ADVERTISEMENT

ಪ್ರಸಾದದಲ್ಲಿ ‘ರೋಗರ್‌’ ಕ್ರಿಮಿನಾಶಕ ಬಳಕೆ

ಮೃತರ ಅಂಗಾಂಗಗಳ ಮಾದರಿ ಪ್ರಯೋಗಾಲಯಗಳಿಗೆ ರವಾನೆ

ಕೆ.ಎಸ್.ಗಿರೀಶ್
Published 15 ಡಿಸೆಂಬರ್ 2018, 19:28 IST
Last Updated 15 ಡಿಸೆಂಬರ್ 2018, 19:28 IST
ದೇವಾಲಯದ ಆವರಣದಲ್ಲಿ ಶನಿವಾರ ನೆರೆದಿದ್ದ ಸ್ಥಳೀಯರು
ದೇವಾಲಯದ ಆವರಣದಲ್ಲಿ ಶನಿವಾರ ನೆರೆದಿದ್ದ ಸ್ಥಳೀಯರು   

ಮೈಸೂರು: ಹನೂರು ತಾಲ್ಲೂಕಿನ ಸುಳ್ವಾಡಿ ಗ್ರಾಮದ ಕಿಚ್‌ಕುತ್ ಮಾರಮ್ಮ ದೇವಾಲಯದ ಗೋಪುರ ನಿರ್ಮಾಣದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ನೀಡಲಾದ ಪ್ರಸಾದದಲ್ಲಿ ‘ರೋಗರ್‌’ ಕ್ರಿಮಿನಾಶಕ ಸೇರಿಸಿರುವುದು ದೃಢಪಟ್ಟಿದೆ.

ಶುಕ್ರವಾರ ರಾತ್ರಿ ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಾದ 90ಕ್ಕೂ ಹೆಚ್ಚು ಮಂದಿಗೆ ‘ಆಟ್ರೊಪೈನ್‌ ಸಲ್ಫೇಟ್‌’ ಔಷಧ ನೀಡಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಸಾಮಾನ್ಯವಾಗಿ ‘ಆಟ್ರೊಪೈನ್ ಸಲ್ಫೇಟ್’ ಔಷಧವನ್ನು ‘ಆರ್ಗನೊ ಫಾಸ್ಪರಸ್’ ರಾಸಾಯನಿಕ ಅಂಶಗಳನ್ನು ಸೇವಿಸಿದವರಿಗೆ ನೀಡಲಾಗುತ್ತದೆ. ಈ ರಾಸಾಯನಿಕ ಅಂಶಗಳ ಸಂಯೋಜನೆ ‘ರೋಗರ್’ ಕ್ರಿಮಿನಾಶಕದಲ್ಲಿದೆ. ಹೀಗಾಗಿ, ಪ್ರಸಾದಕ್ಕೆ ಇದನ್ನೇ ಬೆರೆಸಿರುವ ಶಂಕೆ ಮೂಡಿದೆ.

ADVERTISEMENT

ವಿವಿಧ ಆಸ್ಪತ್ರೆಯಲ್ಲಿ ಮೃತಪಟ್ಟ ಮೂವರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮಿದುಳು, ಹೃದಯ, ಜಠರ ಸೇರಿದಂತೆ ಅಂಗಾಂಗಗಳ ಮಾದರಿಗಳನ್ನು ಮೈಸೂರಿನ ವಿಧಿವಿಜ್ಞಾನ ಪ್ರಯೋಗಾಲಯ ಹಾಗೂ ಸಿಸ್ಟೊ ಪೆಥಾಲಜಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಚಿಕಿತ್ಸೆ ನೀಡುವಾಗ ಹೊಟ್ಟೆಯಲ್ಲಿರುವ ರಾಸಾಯನಿಕಗಳನ್ನು ತೆಗೆದಿರುವುದರಿಂದ ಮೇಲ್ನೋಟಕ್ಕೆ ಯಾವ ರಾಸಾಯನಿಕದಿಂದ ಸಾವು ಸಂಭವಿಸಿದೆ ಎಂದು ಹೇಳುವುದು ಕಷ್ಟಕರ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ತಿಳಿಸಿದ್ದಾರೆ.

ಕೇವಲ ಒಂದು ಬಾಟಲ್‌ನಷ್ಟು ಕ್ರಿಮಿನಾಶಕ ಬೆರೆಸಿದರೆ ಇಷ್ಟೊಂದು ಮಂದಿ ಅಸ್ವಸ್ಥರಾಗುತ್ತಿರಲಿಲ್ಲ. ದೊಡ್ಡ ಪ್ರಮಾಣದಲ್ಲಿಯೇ, ವ್ಯವಸ್ಥಿತವಾಗಿ ಬೆರೆಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.

3 ದಿನ ಮಂಪರು: ಅಸ್ವಸ್ಥರಿಗೆ ನೀಡಲಾಗಿರುವ ಆಟ್ರೊಪೈನ್‌ ಸಲ್ಫೇಟ್‌ ಔಷಧದಿಂದ ಕನಿಷ್ಠ 3 ದಿನಗಳ ಕಾಲ ಮಂಪರು ಕವಿದಿರುತ್ತದೆ. ಈ ಸಮಯದಲ್ಲಿ ಕೆಲವರು ಮನಸ್ಸಿನ ಮೇಲೆ ನಿಯಂತ್ರಣ ಕಳೆದುಕೊಳ್ಳುತ್ತಾರೆ. ಹೀಗಾಗಿ, ಮೂರು ದಿನಗಳ ಕಾಲ ಅವರು ನೀಡುವ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಕೆ.ಆರ್.ಆಸ್ಪತ್ರೆ ಸ್ಥಾನಿಕ ವೈದ್ಯಾಧಿಕಾರಿ ಡಾ.ರಾಜೇಶ್‌ಕುಮಾರ್ ತಿಳಿಸಿದರು.

ತನಿಖೆಗೆ ಆಗ್ರಹ: ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಕೆ.ಆರ್.ಆಸ್ಪತ್ರೆಗೆ ಬಂದು ಅಸ್ವಸ್ಥರ ಯೋಗಕ್ಷೇಮ ವಿಚಾರಿಸಿದರು. ‘ಇಂತಹ ಘೋರ ಘಟನೆ ಇತಿಹಾಸದಲ್ಲಿ ಇದೇ ಮೊದಲು. ಉನ್ನತಮಟ್ಟದ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

ಪರಿಹಾರ: ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ಕೆ.ಆರ್.ಆಸ್ಪತ್ರೆಯಲ್ಲಿ ಅಸ್ವಸ್ಥರ ಯೋಗಕ್ಷೇಮ ವಿಚಾರಿಸಿದರು. ಪಕ್ಷದ ವತಿಯಿಂದ ಮೃತಪಟ್ಟವರ ಕುಟುಂಬದವರಿಗೆ ತಲಾ ₹ 1 ಲಕ್ಷ ಪರಿಹಾರ ನೀಡುವುದಾಗಿ ಪ್ರಕಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.