ADVERTISEMENT

ಕೆಪಿಟಿಸಿಎಲ್ | 404 ಹುದ್ದೆಗಳ ತಾತ್ಕಾಲಿಕ ನೇಮಕಾತಿ ಆದೇಶ ನೀಡಿ: ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2024, 0:30 IST
Last Updated 8 ಫೆಬ್ರುವರಿ 2024, 0:30 IST
<div class="paragraphs"><p>ಹೈಕೋರ್ಟ್ </p></div>

ಹೈಕೋರ್ಟ್

   

ಬೆಂಗಳೂರು: ಕರ್ನಾಟಕ ರಾಜ್ಯ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿನ (ಕೆಪಿಟಿಸಿಎಲ್) 404 ಸಹಾಯಕ ಎಂಜಿನಿಯರ್ ಹುದ್ದೆಗಳ (ಎಇ) ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅರ್ಹ ಅಭ್ಯರ್ಥಿಗಳಿಗೆ ತಾತ್ಕಾಲಿಕ ನೇಮಕಾತಿ ಆದೇಶ ವಿತರಿಸುವಂತೆ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ.

ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ ತಾಲ್ಲೂಕಿನ ಜಿ.ಶ್ರುತಿ ಸೇರಿದಂತೆ 50ಕ್ಕೂ ಹೆಚ್ಚು ಅಭ್ಯರ್ಥಿಗಳು ಸಲ್ಲಿಸಿದ್ದ ಮೇಲ್ಮನವಿಗಳನ್ನು ಮುಖ್ಯ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಹಾಗೂ ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದೆ.

ADVERTISEMENT

‘2023ರ ಜನವರಿ 3ರಂದು ಪ್ರಕಟಿಸಿದ ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಅಂಕಪಟ್ಟಿ ಅನುಸಾರ 404 (313 ಮೂಲ ವೃಂದ, 91 ಕಲ್ಯಾಣ ಕರ್ನಾಟಕ ವೃಂದ) ಅಭ್ಯರ್ಥಿಗಳಿಗೆ ತಾತ್ಕಾಲಿಕ ನೇಮಕಾತಿ ಆದೇಶ ನೀಡಿ’ ಎಂದು ಕೆಪಿಟಿಸಿಎಲ್‌ಗೆ ನ್ಯಾಯಪೀಠ ನಿರ್ದೇಶಿಸಿದೆ.

‘ಈ ನೇಮಕಾತಿಗಳು ಹೈಕೋರ್ಟ್ ನ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತವೆ ಎಂದು ನೇಮಕಾತಿ ಆದೇಶಗಳಲ್ಲಿ ನಮೂದಿಸಬೇಕು. ಒಂದೊಮ್ಮೆ ಮೇಲ್ಮನವಿ ಪುರಸ್ಕೃತಗೊಂಡು ಮೇಲ್ಮನವಿದಾರರು ಆಯ್ಕೆಗೊಂಡರೆ ಸೇವಾ ಹಿರಿತನ ಮತ್ತು ರೋಸ್ಟರ್ ಪಾಲಿಸಬೇಕು’ ಎಂದು ಸೂಚಿಸಿರುವ ನ್ಯಾಯಪೀಠ ವಿಚಾರಣೆಯನ್ನು ಮಾರ್ಚ್ 13ಕ್ಕೆ ಮುಂದೂಡಿದೆ.

ನೇಮಕಾತಿ ಸಂಬಂಧ ಕೆಪಿಟಿಸಿಎಲ್ 2023ರ ಫೆಬ್ರುವರಿ 4ರಂದು ಪ್ರಕಟಿಸಿದ್ದ ತಾತ್ಕಾಲಿಕ ಅರ್ಹತಾ ಪಟ್ಟಿಯನ್ನು ಏಕಸದಸ್ಯ ನ್ಯಾಯಪೀಠ ರದ್ದುಪಡಿಸಿತ್ತು. ಈ ಪಟ್ಟಿಯಲ್ಲಿ ಅರ್ಹತೆ ಪಡೆದಿದ್ದ ಅಭ್ಯರ್ಥಿಗಳು ಈ ಮೇಲ್ಮನವಿ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.