತೆ ಸೂಚಿಸಿತ್ತು. ಆದರೆ, ಕೋರ್ಟ್ ಆದೇಶ ತಂದ ಅಭ್ಯರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯಲು ಕೆಪಿಟಿಸಿಎಲ್ ಅವಕಾಶ ನೀಡಿ, ಉಳಿದವರಿಗೆ ಪ್ರವೇಶ ನಿರಾಕರಿಸಿತ್ತು.
ಹಾಗೆಯೇ, ಕೆಪಿಟಿಸಿಎಲ್‌ನ ಕಿರಿಯ ಸಹಾಯಕ ಹುದ್ದೆಗೆ ಸಲ್ಲಿಕೆಯಾಗಿದ್ದ 1,22,857 ಅರ್ಜಿಗಳು ತಿರಸ್ಕೃತವಾಗಿವೆ. ಈ ಹುದ್ದೆಗಳಿಗೆ ಆ.7ರಂದು ಪರೀಕ್ಷೆ ನಡೆಯಲಿದೆ. ತಿರಸ್ಕೃತಗೊಂಡ ಅರ್ಜಿಗಳಲ್ಲಿ ಸುಮಾರು 20 ಸಾವಿರ ಅರ್ಜಿಗಳು ತಾಂತ್ರಿಕ ಲೋಪದಿಂದ ತಿರಸ್ಕೃತಗೊಂಡಿವೆ. ತಮ್ಮ ಅರ್ಜಿಗಳನ್ನು ಪುರಸ್ಕರಿಸುವಂತೆ ಕೆಪಿಟಿಸಿಎಲ್‌ನ ಆಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಿಗೆ ಮನವಿ ಸಲ್ಲಿಸಿದರೂ, ಸ್ಪಂದನೆ ದೊರೆತಿಲ್ಲ ಎನ್ನುವುದು ಅಭ್ಯರ್ಥಿಗಳ ಅಳಲು.
ನೇಮಕಾತಿ ಪ್ರಕ್ರಿಯೆಗೆ ಕೆಪಿಟಿಸಿಎಲ್ ಅಭಿವೃದ್ಧಿಪಡಿಸಿರುವ ಸಾಫ್ಟ್‌ವೇರ್ ವಿರುದ್ದವೂ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಜಾತಿ ಪ್ರಮಾಣಪತ್ರ ಸಲ್ಲಿಸದಿರುವ ಕಾರಣಕ್ಕೆ ನಮ್ಮ ಅರ್ಜಿಗಳುತಿರಸ್ಕೃತವಾಗಿವೆ ಎನ್ನುವ ಕಾರಣ ನೀಡಲಾಗಿದೆ. ಎಲ್ಲ ದಾಖಲೆಗಳನ್ನು ಅಪ್‌ಲೋಡ್ ಮಾಡಿದ ಮೇಲೆ ಹಣ ಕಟ್ಟಲು ಚಲನ್ ದೊರೆಯುವುದು. ಈಗ ಹಣ ಕಟ್ಟಿದ್ದರೂ ಇತರೆ ದಾಖಲೆ ಅಪ್‌ಲೋಡ್ ಮಾಡಿಲ್ಲ ಎಂದರೆ ಹೇಗೆ? ಇದು ಸಾಫ್ಟ್‌ವೇರ್ ಲೋಪ’ ಎನ್ನುತ್ತಾರೆ ಅಭ್ಯರ್ಥಿ ಮುರಳೀಧರ.
‘ಜಾತಿ ಪ್ರಮಾಣಪತ್ರ ಇಲ್ಲವೆಂದರೆ ಸಾಮಾನ್ಯ ವರ್ಗದ ಅಡಿ ಪರೀಕ್ಷೆ ಬರೆಯಲು ಅವಕಾಶ ನೀಡಬಹುದಲ್ಲವೇ? ಇತರೆ ನೇಮಕಾತಿಗಳಲ್ಲಿ ದಾಖಲೆಗಳ ಪರಿಶೀಲನೆ ವೇಳೆ ಜಾತಿ, ಆದಾಯ ಪ್ರಮಾಣಪತ್ರ ಪರಿಗಣಿಸಲಾಗುತ್ತದೆ.ಕೆಪಿಟಿಸಿಎಲ್‌ಗೆ ಮಾತ್ರ ಬೇರೆ ನಿಯಮವೇ? ಅಷ್ಟೊಂದು ಅರ್ಜಿಗಳನ್ನು ತಿರಸ್ಕರಿಸಿದರೆ ನಿರುದ್ಯೋಗಿ ಯುವಕರ ಪಾಡೇನು’ ಎಂದು ಪ್ರಶ್ನಿಸುತ್ತಾರೆ ರಾಜಶೇಖರ್.
ಕಿರಿಯ ಸಹಾಯಕರ ಹುದ್ದೆಗೆ ಪರೀಕ್ಷೆ ನಡೆಯಲು ನಾಲ್ಕು ದಿನಗಳು ಬಾಕಿ ಇದೆ. ಈ ಸಮಯದಲ್ಲಿ ಕೋರ್ಟ್
ಗೆ ಹೋಗಲು ಸಮಯವಿಲ್ಲ. ಹಣ ಹೊಂದಿಸುವುದೂ ಕಷ್ಟ. ಅನುಕೂಲಸ್ಥರು ಮಾತ್ರ ಕೋರ್ಟ್ ಆದೇಶ ತಂದು ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಹಲವರು ಅಸಹಾಯಕತೆ ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.