ADVERTISEMENT

ಕೆಪಿಟಿಸಿಎಲ್‌ ವರ್ಗಾವಣೆ; ಒಕ್ಕಲಿಗರಿಗೇ ಮಣೆ

33 ಇಇಗಳಲ್ಲಿ ಪ್ರಬಲ ಸಮುದಾಯದ 18 ಮಂದಿಗೆ ಆಯಕಟ್ಟಿನ ಹುದ್ದೆ

ಜಯಸಿಂಹ ಆರ್.
Published 22 ಜುಲೈ 2024, 0:01 IST
Last Updated 22 ಜುಲೈ 2024, 0:01 IST
ಕೆಪಿಟಿಸಿಎಲ್‌
ಕೆಪಿಟಿಸಿಎಲ್‌   

ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ (ಕೆಪಿಟಿಸಿಎಲ್‌) 33 ಕಾರ್ಯನಿರ್ವಾಹಕ ಎಂಜಿನಿಯರ್‌ಗಳನ್ನು (ಇಇ) ವರ್ಗಾವಣೆ ಮಾಡಿದ್ದು, ಅದರಲ್ಲಿ 18 ಹುದ್ದೆಗಳನ್ನು ಒಕ್ಕಲಿಗ ಅಧಿಕಾರಿಗಳಿಗೇ ನೀಡಲಾಗಿದೆ.

ಬೆಸ್ಕಾಂ ಸೇರಿ ವಿವಿಧ ವಿದ್ಯುತ್‌ ಸರಬರಾಜು ಕಂಪನಿಗಳ (ಎಸ್ಕಾಂ) ಆಯಕಟ್ಟಿನ ಹುದ್ದೆಗಳನ್ನು ಒಕ್ಕಲಿಗ ಸಮುದಾಯದ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಿಗೆ ನೀಡಿದ್ದು, ಇದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಧಿಕಾರಿಗಳಿಗೆ ಅನ್ಯಾಯವಾಗಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರು ಸಲ್ಲಿಕೆಯಾಗಿದೆ.

ಇದೇ 12ರಂದು ಕೆಪಿಟಿಸಿಎಲ್‌, ಇಇಗಳ ವರ್ಗಾವಣೆ ಸಂಬಂಧ ಎರಡು ಆದೇಶಗಳನ್ನು ಹೊರಡಿಸಲಾಗಿದೆ. ಬೆಂಗಳೂರಿನ ವ್ಯಾಪ್ತಿಯಲ್ಲಿ ಮತ್ತು ಬೇರೆ ಜಿಲ್ಲೆಗಳಿಂದ ಬೆಂಗಳೂರಿಗೆ 19 ಇಇಗಳ ವರ್ಗಾವಣೆ ಮಾಡಲಾಗಿದೆ. ಅವರಲ್ಲಿ 17 ಮಂದಿ ಒಕ್ಕಲಿಗ ಸಮುದಾಯದವರಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಬೆಸ್ಕಾಂನಲ್ಲಿ ಬೆಂಗಳೂರು ನಗರದ ವ್ಯಾಪ್ತಿಯಲ್ಲೇ ಒಕ್ಕಲಿಗ ಸಮುದಾಯದ 10 ಇಇಗಳನ್ನು ವಿವಿಧ ವಿಭಾಗಗಳಿಗೆ ವರ್ಗಾವಣೆ ಮಾಡಲಾಗಿದೆ. ಬೇರೆ ಜಿಲ್ಲೆಗಳಿಂದ ಬೆಂಗಳೂರಿಗೆ ಒಕ್ಕಲಿಗ ಸಮುದಾಯದ ಇಬ್ಬರು ಇಇಗಳು ವರ್ಗಾವಣೆಯಾಗಿದ್ದಾರೆ. ಬೇರೆ ಜಿಲ್ಲೆಗಳ ನಡುವೆ ಒಕ್ಕಲಿಗ ಸಮುದಾಯದ ಆರು ಇಇಗಳ ವರ್ಗಾವಣೆ ನಡೆದಿದೆ. ಮುಖ್ಯಮಂತ್ರಿಗೆ ನೀಡಲಾದ ದೂರಿನಲ್ಲಿ, ವರ್ಗಾವಣೆಯಾದ ಅಧಿಕಾರಿಗಳ ಜಾತಿ ವಿವರಗಳನ್ನು ಒಳಗೊಂಡ ದಾಖಲೆಗಳನ್ನೂ ಸಲ್ಲಿಸಲಾಗಿದೆ.

‘ವರ್ಗಾವಣೆ ಪ್ರಕ್ರಿಯೆಯಲ್ಲಿ ಪ್ರಬಲ ಒಕ್ಕಲಿಗ ಸಮುದಾಯಕ್ಕೇ ಮಣೆ ಹಾಕಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗದ ಅಧಿಕಾರಿಗಳನ್ನು ಕಡೆಗಣಿಸಲಾಗಿದೆ. ಈ ಮೂಲಕ ಈ ಸಮುದಾಯಗಳಿಗೆ ಅನ್ಯಾಯ ಮಾಡಲಾಗಿದೆ’ ಎಂದು ದಲಿತ ಸಂಘರ್ಷ ಸಮಿತಿಯ (ಸಂಯೋಜಿತ) ಬೆಂಗಳೂರು ಜಿಲ್ಲಾ ಸಮಿತಿಯು ಮುಖ್ಯಮಂತ್ರಿಯವರಿಗೆ ದೂರು ನೀಡಿದೆ.

‘ಈ ವರ್ಗಾವಣೆ ಪ್ರಕ್ರಿಯೆಯನ್ನು ರದ್ದುಪಡಿಸಿ, ಎಲ್ಲ ಸಮುದಾಯಗಳನ್ನೂ ಒಳಗೊಂಡು ಮತ್ತೆ ವರ್ಗಾವಣೆ ಮಾಡಬೇಕು’ ಎಂದೂ ದೂರಿನಲ್ಲಿ ಆಗ್ರಹಿಸಲಾಗಿದೆ.

ವರ್ಗಾವಣೆಯಲ್ಲಿ ಒಕ್ಕಲಿಗ ಸಮುದಾಯದ ಇಇಗಳಿಗೇ ಆದ್ಯತೆ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿಯವರಿಗೆ ದೂರು ನೀಡಲು ಬೆಸ್ಕಾಂ ವ್ಯಾಪ್ತಿಯಲ್ಲಿ ಕರ್ತವ್ಯದಲ್ಲಿರುವ ಇತರ ಸಮುದಾಯದ ಇಇಗಳು ಪತ್ರವೊಂದನ್ನು ಸಿದ್ದಪಡಿಸಿದ್ದಾರೆ. ಆದರೆ ದೂರು ನೀಡುವ ಮುನ್ನವೇ ಪತ್ರವು ಸೋರಿಕೆಯಾಗಿದೆ. 

‘ಇಂಧನ ಸಚಿವರ ಕಚೇರಿಯಲ್ಲಿ ಒಕ್ಕಲಿಗ ಸಮುದಾಯದ ಅಧಿಕಾರಿಯೊಬ್ಬರು ಇದ್ದಾರೆ. ಅವರು ಬೇರೆಲ್ಲಾ ಸಮುದಾಯಗಳ ಇಇಗಳನ್ನು ಒಳಗೊಂಡಿದ್ದ ವರ್ಗಾವಣೆ ಪಟ್ಟಿಯನ್ನು ಬದಲಿಸಿ, ಒಕ್ಕಲಿಗ ಸಮುದಾಯದ ಇಇಗಳ ಹೆಸರುಗಳನ್ನು ಸೇರಿಸಿದ್ದಾರೆ’ ಎಂದು ಬೆಸ್ಕಾಂನ ಅಧಿಕಾರಿಯೊಬ್ಬರು ಆರೋಪಿಸಿದರು.

‘ಸಾರ್ವತ್ರಿಕ ವರ್ಗಾವಣೆಯಲ್ಲಿ ಸಲ್ಲಿಕೆಯಾದ ಅರ್ಜಿಗಳು ಮತ್ತು ಇಇಗಳ ವರ್ಗಾವಣೆಗೆ ಅನುಸರಿಸಿದ ಮಾನದಂಡಗಳನ್ನು ಪರಿಶೀಲಿಸಬೇಕು. ಆಗ ಇತರ ಸಮುದಾಯದವರಿಗೆ ಅನ್ಯಾಯವಾಗಿರುವುದು ಗೊತ್ತಾಗಲಿದೆ’ ಎಂದು ಅವರು ಹೇಳಿದ್ದಾರೆ.

ಈ ದೂರಿನ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕರಿಗೆ ಕರೆ ಮಾಡಲಾಗಿತ್ತು. ಅವರು ಕರೆ ಸ್ವೀಕರಿಸಲಿಲ್ಲ. ಈ ಸಂಬಂಧ ಕಳುಹಿಸಿದ ಸಂದೇಶಕ್ಕೂ ಪ್ರತಿಕ್ರಿಯೆ ನೀಡಿಲ್ಲ.

ಸಿ.ಎಂ ಅನುಮೋದನೆ ಕಡತಕ್ಕೆ ಕೊಕ್‌

ವಿವಿಧ ವಿದ್ಯುತ್‌ ಸರಬರಾಜು ಕಂಪನಿಗಳ ಕಾರ್ಯನಿರ್ವಾಹಕ ಎಂಜಿನಿಯರ್‌ಗಳ ವರ್ಗಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿದ್ದ ಟಿಪ್ಪಣಿಗಳು ಹಾಗೂ ಮುಖ್ಯಮಂತ್ರಿಯವರು ಅನುಮೋದಿಸಿದ್ದ ಕಡತವನ್ನು ಕಡೆಗಣಿಸಿ ಆದೇಶ ಹೊರಡಿಸಲಾಗಿದೆ ಎಂಬ ಆರೋಪ ದೂರಿನಲ್ಲಿದೆ.

‘ಎಲ್ಲ ಸಮುದಾಯಗಳ ಅಧಿಕಾರಿ ಗಳನ್ನು ಒಳಗೊಂಡಿದ್ದ ವರ್ಗಾವಣೆ ಕಡತವನ್ನು ಮುಖ್ಯಮಂತ್ರಿ ಅನುಮೋದಿ ಸಿದ್ದರು. ಆದರೆ ಇಂಧನ ಇಲಾಖೆಯಲ್ಲಿರುವ ಒಕ್ಕಲಿಗ ಸಮುದಾಯದ ಪ್ರಬಲ ಅಧಿಕಾರಿಯು ಆ ಕಡತವನ್ನು ಕೈಬಿಟ್ಟು, ಯಾರ ಅನುಮೋದನೆಯನ್ನೂ ಪಡೆಯದೆ ಈ ವರ್ಗಾವಣೆ ಪ್ರಕ್ರಿಯೆಯನ್ನು ಮಾಡಿದ್ದಾರೆ’ ಎಂದು ಪತ್ರದಲ್ಲಿ ದೂರಲಾಗಿದೆ.

ಬೆಸ್ಕಾಂ ವ್ಯಾಪ್ತಿಯಲ್ಲಿ ವರ್ಗಾವಣೆ ಆಗಿರುವ ಕಾರ್ಯನಿರ್ವಾಹಕ ಎಂಜಿನಿಯರ್‌ಗಳ ಜಾತಿಗೆ ಸಂಬಂಧಿಸಿದ ಮಾಹಿತಿ ಗೊತ್ತಿಲ್ಲ
ಮಹಾಂತೇಶ ಬೀಳಗಿ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ
ಸಾಮಾಜಿಕ ನ್ಯಾಯ ಎಂಬುದನ್ನು ಬದಿಗೊತ್ತಿ, ಈ ವರ್ಗಾವಣೆ ಪ್ರಕ್ರಿಯೆ ನಡೆಸಲಾಗಿದೆ. ಇದನ್ನು ರದ್ದುಪಡಿಸದೇ ಇದ್ದರೆ, ತೀವ್ರ ಹೋರಾಟ ನಡೆಸುತ್ತೇವೆ
ಎಂ.ರಮೇಶ್ ಜಿಲ್ಲಾ ಸಂಚಾಲಕ, ದಲಿತ ಸಂಘರ್ಷ ಸಮಿತಿ ಬೆಂಗಳೂರು ಜಿಲ್ಲಾ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.