ಮಂಡ್ಯ: ಕೆ.ಆರ್.ಪೇಟೆ ತಾಲ್ಲೂಕು ಆಡಳಿತದಲ್ಲಿ ಪದೇ ಪದೇ ಹಸ್ತಕ್ಷೇಪ ಮಾಡುತ್ತಿದ್ದ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧ ಅಸಮಾಧಾನಗೊಂಡಿರುವ ಶಾಸಕ ಕೆ.ಸಿ.ನಾರಾಯಣಗೌಡ ಬಜೆಟ್ ಅಧಿವೇಶನಕ್ಕೆ ಗೈರುಹಾಜರಾಗಿದ್ದಾರೆ. ಆ ಮೂಲಕ ಸಮ್ಮಿಶ್ರ ಸರ್ಕಾರಕ್ಕೆ ಬೆದರಿಕೆ ಹಾಕುವ ತಂತ್ರ ಅನುಸರಿಸುತ್ತಿದ್ದಾರೆ ಎಂಬ ವಿಷಯ ಕೇಳಿ ಬಂದಿದೆ.
ಶಾಸಕರ ವಿರೋಧದ ನಡುವೆಯೂ ಗ್ರಾಮಾಂತರ ಪೊಲೀಸ್ ಠಾಣೆ ಸಿಪಿಐ, ಕಿಕ್ಕೇರಿ ಠಾಣೆ ಪಿಎಸ್‌ಐ ವರ್ಗಾವಣೆ ಮಾಡಲಾಗಿತ್ತು. ಪುರಸಭೆ ಮುಖ್ಯಾಧಿಕಾರಿ ವರ್ಗಾವಣೆಗೆ ಆರು ತಿಂಗಳಿಂದ ಒತ್ತಾಯಿಸುತ್ತಿದ್ದರೂ ವರ್ಗಾವಣೆ ಮಾಡಿಲ್ಲ. ವಿವಿಧ ಇಲಾಖೆಗಳ ಮುಖ್ಯಸ್ಥರ ಹುದ್ದೆಗಳು ಖಾಲಿ ಇದ್ದರೂ ನೇಮಕವಾಗಿಲ್ಲ. ಈ ಬಗ್ಗೆ ಶಾಸಕರು ಹಲವು ಬಾರಿ ಮುಖ್ಯಮಂತ್ರಿಗೆ ಪತ್ರ ಕೊಟ್ಟಿದ್ದರೂ ಕಿಮ್ಮತ್ತು ಸಿಗಲಿಲ್ಲ. ಯಾವುದೇ ಕಾಮಗಾರಿಯ ಕಡತಗಳಿಗೆ ಮುಖ್ಯಮಂತ್ರಿ ಸಹಿ ಹಾಕಿದರೂ ಅದನ್ನು ರೇವಣ್ಣ ತಡೆಯುತ್ತಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ನಾರಾಯಣಗೌಡ ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದರು. ಅದಕ್ಕಾಗಿ ಅಧಿವೇಶನಕ್ಕೆ ಗೈರಾಗಿದ್ದಾರೆ ಎಂದು ಅವರ ಬೆಂಬಲಿಗರು ತಿಳಿಸಿದ್ದಾರೆ.
ಅನುದಾನಕ್ಕೆ ತಡೆ: ಪುರಸಭೆ ಚುನಾವಣೆಗೂ ಮೊದಲು ಕೆ.ಆರ್.ಪೇಟೆ ಪಟ್ಟಣದಲ್ಲಿ 5 ಸಾವಿರ ಮನೆ ನಿರ್ಮಿಸಲಾಗುವುದು ಎಂದು ಶಾಸಕರು ಜನರಿಗೆ ಭರವಸೆ ಕೊಟ್ಟಿದ್ದರು. ಅದಕ್ಕಾಗಿ ಸರ್ಕಾರರಿಂದ ₹ 55 ಕೋಟಿ ಹಣ ಬಿಡುಗಡೆಯಾಗಿದೆ ಎಂದು ಘೋಷಣೆಯನ್ನೂ ಮಾಡಿದ್ದರು. ಪಟ್ಟಣದಲ್ಲಿ ಪಾದಯಾತ್ರೆ ನಡೆಸಿ ಶೀಘ್ರ ಸುಂದರ ಮನೆ ನಿರ್ಮಿಸಿಕೊಡುವುದಾಗಿ ತಿಳಿಸಿದ್ದರು. ಆದರೆ, ಅಂತಿಮ ಹಂತದಲ್ಲಿ ಮುಖ್ಯಮಂತ್ರಿ ಆ ಕಡತಕ್ಕೆ ಸಹಿ ಹಾಕಲಿಲ್ಲ. ಆದರೆ ಮೇಲುಕೋಟೆ ಕ್ಷೇತ್ರಕ್ಕೆ ₹ 700 ಕೋಟಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಇದರಿಂದಾಗಿ ಮುಖ್ಯಮಂತ್ರಿ ಹಾಗೂ ರೇವಣ್ಣ ವಿರುದ್ಧ ಕಿಡಿಕಾರಿದ್ದರು ಎಂದು ಮೂಲಗಳು ತಿಳಿಸಿವೆ.
ಅಜ್ಞಾತ ಸ್ಥಳಕ್ಕೆ ಶಾಸಕ: ಅನಾರೋಗ್ಯ ಕಾರಣ ಹೇಳಿಕೊಂಡು ಅಜ್ಞಾತವಾಗಿದ್ದಾರೆ. ಎಲ್ಲಿಗೆ ತೆರಳಿದ್ದಾರೆ ಎಂಬ ಮಾಹಿತಿಯನ್ನು ಆಪ್ತರಿಗೂ ನೀಡಿಲ್ಲ. ಆತಂಕಕ್ಕೆ ಒಳಗಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವರ ಸಿ.ಎಸ್.ಪುಟ್ಟರಾಜು ಬುಧವಾರ ಸಂಜೆ ಕೆ.ಆರ್.ಪೇಟೆಯಲ್ಲಿ ಹುಡುಕಿದ್ದಾರೆ. ಆದರೆ ಅವರ ನಿವಾಸಕ್ಕೆ ಬೀಗ ಹಾಕಲಾಗಿತ್ತು. ಮುಂಬೈನಲ್ಲಿದ್ದಾರೆ ಎನ್ನಲಾಗಿದೆ.
ಬೆಂಬಲಿಗರ ಸಭೆ: ಶಾಸಕರ ಬೆಂಬಲಿಗರು ಗುರುವಾರ ಕೆ.ಆರ್.ಪೇಟೆಯಲ್ಲಿ ಸಭೆ ನಡೆಸಿದರು. ಮುಖ್ಯಮಂತ್ರಿ ವಿರುದ್ಧ ಶಾಸಕರಿಗೆ ಅಸಮಾಧಾನ ಇರುವುದು ನಿಜ. ಆದರೆ ಅವರು ಆಪರೇಷನ್ ಕಮಲಕ್ಕೆ ಒಳಗಾಗುವುದಿಲ್ಲ. ಅನುದಾನ ಬಿಡುಗಡೆ ಆಗಲಿಲ್ಲ ಎಂಬ ಕಾರಣಕ್ಕೆ ಬೆದರಿಕೆ ಹಾಕುವ ದೃಷ್ಟಿಯಿಂದ ಮುಂಬೈಗೆ ತೆರಳಿದ್ದಾರೆ. ನಮ್ಮ ಸಂಪರ್ಕಕ್ಕೂ ಸಿಗುತ್ತಿಲ್ಲ. ಶುಕ್ರವಾರ ಬಜೆಟ್ ಅಧಿವೇಶನಕ್ಕೆ ಬರುತ್ತಾರೆ ಎಂಬ ವಿಶ್ವಾಸವಿದೆ ಎಂದು ಜೆಡಿಎಸ್ ಮುಖಂಡರೊಬ್ಬರು ತಿಳಿಸಿದರು.
ಪತ್ತೆಗೆ ತಂಡ ರಚನೆ
ಶಾಸಕರ ಪತ್ತೆಗೆ ಎರಡು ತಂಡ ರಚನೆ ಮಾಡಲಾಗಿದೆ. ಒಂದು ತಂಡ ಪುಣೆಗೆ ತೆರಳಿದ್ದು ಇನ್ನೊಂದು ತಂಡ ಮುಂಬೈಗೆ ತೆರಳಿದೆ. ಅವರನ್ನು ಪತ್ತೆಹಚ್ಚುವ ಹೊಣೆಯನ್ನು ವಿಧಾನ ಪರಿಷತ್ ಸದಸ್ಯರೊಬ್ಬರಿಗೆ ವಹಿಸಲಾಗಿದೆ. ಮುಂಬೈನಲ್ಲಿ ನಾರಾಯಣಗೌಡ 7 ಸ್ಟಾರ್ ಹೋಟೆಲ್ ಹೊಂದಿದ್ದು ಅಲ್ಲಿ ಇರಬಹುದು ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.