ADVERTISEMENT

‘ತಡವಾಗಿ ಹೋಗಿದ್ದಕ್ಕೆ ಬದುಕಿ ಉಳಿದೆವು’

ಪ್ರಸಾದ ಮುಗಿದ ನಂತರ ದೇಗುಲಕ್ಕೆ ಹೋದವರ ಮಾತು

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2018, 19:30 IST
Last Updated 15 ಡಿಸೆಂಬರ್ 2018, 19:30 IST
   

ಮೈಸೂರು: ‘ದೇವಸ್ಥಾನಕ್ಕೆ ಹೋಗಿದ್ದು ಒಂದೆರಡು ಗಂಟೆಯಷ್ಟು ತಡವಾಯಿತು. ಹೀಗಾಗಿ, ಬದುಕಿ ಉಳಿದೆವು’ ಎಂದು ವಡಕೆಹಳ್ಳ ಗ್ರಾಮದ ಗೋಪಾಲ ನಿಟ್ಟುಸಿರು ಬಿಟ್ಟರು.

ಅಸ್ವಸ್ಥಗೊಂಡವರ ಯೋಗಕ್ಷೇಮ ವಿಚಾರಿಸಲು ಕೆ.ಆರ್.ಆಸ್ಪತ್ರೆಗೆ ಶನಿವಾರ ಬಂದಿದ್ದ ಅವರು ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.‌

‘ತಮಿಳುನಾಡಿನಲ್ಲಿರುವ ಓಂ ಶಕ್ತಿ ದೇವಸ್ಥಾನಕ್ಕೆ ಹೋಗಲು ಗ್ರಾಮದ 68 ಮಂದಿ ಮಾಲೆ ಹಾಕಿಸಿಕೊಂಡಿದ್ದೆವು. ಈ ಪೈಕಿ ಮೊದಲಿಗೆ 28 ಮಂದಿ ಗೂಡ್ಸ್‌ ಆಟೊದಲ್ಲಿ 12 ಕಿ.ಮೀ ದೂರದ ಸುಳ್ವಾಡಿ ಗ್ರಾಮದ ಕಿಚ್‌ಕುತ್ ಮಾರಮ್ಮ ದೇವಾಲಯದ ಗೋಪುರ ನಿರ್ಮಾಣ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹೋದರು. ಇವರಿಗೆಲ್ಲ ಪ್ರಸಾದ ಸಿಕ್ಕಿತು. ನಾವು ಹೋಗುವಷ್ಟರಲ್ಲಿ ಪ್ರಸಾದ ಖಾಲಿಯಾಗಿತ್ತು. ಹೀಗಾಗಿ, ನಮ್ಮ ಜೀವ ಉಳಿಯಿತು’ ಎಂದು ಘಟನೆಯನ್ನು ನೆನಪಿಸಿಕೊಂಡರು.

ADVERTISEMENT

ಸಾಮಾನ್ಯವಾಗಿ ಈ ಭಾಗದಲ್ಲಿ ತಮಿಳುನಾಡಿನಲ್ಲಿರುವ ಓಂಶಕ್ತಿ ದೇವಸ್ಥಾನಕ್ಕೆ ಮಾಲೆ ಹಾಕಿಸಿಕೊಂಡು ವ್ರತವನ್ನು ಆಚರಿಸಿ ಹೊರಡುವುದು ವಾಡಿಕೆ. ಸುತ್ತಮುತ್ತಲ ಗ್ರಾಮದ ಭಕ್ತರು ಓಂಶಕ್ತಿ ದೇಗುಲಕ್ಕೆ ಹೋಗುವುದಕ್ಕೂ ಮುನ್ನ ಕಿಚ್‌ಕುತ್ ಮಾರಮ್ಮ ದೇಗುಲಕ್ಕೆ ಹೋಗುವುದು ಸಂಪ್ರದಾಯ. ಅದರಂತೆ ವಡಕೆಹಳ್ಳದಿಂದ ಮೊದಲಿಗೆ ಹೋದ 28 ಮಂದಿ ಪ್ರಸಾದ ತಿಂದು ಅಸ್ವಸ್ಥರಾಗಿದ್ದಾರೆ. ಇವರಲ್ಲಿ ಐವರು ಮೃತಪಟ್ಟಿದ್ದಾರೆ.

‘ಪ್ರಸಾದ ಖಾಲಿಯಾಯಿತು ಎಂದರು. ಮಾರಮ್ಮಾ ಕಾಪಾಡಮ್ಮ ಎಂದು ದೇಗುಲಕ್ಕೆ ಒಂದು ಸುತ್ತು ಬಂದೆವು. ಅಷ್ಟರಲ್ಲಿ ಮೊದಲು ಪ್ರಸಾದ ತಿಂದವರು ವಾಂತಿ ಮಾಡಿಕೊಳ್ಳುತ್ತಿದ್ದರು’ ಎಂದು ವಡಕೆಹಳ್ಳ ಗ್ರಾಮದ ತಂಗವೇಲು ತಿಳಿಸಿದರು.‌

ಎಲ್ಲಿದ್ದಾರೆ?: ಮೊದಲಿಗೆ ವಾಂತಿ ಮಾಡಿಕೊಳ್ಳುತ್ತಿದ್ದವರನ್ನು ಕಂಡ ಮನೆಯವರು ಎಲ್ಲೋ ಪ್ರಸಾದ ತಯಾರಿಸುವಾಗ ಹಲ್ಲಿ ಬಿದ್ದಿರಬೇಕು, ಇಲ್ಲವೇ ಪಾತ್ರೆಗೆ ಕಿಲುಬು ಹಿಡಿದಿರಬೇಕು. ಒಂದು ಚುಚ್ಚುಮದ್ದು ತೆಗೆದುಕೊಂಡರೆ ಸಾಕು ಎಂದುಕೊಂಡು ಅಸ್ವಸ್ಥರ ಜತೆ ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಯತ್ತ ಬಂದಿರಲಿಲ್ಲ. ಆದರೆ, ಪ್ರಸಾದಕ್ಕೆ ವಿಷ ಸೇರಿಸಿದ್ದಾರೆ ಎನ್ನುವ ಅಂಶ ಮಾಧ್ಯಮಗಳಿಂದ ಗೊತ್ತಾಯಿತೋ ಆಗ ಅಸ್ವಸ್ಥರ ಸಂಬಂಧಿಕರು ಶನಿವಾರ ಆಸ್ಪತ್ರೆಯತ್ತ ಬರತೊಡಗಿದರು. ಬಂದವರಿಗೆ ತಮ್ಮವರು ಎಲ್ಲಿದ್ದಾರೆ ಎಂದು ತಿಳಿಯದೆ ಪರದಾಡಿದರು. ತುರ್ತುಚಿಕಿತ್ಸಾ ಘಟಕದ ಪ್ರವೇಶ ನಿರ್ಬಂಧಿಸಲಾಗಿತ್ತು. ಭದ್ರತಾ ಸಿಬ್ಬಂದಿ ಮೊದಲು ಹೆಸರು ಕೇಳುತ್ತಿದ್ದರು. ಆ ಹೆಸರಿನವರು ಇದ್ದರಷ್ಟೇ ಒಳಗೆ ಬಿಡುತ್ತಿದ್ದರು. ನಗರದ ವಿವಿಧ ಆಸ್ಪತ್ರೆಯಲ್ಲಿ ಅಸ್ವಸ್ಥರು ಚಿಕಿತ್ಸೆ ಪಡೆಯುತ್ತಿದ್ದುದ್ದರಿಂದ ಬಹಳಷ್ಟು ಮಂದಿ ಆಸ್ಪತ್ರೆಗೆ ತೆರಳಲು ಪರದಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.