ADVERTISEMENT

ಟಿಕೆಟ್‌ ಕಾಯ್ದಿರಿಸಿದ್ದರೂ ಸೀಟು ಸಿಗಲಿಲ್ಲ!

‘ಮಂತ್ರಾಲಯ’ ರೈಲು ಯಾನದ ಕಹಿ ಅನುಭವ ಹಂಚಿಕೊಂಡ ಪ್ರಯಾಣಿಕ

​ಪ್ರಜಾವಾಣಿ ವಾರ್ತೆ
Published 28 ಮೇ 2019, 19:41 IST
Last Updated 28 ಮೇ 2019, 19:41 IST
   

ಬೆಂಗಳೂರು: ಕಾಯ್ದಿರಿಸಿದ್ದ ಟಿಕೆಟ್‌ ಇದ್ದರೂ ರೈಲಿನಲ್ಲಿ ಸೀಟು ಸಿಗದೆ ಪರದಾಡಿದ ಹಿರಿಯ ನಾಗರಿಕರಿಗೆ ಲೋವರ್‌ ಬರ್ತ್‌ ಸಿಗದೆ ತೊಂದರೆಯಾದ ಕಹಿ ಅನುಭವವನ್ನು ಪ್ರಯಾಣಿಕರೊಬ್ಬರು ಪತ್ರದಲ್ಲಿ ಬರೆದು ರೈಲ್ವೆ ಸೇವೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಬೆಂಗಳೂರಿನಿಂದ ಮಂತ್ರಾಲಯಕ್ಕೆ ಪ್ರಯಾಣ ಮಾಡಿದಾಗ ರೈಲಿನಲ್ಲಿದ್ದ ಅವ್ಯವಸ್ಥೆಯ ಬಗ್ಗೆ ನಗರದಟಿ.ಕೆ.ಶಂಕರ್‌ ಬಾಬು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮಗಾದ ಅನ್ಯಾಯಕ್ಕೆ ಪರಿಹಾರ ಪಡೆಯಲು ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.

ಟಿ.ಕೆ.ಶಂಕರ್‌ ಬಾಬು ಅವರು ಕುಟುಂಬ ಸದಸ್ಯರೊಂದಿಗೆ ಇತ್ತೀಚೆಗೆ ಮಂತ್ರಾಲಯಕ್ಕೆ ಹೋಗಿ ಬಂದರು. ಧಾರ್ಮಿಕ ಸ್ಥಳಕ್ಕೆ ರೈಲಿನಲ್ಲಿ ಹೋಗಿ ಬಂದಾಗ ಆಗಿರುವ ಕಹಿ ಅನುಭವದ ಬಗ್ಗೆ ರೈಲ್ವೆ ಇಲಾಖೆಗೆ ಖಾರವಾದ ಪತ್ರ ಬರೆದಿದ್ದಾರೆ.

ADVERTISEMENT

‘ರಿಸರ್ವೇಷನ್‌ ಅಗೈಸ್ಟ್‌ ಕ್ಯಾನ್ಸಲೇಷನ್‌ (ಆರ್‌ಎಸಿ) ವ್ಯವಸ್ಥೆಯಲ್ಲಿ 5 ಟಿಕೆಟ್‌ಗಳನ್ನು(ಪಿಎನ್‌ಆರ್‌ ಸಂಖ್ಯೆ4504792815 ) ಪಡೆದು ಮೇ 25ರ ಸಂಜೆ 5ಕ್ಕೆ ಯಶವಂತಪುರದಿಂದ ಹೊರಟ ರೈಲಿನಲ್ಲಿ ಮಂತ್ರಾಲಯ ರೋಡ್‌ ನಿಲ್ದಾಣಕ್ಕೆ ಪ್ರಯಾಣಿಸಿದ್ದೆವು. ನನ್ನ ಕುಟುಂಬದ ಇಬ್ಬರು ಹಿರಿಯ ನಾಗರಿಕರೂ ನಮ್ಮೊಂದಿಗಿದ್ದರು. ಹಿರಿಯರಿಗೆ ಸ್ಲೀಪರ್‌ ಬರ್ತ್‌ ವ್ಯವಸ್ಥೆ ಮಾಡಿಸಲು ಟಿಕೆಟ್‌ ಪರಿಶೀಲಕರಿಗಾಗಿ (ಟಿ.ಟಿ.ಇ) ಕಾದೆವು. ಅವರು ಮಧ್ಯರಾತ್ರಿ 12.45ಕ್ಕೆ ನಾವಿದ್ದ ಬೋಗಿಗೆ ಬಂದರು. ಅಷ್ಟೊತ್ತಿಗಾಗಲೇ ಪ್ರಯಾಣದ ಅರ್ಧ ದಾರಿ ಕ್ರಮಿಸಿ ಆಗಿತ್ತು. ಟಿ.ಟಿ.ಇ ಅವರು ಇಬ್ಬರು ಹಿರಿಯ ನಾಗರಿರಲ್ಲಿ ಒಬ್ಬರಿಗೆ ಮಾತ್ರ ಸ್ಲೀಪರ್‌ ಬರ್ತ್‌ ವ್ಯವಸ್ಥೆ ಮಾಡಿಕೊಟ್ಟರು. ಅದರಲ್ಲೇ ಹೊಂದಿಕೊಂಡು ಮಂತ್ರಾಲಯ ತಲುಪಿದೆವು’ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

‘ಆರ್‌ಎಸಿ ವ್ಯವಸ್ಥೆಯಲ್ಲಿ ಟಿಕೆಟ್‌ ಕಾಯ್ದಿರಿಸಿದ ಹಿರಿಯ ನಾಗರಿಕರಿಗೆಸ್ಲೀಪರ್‌ ಬರ್ತ್‌ಗಳನ್ನೇ ನೀಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

‘ಮಂತ್ರಾಲಯದಿಂದ ಬೆಂಗಳೂರಿಗೆ(ಕೆಎಸ್‌ಆರ್‌) ಮರುಪ್ರಯಾಣಕ್ಕೆ ನಾಂದೇಡ್‌–ಬೆಂಗಳೂರು ಎಕ್ಸ್‌ಪ್ರೆಸ್‌ನಲ್ಲಿ ಟಿಕೆಟ್‌ ಕಾಯ್ದಿಸಿದ್ದೆವು. ಕಾಯ್ದಿರಿಸುವಾಗ ಹಿರಿಯ ನಾಗರಿಕರಿಗೆ ಲೋವರ್‌ ಬರ್ತ್‌ ನೀಡುವಂತೆ ಕೋರಿದ್ದೆವು. ಆದರೆ, ರೈಲ್ವೆ ಸಿಬ್ಬಂದಿ ಹಿರಿಯರಿಗೆ ಎಸ್‌–8 ಬೋಗಿಯಲ್ಲಿ ಮೇಲಿನ ಬರ್ತ್‌ಗಳನ್ನೆ ಹಂಚಿಕೆ ಮಾಡಿದರು. ಉಳಿದ ಮೂರು ಸೀಟುಗಳನ್ನು ಎಸ್‌–2 ಬೋಗಿಯಲ್ಲಿ ನೀಡಿದ್ದರು’ ಎಂದು ಅವರು ತಿಳಿಸಿದರು.

‘ನಿರೀಕ್ಷಿಸಿದ ಸೀಟು ಸಿಗದಿದ್ದರೂ ಪರವಾಗಿಲ್ಲವೆಂದು ರೈಲು ಹತ್ತಿದಾಗ ಮತ್ತೊಂದು ಆಶ್ಚರ್ಯ ನಮಗೆ ಕಾದಿತ್ತು. ಕಾಯ್ದಿರಿಸಿದ ಸೀಟುಗಳಿದ್ದ ಎಸ್‌1 ನಿಂದ ಎಸ್‌ 8ರ ವರೆಗಿನ ಎಲ್ಲ ಬೋಗಿಗಳು ಕಾಯ್ದಿರಿಸಿದ ಟಿಕೆಟ್‌ಗಳನ್ನು ಖರೀದಿಸದ ಪ್ರಯಾಣಿಕರಿಂದ ತುಂಬಿದ್ದವು. ನಾವು ಒಂದೆರಡು ಗಂಟೆ ಅವರೊಂದಿಗೆ ಜಗಳವಾಡಿ, ನಮ್ಮ ಸೀಟುಗಳನ್ನು ದಕ್ಕಿಸಿಕೊಂಡೆವು. ನಮ್ಮ ಜಗಳ ನಡೆಯುವಾಗ ಟಿ.ಟಿ.ಇ ಮಧ್ಯಪ್ರವೇಶ ಮಾಡಿ, ಹಣ ಕೊಟ್ಟು ಸೀಟು ಕಾಯ್ದಿರಿಸಿದ ನಮಗೆ ಸಹಾಯ ಮಾಡಲೇ ಇಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಟಿ.ಟಿ.ಇ.ಗಳ ವಿರುದ್ಧ ಕ್ರಮ ಜರುಗಿಸಿ’
‘ಟಿ.ಟಿ.ಇ ಜನರಿಂದ ಹಣ ಪಡೆದು ಅವರನ್ನು ರಿಸರ್ವೇಷನ್‌ ಬೋಗಿಗಳಲ್ಲಿ ಬಿಟ್ಟುಕೊಂಡಿದ್ದಾರೆ ಎಂಬ ಅನುಮಾನ ಮೂಡಿತು. ಬೋಗಿಯಲ್ಲಿದ್ದ ಜನರೊಂದಿಗೆ ಜಗಳ ಆಡುತ್ತಲೇ ಬೆಂಗಳೂರಿಗೆ ಬಂದು ತಲುಪಿದೆವು. ಕಾಯ್ದಿರಿಸಿದ ಟಿಕೆಟ್‌ ಇದ್ದರೂ ರೈಲು ಪ್ರಯಾಣದ ವೇಳೆ ಆದ ಕೆಟ್ಟ ಅನುಭವ ಇದಾಗಿತ್ತು’ ಎಂದು ಟಿ.ಕೆ.ಶಂಕರ್‌ ಬಾಬು ತಿಳಿಸಿದರು.

‘ಸರಿಯಾಗಿ ಕಾರ್ಯನಿರ್ವಹಿಸದ ಟಿ.ಟಿ.ಇಗಳ ವಿರುದ್ಧ ಕ್ರಮ ಜರುಗಿಸಬೇಕು. ಇಷ್ಟೆಲ್ಲ ತೊಂದರೆ ಅನುಭವಿಸಿದ ನಮಗೆ ಪರಿಹಾರವಾಗಿ ರೈಲು ಟಿಕೆಟ್‌ಗಳ ಮೊತ್ತ ಮರಳಿಸಬೇಕು. ಇಲ್ಲದಿದ್ದರೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರು ನೀಡುತ್ತೇನೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.